ADVERTISEMENT

ಸರ್ಕಾರಿ ಶಾಲಾ ಆವರಣದಲ್ಲಿ ಹೈಟೆಕ್ ಶೌಚಾಲಯ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2017, 5:27 IST
Last Updated 4 ನವೆಂಬರ್ 2017, 5:27 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಮೆಳೇಕೋಟೆ ಗ್ರಾಮದ ಶ್ರೀರಾಮಸುಬ್ಬಯ್ಯ ಸ್ಮಾರಕ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಹೈಟೆಕ್ ಶೌಚಾಲಯ ಕಾಮಗಾರಿಗೆ ಶಾಲೆಯ ಭೂ ದಾನಿಗಳಾದ ರಾಮಶೇಷು ಶಂಕುಸ್ಥಾಪನೆ ನೆರವೇರಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಮೆಳೇಕೋಟೆ ಗ್ರಾಮದ ಶ್ರೀರಾಮಸುಬ್ಬಯ್ಯ ಸ್ಮಾರಕ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಹೈಟೆಕ್ ಶೌಚಾಲಯ ಕಾಮಗಾರಿಗೆ ಶಾಲೆಯ ಭೂ ದಾನಿಗಳಾದ ರಾಮಶೇಷು ಶಂಕುಸ್ಥಾಪನೆ ನೆರವೇರಿಸಿದರು   

ಮೆಳೇಕೋಟೆ (ದೊಡ್ಡಬಳ್ಳಾಪುರ): ತಾಲ್ಲೂಕಿನ ಮೆಳೇಕೋಟೆ ಗ್ರಾಮದ ಶ್ರೀರಾಮಸುಬ್ಬಯ್ಯ ಸ್ಮಾರಕ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹೈಟೆಕ್ ಶೌಚಾಲಯ ಕಾಮಗಾರಿಗೆ ಶಾಲೆಯ ಭೂ ದಾನಿಗಳಾದ ರಾಮಶೇಷು ಶಂಕುಸ್ಥಾಪನೆ ನೆರವೇರಿಸಿದರು.

ಹೈಟೆಕ್ ಶೌಚಾಲಯ ಸುಮಾರು ₹8 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ರಿಟ್ಟಾಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಾರ್ಖಾನೆ ಕಾಮಗಾರಿಯ ಪೂರ್ಣ ವೆಚ್ಚವನ್ನು ಭರಿಸಲಿದೆ. ಗ್ರಾಮದ ಯುವ ಸ್ಫೂರ್ತಿ ಟ್ರಸ್ಟ್, ಶ್ರೀರಾಮಸುಬ್ಬಯ್ಯ ಸ್ಮಾರಕ ಪ್ರೌಢಶಾಲೆ ಸಹಯೋಗದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು.

ಈ ಪ್ರೌಢ ಶಾಲೆಯ ಭೂ ದಾನಿಗಳಾದ ರಾಮಶೇಷು ಮಾತನಾಡಿ, ಜಾಗತೀಕರಣದ ಅಬ್ಬರದಲ್ಲಿ ಸಂಸ್ಕೃತಿ, ಸಂಸ್ಕಾರ ಮತ್ತು ಸಮೃದ್ಧ ಬದುಕಿನ ಕ್ರಮಗಳನ್ನು ಇಂದಿನ ಯುವಕರು ಗಾಳಿಗೆ ತೂರುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಮೆಳೇಕೋಟೆಯ ಯುವಕರ ತಂಡದ ಯುವ ಸ್ಫೂರ್ತಿ ಟ್ರಸ್ಟ್ ಶೈಕ್ಷಣಿಕ ಪ್ರಗತಿ ಸಾಧಿಸುವ ಹಂತದಲ್ಲಿ ಸಮಾಜಿಕ ಸೇವಾ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ADVERTISEMENT

