ADVERTISEMENT

ಸಂವಿಧಾನ ಬಿಕ್ಕಟ್ಟು ಇಲ್ಲ: ಸಚಿವ ಜಯಚಂದ್ರ

ಕಾವೇರಿ ನೀರು ಬಿಡದಂತೆ ಸದನದಲ್ಲಿ ಅಂಗೀಕಾರಗೊಂಡ ನಿರ್ಣಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 10:41 IST
Last Updated 26 ಸೆಪ್ಟೆಂಬರ್ 2016, 10:41 IST
ದೊಡ್ಡಬಳ್ಳಾಪುರದಲ್ಲಿ ಭಾನುವಾರ ನಡೆದ ಲಯನ್ಸ್‌ ಕ್ಲಬ್‌ ಇಂಟರ್‌ ನ್ಯಾಷನಲ್‌ ಶತಮಾನೋತ್ಸವ ಸಂಭ್ರಮಾಚಾರಣೆ–2016 ಸಮಾರಂಭವನ್ನು ಸಾಲುಮರದ ತಿಮ್ಮಕ್ಕ  ಉದ್ಘಾಟಿಸಿದರು. ಕಾನೂನು ಸಚಿವ ಟಿ.ಬಿ. ಜಯಚಂದ್ರ, ಶಾಸಕ ಟಿ. ವೆಂಕಟರಮಣಯ್ಯ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಹುಲಿಕಲ್‌ ನಟರಾಜ್‌ ಮತ್ತಿತರರು ಹಾಜರಿದ್ದರು.
ದೊಡ್ಡಬಳ್ಳಾಪುರದಲ್ಲಿ ಭಾನುವಾರ ನಡೆದ ಲಯನ್ಸ್‌ ಕ್ಲಬ್‌ ಇಂಟರ್‌ ನ್ಯಾಷನಲ್‌ ಶತಮಾನೋತ್ಸವ ಸಂಭ್ರಮಾಚಾರಣೆ–2016 ಸಮಾರಂಭವನ್ನು ಸಾಲುಮರದ ತಿಮ್ಮಕ್ಕ ಉದ್ಘಾಟಿಸಿದರು. ಕಾನೂನು ಸಚಿವ ಟಿ.ಬಿ. ಜಯಚಂದ್ರ, ಶಾಸಕ ಟಿ. ವೆಂಕಟರಮಣಯ್ಯ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಹುಲಿಕಲ್‌ ನಟರಾಜ್‌ ಮತ್ತಿತರರು ಹಾಜರಿದ್ದರು.   

ದೊಡ್ಡಬಳ್ಳಾಪುರ: ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ವಿಧಾನ ಸಭೆಯಲ್ಲಿ ಅಂಗೀಕರಿಸಿರುವ ನಿರ್ಣಯದಿಂದ ಯಾವುದೇ ರೀತಿಯಲ್ಲಿ ಸಂವಿಧಾನ ಬಿಕ್ಕಟ್ಟು ಉಂಟಾಗುವುದಿಲ್ಲ  ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ನಗರದಲ್ಲಿ ಭಾನುವಾರ ಲಯನ್ಸ್‌ ಕ್ಲಬ್‌ ಇಂಟರ್‌ನ್ಯಾಷನಲ್‌ ಶತಮಾನೋತ್ಸವ ಸಂಭ್ರಮಾಚಾರಣೆ–2016 ಸಮಾರಂಭ ಉದ್ಘಾಟನೆಗೆ ಆಗಮಿಸಿದ್ದ ಸಂದರ್ಭ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ವಿರುದ್ದ ಕಾವೇರಿ ನದಿ ನೀರು ಬಿಡುಗಡೆ ಮಾಡಬಾರದೆಂಬ ವಿಚಾರವನ್ನು ಶನಿವಾರ ಕಾನೂನು ತಜ್ಞರೊಂದಿಗೆ ಚರ್ಚಿಸಲಾಗಿದೆ ಎಂದರು.

