ADVERTISEMENT

ಸಮರ್ಥ ನಾಯಕತ್ವಕ್ಕೆ ಜನಮನ್ನಣೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2017, 7:13 IST
Last Updated 19 ಡಿಸೆಂಬರ್ 2017, 7:13 IST
ದೊಡ್ಡಬಳ್ಳಾಪುರದ ಸಿದ್ದಲಿಂಗಯ್ಯ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು
ದೊಡ್ಡಬಳ್ಳಾಪುರದ ಸಿದ್ದಲಿಂಗಯ್ಯ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು   

ದೊಡ್ಡಬಳ್ಳಾಪುರ: ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿರುವ ಅಂಗವಾಗಿ ಬಿಜೆಪಿ ಕಾರ್ಯಕರ್ತರು ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮಾತನಾಡಿ, ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗಳ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಆಡಳಿತ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಸಮರ್ಥ ನಾಯಕತ್ವಕ್ಕೆ ನೀಡಿದ ಮನ್ನಣೆಯಾಗಿದೆ ಎಂದರು.

ಮುಂದಿನ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರ ಪಡೆಯುವುದು ನಿಶ್ಚಿತ. ಗುಜರಾತ್‌ನಲ್ಲಿ ಬಿಜೆಪಿಯನ್ನು ಮಣಿಸಲು ಹಾರ್ದಿಕ್ ಪಟೇಲ್ ಮೊದ
ಲಾದ ನಾಯಕರು ಮಾಡಿದ್ದ ಯಾವುದೇ ತಂತ್ರಗಾರಿಕೆ ಫಲ ನೀಡಲಿಲ್ಲ ಎಂದರು.

ADVERTISEMENT

ಕಾಂಗ್ರೆಸ್‌ನ ನೂತನ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ಗಾಂಧಿ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ಅವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿರುವುದು ಖಂಡನೀಯ. ರಾಜ್ಯದಲ್ಲಿ ಕಾಂಗ್ರೆಸ್ ಹೇಳಹೆಸರಿಲ್ಲದಂತೆ ಆಗುತ್ತದೆ ಎಂದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ಶಿವಶಂಕರ್ ಮಾತನಾಡಿ, ಇಡೀ ದೇಶವೇ ಮೋದಿ ಅವರ ನಾಯಕತ್ವವನ್ನು ಒಪ್ಪುತ್ತಾ ಬರುತ್ತಿದೆ ಎನ್ನುವುದಕ್ಕೆ ಇತ್ತೀಚೆಗೆ ನಡೆಯುತ್ತಿರುವ ಚುನಾವಣೆಗಳಲ್ಲಿ ಪಕ್ಷ ಜಯಭೇರಿ ಬಾರಿಸುತ್ತಿರುವುದು ಸಾಕ್ಷಿಯಾಗಿದೆ ಎಂದರು.

ದೇಶದಲ್ಲಿ ಭ್ರಷ್ಟಾಚಾರ ರಹಿತವಾದ ಆಡಳಿತ ನೀಡುತ್ತಿರುವುದು ಮೋದಿ ಅವರ ಜನಪ್ರಿಯತೆಗೆ ಹಿಡಿದ ಕನ್ನಡಿ. ದೇಶವನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನಡೆಸುವಲ್ಲಿ ಮೋದಿ ಸಮರ್ಥರಾಗಿದ್ದಾರೆ. ಅಂತೆಯೇ ಬಿಜೆಪಿಯೂ ಉತ್ತಮ ನಾಯಕರನ್ನು ಹೊಂದಿದೆ ಎಂದರು.

ನಗರಸಭೆ ಸದಸ್ಯ ಕೆ.ಬಿ.ಮುದ್ದಪ್ಪ, ಪಕ್ಷದ ರಾಜ್ಯ ಪರಿಷತ್ ಸದಸ್ಯ ಜೋ.ನ.ಮಲ್ಲಿಕಾರ್ಜುನ್, ನಗರ ಘಟಕದ ಅಧ್ಯಕ್ಷ ಕೆ.ಎಚ್.ರಂಗರಾಜು, ಮಹಿಳಾ ಮೋರ್ಚಾ ಜಿಲ್ಲಾ
ಘಟಕದ ಅಧ್ಯಕ್ಷೆ ವತ್ಸಲಾ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಬಂತಿ ವೆಂಕಟೇಶ್, ಮುಖಂಡರಾದ ಕೆ.ಮೋಹನ್, ಗೋಪಿ, ರಾಮದಾಸ್, ಮಹದೇವಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.