ಅಲ್ಲದೆ ಇವರ ಕಾರ್ಯಗಳು ಇಲ್ಲಿಗೆ ನಿಲ್ಲದೆ ಪ್ರಕೃತಿ ಪೋಷಣೆ, ಪ್ರಗತಿಯನ್ನು ಕಾರ್ಯಾಚರಣೆಗೆ ತಂದಿದ್ದಾರೆ ಎಂದರು. ಇಂತಹ ಯುವ ತಂಡಗಳು ಪ್ರತಿ ಹಳ್ಳಿಗಳಲ್ಲಿ ಇದ್ದಲ್ಲಿ ರಾಜಕೀಯ ಶುದ್ಧೀಕರಣದೊಂದಿಗೆ ಗ್ರಾಮಗಳು ಅಭಿವೃದ್ಧಿಯತ್ತ ಸಾಗುತ್ತವೆ. ಇದರೊಂದಿಗೆ ಮುಂದಿನ ಪೀಳಿಗೆಯನ್ನು ಸಾಮಾಜಿಕವಾಗಿ ತೆರೆದುಕೊಳ್ಳುವಲ್ಲಿ ತರಬೇರಿಗೊಳಿಸುತ್ತಾರೆ ಎಂದು ಯುವ ಸ್ಪೂರ್ತಿ ಟ್ರಸ್ಟ್‌ನ ಕಾರ್ಯಗಳನ್ನು ಶ್ಲಾಘಿಸಿದರು.

ಟ್ರಸ್ಟ್ ಪದಾಧಿಕಾರಿ ಎಂ.ಎಸ್.ರಘುನಂದನ್ ಮಾತನಾಡಿ, ‘ಕನ್ನಡ ಉಳಿಸಲು ಹೋರಾಟಗಳು ಅನಿವಾರ್ಯವಲ್ಲ. ಬದಲಾಗಿ ಕನ್ನಡವನ್ನು ನಾವು ಸರ್ಪಕವಾಗಿ ಬಳಕೆ ಮಾಡಿದರೆ ಸಾಕು. ಇದರೊಂದಿಗೆ ಪರ ರಾಜ್ಯದವರೊಂದಿಗೆ ಅವರದೇ ಭಾಷೆಯಲ್ಲಿ ವ್ಯವಹರಿಸದೆ, ಅವರಲ್ಲಿ ನಮ್ಮ ಭಾಷಾ ಪ್ರೀತಿಯನ್ನು ಬಿತ್ತಿದರೆ ಕನ್ನಡ ಉಳಿದು ಬೆಳೆಯುತ್ತದೆ. ಇದರೊಂದಿಗೆ ಪ್ರಾದೇಶಿಕವಾದ ಸಂಸ್ಕೃತಿಗಳು ಉಳಿಯುತ್ತವೆ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಆರ್.ಚಿದಾನಂದ್, ತಾಲ್ಲೂಕು ಪಂಚಾಯಿತಿ ಸದಸ್ಯ ಕಣಿವೆಪುರ ಸುನಿಲ್‌ಕುಮಾರ್, ಕಾಂಗ್ರೆಸ್ ಮುಖಂಡ ಎನ್.ಆಂಜಿನಪ್ಪ, ಶಾಲಾ ಮುಖ್ಯೋಪಾದ್ಯಾಯ ಮುನೇಗೌಡ, ಯುವ ಸ್ಪೂರ್ತಿ ಟ್ರಸ್ಟ್ ಪದಾಧಿಕಾರಿಗಳಾದ ವಕೀಲ ಎಂ.ಆರ್.ಶಂಕರ್, ಎಂ.ಡಿ.ನವೀನ್‌ಕುಮಾರ್, ಬಿ.ಅಮರನಾಥ್, ಕೆ.ಮುನೇಗೌಡ, ರಾಮಾಂಜನೇಯ, ರಿಟ್ಟಲ್ ವಿಜಯಕುಮಾರ್, ಗೌತಮ್, ರವಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.