ಲಯನ್ಸ್‌ ಕ್ಲಬ್‌ ಇಡೀ ವಿಶ್ವದಲ್ಲಿ ಸಾರ್ಥಕ ಸೇವೆ ಮಾಡುತ್ತಿದೆ. ದೃಷ್ಟಿ ಹೀನರಿಗೆ ದೃಷ್ಟಿ ನೀಡುವ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುತ್ತಿದೆ ಎಂದರು.

ಲಯನ್ಸ್‌ ಕ್ಲಬ್‌ ಇಂಟರ್‌ನ್ಯಾಷನಲ್‌ ಶತಮಾನೋತ್ಸವ ಸಮಾರಂಭದ ಅಂಗವಾಗಿ  ರೋಜೀಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿರ್ಮಿಸಿ ಕೊಡಲಾಗಿದ್ದ ಅಕ್ಷರ ದಾಸೋಹ ಕಟ್ಟಡದ ಉದ್ಘಾಟನೆ ಮಾಡಲಾಯಿತು. ಅಂಗನವಾಡಿ ಶಾಲೆಗಳಿಗೆ 100 ಆರೋಗ್ಯ ಕಿಟ್‌, 100 ಜನರಿಂದ ರಕ್ತದಾನ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 100 ಜನ ಅಡುಗೆ ಸಿಬ್ಬಂದಿಗೆ ಸ್ವಚ್ಛತಾ ಕಿಟ್‌ ವಿತರಿಸಲಾಯಿತು.

ಅಲ್ಲದೆ 100 ಜನ ವಿವಿಧ ಕ್ಷೇತ್ರಗಳ ಸಾಧಕರನ್ನು ಅಭಿನಂದಿಸಲಾಯಿತು. 100 ಜನರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ಲಯನ್ಸ್‌ ಆಸ್ಪತ್ರೆ ಆವರಣದಲ್ಲಿ 100 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಸಾಲುಮರದ ತಿಮ್ಮಕ್ಕ ಅವರು ಚಾಲನೆ ನೀಡಿದರು.

ಅಧ್ಯಕ್ಷತೆಯನ್ನು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಹುಲಿಕಲ್‌ ನಟರಾಜ್‌ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಶಾಸಕ ಟಿ. ವೆಂಕಟರಮಣಯ್ಯ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ಲಯನೆಸ್‌ ಕ್ಲಬ್‌ ಅಧ್ಯಕ್ಷೆ ಸಿದ್ದಲಿಂಗಮ್ಮ, ಕಾರ್ಯದರ್ಶಿ ಮಂಜುಳಾಗುಪ್ತ, ಖಜಾಂಚಿ ಚೂಡಾಮಣಿ ನಟರಾಜ್‌, ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಎಸ್‌.ನಟರಾಜ್‌, ಖಜಾಂಚಿ ಕೆ.ವಿ.ಪ್ರಭುಸ್ವಾಮಿ, ಕಣ್ಣು ತಪಾಸಣಾ ಸಮಿತಿ ಅಧ್ಯಕ್ಷ ಪಿ.ಸಿ.ಪುಟ್ಟರುದ್ರಪ್ಪ ಮತ್ತಿತರರು ಭಾಗವಹಿಸಿದ್ದರು.

***
ಇದೇ 27 ರಂದು ಸುಪ್ರಿಂಕೋರ್ಟ್‌ನಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರಣೆ ನಡೆಯಲಿದ್ದು, ರಾಜ್ಯದ ನೀರಿನ ಸಮಸ್ಯೆ ಹಾಗೂ ಶಾಸನ ಸಭೆಯಲ್ಲಿ ನೀರು ಬಿಡದಂತೆ ಅಂಗೀಕರಿಸಿರುವ ನಿರ್ಣಯ ಪತ್ರವನ್ನು ನೀಡಲಿದ್ದೇವೆ.
-ಟಿ.ಬಿ. ಜಯಚಂದ್ರ, ಕಾನೂನು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.