ADVERTISEMENT

ಸಂತ್ರಸ್ತರ ಉಪವಾಸಕ್ಕೆ ನಿರ್ಧಾರ

ಭರವಸೆ ಈಡೇರಿಸದ ಅಧಿಕಾರಿಗಳು, ಜನಪ್ರತಿನಿಧಿಗಳು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 8:17 IST
Last Updated 25 ಮಾರ್ಚ್ 2017, 8:17 IST
ರೈತರಿಗೆ ನೀಡಿರುವ ಕೊರಕಲು ಭೂಮಿಯಲ್ಲಿ ಬಂಡೆಗಳಿಂದ ಮುಚ್ಚುವ ಪ್ರಯತ್ನ ನಡೆಯುತ್ತಿದೆ
ರೈತರಿಗೆ ನೀಡಿರುವ ಕೊರಕಲು ಭೂಮಿಯಲ್ಲಿ ಬಂಡೆಗಳಿಂದ ಮುಚ್ಚುವ ಪ್ರಯತ್ನ ನಡೆಯುತ್ತಿದೆ   

ದೇವನಹಳ್ಳಿ: ಜಿಲ್ಲಾ ಕೇಂದ್ರ ಕಚೇರಿ ಕಟ್ಟಡ ಸಂಕೀರ್ಣಕ್ಕೆ ಭೂಮಿ ನೀಡಿದ ರೈತರು ಸರ್ಕಾರ ನೀಡಿದ ಪರ್ಯಾಯ ಭೂಮಿಯನ್ನು ಹಸನು ಮಾಡದ ಪ್ರಯುಕ್ತ ಉಪವಾಸ ಧರಣಿ ನಡೆಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಬೀರಸಂದ್ರ ಗ್ರಾಮದ ಮಂಜುನಾಥ್‌ಗೌಡ ಮಾತನಾಡಿ, ಎರಡೂವರೆ ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಮತ್ತು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬೀರಸಂದ್ರ ಗ್ರಾಮದ ಎಂಟು ರೈತರನ್ನು ಕರೆಯಿಸಿ ಒತ್ತಾಯ ಪೂರ್ವಕವಾಗಿ ಮನವೊಲಿಸಿದ್ದರು. ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ನಿರಂತರ ಅಲೆದಾಟದ ನಂತರ ಇತ್ತೀಚೆಗೆ ಪರ್ಯಾಯ ವ್ಯವಸ್ಥೆ ಮಾಡಿರುವ ಭೂಮಿಯ ದಾಖಲೆ ಪತ್ರ ನೀಡಿದ್ದಾರೆ.

ನೀಡಿರುವ ಜಾಗ ಅತ್ಯಂತ ಕೊರಕಲು ಗುಂಡಿ ಬಂಡೆಗಳಿಂದ ತುಂಬಿದೆ. ಸಮತಟ್ಟು ಮಾಡಿ ಹಸ್ತಾಂತರಿಸಿ ಎಂದರೆ ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ಗುತ್ತಿಗೆ ಕಂಪೆನಿಯಿಂದಲೆ ರೈತರಿಗೆ ನೀಡಿರುವ ಜಮೀನುಗಳಲ್ಲಿ ಬೃಹತ್ ಗಾತ್ರದ ಕಲ್ಲು ಬಂಡೆಗಳನ್ನು ಉರುಳಿಸಿ ಮುಚ್ಚುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದರು.

ರಾಷ್ಟ್ರೀಯ ಹೆದ್ದಾರಿ 207 ರ ರಸ್ತೆ ಪಕ್ಕದ ಬೆಲೆ ಬಾಳುವ ಕೃಷಿ ಭೂಮಿಯನ್ನು ನೀಡಿ ಇಂತಹ ಅವ್ಯವಸ್ಥೆಯ ಜಮೀನು ಪಡೆದುಕೊಂಡರೂ ಕನಿಷ್ಠ ಬರಿ ಮಣ್ಣು ಮುಚ್ಚುವ ಪ್ರಯತ್ನ ಮಾಡಿದಿದ್ದರೆ ಹೇಗೆ. ನೀಡಿದ ಭರವಸೆ ಈಡೇರಿಸದೆ ಸಚಿವರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಶಾಸಕ, ಜಿಲ್ಲಾ ಪಂಚಾಯಿತಿ ಸದಸ್ಯರು  ಬೊಗಳೆ ಬೀಡುತ್ತಿದ್ದಾರೆ ಎಂದು ದೂರಿದರು.

ಜಿಲ್ಲಾ ಕಚೇರಿ ಕಟ್ಟಡ ಸಂಕೀರ್ಣದ ಕಾಮಗಾರಿಗೆ ಗುಣಮಟ್ಟದ ಮರಳು, ಕಲ್ಲು ಜಲ್ಲಿ ಮತ್ತು ಸಿಮೆಂಟ್‌ ಬಳಸುತ್ತಿಲ್ಲ. ಇಲಾಖೆ ನಿಗದಿ ಪಡಿಸಿದ ಪ್ರಮಾಣದಲ್ಲಿ ಕಬ್ಬಿಣದ ಕಂಬಿ ಬಳಕೆಯಾಗುತ್ತಿಲ್ಲ.  ಕಟ್ಟಡದ ಕಾಮಗಾರಿ ಕಳಪೆಯಾಗಿದ್ದು, ಅನೇಕ ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ಷೇಪಿಸಿದರು.

ಕರ್ನಾಟಕ ಗೃಹ ನಿರ್ಮಾಣ ಮಂಡಳಿ ವತಿಯಿಂದ ಕಾಮಗಾರಿ ನಡೆಸಲಾಗುವುದೆಂದು ಸರ್ಕಾರ ಹೇಳಿತ್ತು, ಪ್ರಸ್ತುತ ಬಿಎಸ್‌ಆರ್ ಖಾಸಗಿ ಕಂಪೆನಿಗೆ ಗುತ್ತಿದೆ ನೀಡಿದೆ. ಕಾಮಗಾರಿ ಪರಿಶೀಲಿಸುವ ನೆಪದಲ್ಲಿ ಬರುವ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಅರಿವಿದ್ದರೂತುಟಿ ಬಿಚ್ಚುತ್ತಿಲ್ಲ ಎಂದು ರೈತ ಶಂಕರಪ್ಪ, ಸುನೀಲ್ ಕುಮಾರ್, ನಾಗೇಶ್, ವೇಣುಗೋಪಾಲ್, ಸರೋಜಮ್ಮ, ಅಂಜುಳಮ್ಮ, ಮುರಳಿ ತಿಳಿಸಿದರು.

*
ಒಂದು ವಾರದೊಳಗೆ ರೈತರ ಭೂಮಿ ಹಸನು ಮಾಡಿ ನೀಡಿದಿದ್ದರೆ ಕಾಮಗಾರಿ ನಡೆಯುತ್ತಿರುವ ಕಚೇರಿ ಎದುರು ಉಪವಾಸ ಧರಣಿ ನಡೆಸಲಾಗುವುದು.
-ಮಂಜುನಾಥ್‌ಗೌಡ, ಬೀರಸಂದ್ರ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT