ADVERTISEMENT

ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 10:36 IST
Last Updated 24 ಮೇ 2017, 10:36 IST
ದೇವನಹಳ್ಳಿ ಬೈಪಾಸ್ ರಸ್ತೆಯಿಂದ  ಭೂಮಿ ಒತ್ತುವರಿ ಆಗಿರುವ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು  ಒತ್ತಾಯಿಸಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ದೇವನಹಳ್ಳಿ ಬೈಪಾಸ್ ರಸ್ತೆಯಿಂದ ಭೂಮಿ ಒತ್ತುವರಿ ಆಗಿರುವ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ದೇವನಹಳ್ಳಿ: ಓಜೋನ್ ಕಂಪೆನಿ ಒತ್ತುವರಿ ಮಾಡಿಕೊಂಡಿರುವ ಭೂಮಿ ಕುರಿತು ಸಮಗ್ರ ತನಿಖೆ ನಡೆಸಲು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಜನಶಕ್ತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ನಾಗೇನಹಳ್ಳಿ ಕೃಷ್ಣ ಮೂರ್ತಿ, ವೇದಿಕೆ ವತಿಯಿಂದ ಕಳೆದ ಎರಡು ವರ್ಷಗಳಿಂದ ‘ಓಜೋನ್ ಅರ್ಬನಾ ಇನ್ಟ್ರಾಡೆವಲಪರ್ಸ್ ಕಂಪೆನಿ’ ವಿರುದ್ದ ಅನೇಕ ಬಾರಿ ಹೋರಾಟ ಮತ್ತು ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮತ್ತು ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. 

ಈ ಫಲವಾಗಿ ಕಂದಾಯ ಇಲಾಖೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೂಕ್ತಕ್ರಮ ತೆಗೆದುಕೊಳ್ಳುವಂತೆ ಕಳೆದ ನಾಲ್ಕು ತಿಂಗಳ ಹಿಂದೆ ಆದೇಶ ನೀಡಿದ್ದಾರೆ. ಕಂದಾಯ ಅಧಿಕಾರಿಗಳು ಯಾವುದೇ ಕ್ರಮ ತೆಗೆದು ಕೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ADVERTISEMENT

ಕಂಪೆನಿ ಮಾಲೀಕರು ಸರ್ಕಾರಿ ಗೋಮಾಳ ಜಾಗ ಮತ್ತು ರಾಜಕಾಲುವೆ ಒತ್ತುವರಿ ಮಾಡಿರುವುದು ಒಂದೆಡೆಯಾದರೆ ಸರ್ಕಾರದ ಈ ಹಿಂದಿನ ನಕಾಶೆ ಬದಲು ಮಾಡಿದ್ದಾರೆ. ಮತ್ತೊಂದೆಡೆ 12 ಎಕರೆ ರೈತರ ಭೂಮಿಯನ್ನು ಕಾನೂನು ನಿಯಮ ಉಲ್ಲಂಘಿಸಿ ಅಕ್ರಮವಾಗಿ ವಿಕ್ರಯ ಮಾಡಿದ್ದಾರೆ.

ಇದರ ಜತೆಗೆ 7 ಎಕರೆ ಜಮೀನು ಭೂಸುಧಾರಣೆ ಮಂಜೂರಾತಿ ಅಧಿನಿಯಮ ಪಾಲನೆ ಮಾಡದೆ ಕ್ರಯವಾಗಿದೆ. ಸರ್ಕಾರದ ಕಾಯ್ದಿರಿಸಿದ ಸ್ವತ್ತು ಅಧಿಕಾರಿಗಳ ಬೆಂಬಲವಿಲ್ಲದೆ ಅಕ್ರಮಕ್ಕೆ ಸಾಧ್ಯವಿಲ್ಲ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮ ಒತ್ತುವರಿ ಬಗ್ಗೆ ಸಿಬಿಐ ತನಿಖೆ ನಡೆಸಿದರೆ ಪ್ರಭಾವಿಗಳ ಬಣ್ಣ ಬಯಲು ಆಗಲಿದೆ, ರಾಜ್ಯ ಸರ್ಕಾರ ಕೂಡಲೇ  ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು .

ಜನ ಶಕ್ತಿ ವೇದಿಕೆ ರಾಜ್ಯ ಮುಖಂಡ ಟಿ.ರವಿ ಮಾತನಾಡಿದರು. ವೇದಿಕೆ ರಾಜ್ಯ ಸದಸ್ಯ ಪಿ.ನಾಗೇಶ್, ಜಿಲ್ಲಾ ಅಧ್ಯಕ್ಷ ಕೆ.ಎನ್. ಹನುಮಂತ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಡಿ.ಆಂಜಿನಪ್ಪ, ಜಂಟಿ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ಚೇತನ್, ಜಿಲ್ಲಾ ಕಾರ್ಮಿಕ ಘಟಕದ ಸಿ.ಶ್ರೀನಿವಾಸ್, ಜಿಲ್ಲಾ ರೈತ ಘಟಕ ಅಧ್ಯಕ್ಷ ಜಯರಾಮಯ್ಯ, ಮಹಿಳಾ ಘಟಕ ಜಿಲ್ಲಾ ಘಟಕದ ಅಧ್ಯಕ್ಷೆ ತಬಸುಮ್ , ತಾಲ್ಲೂಕು ಗೌರವಾಧ್ಯಕ್ಷ ಅಶ್ವಥಗೌಡ, ಅಧ್ಯಕ್ಷ ಎಸ್.ವಿ ಚಂದ್ರು, ಉಪಾಧ್ಯಕ್ಷ ಕೆ.ಗಂಗಾಧರ್, ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷೆ ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.