ADVERTISEMENT

ಸುಂದರ ದೇಗುಲ, ಕಲ್ಯಾಣಿಗೆ ಕಾಲುವೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 9:03 IST
Last Updated 21 ಸೆಪ್ಟೆಂಬರ್ 2017, 9:03 IST
ಮಾಕಳಿ ಮಲ್ಲೇಶ್ವರ ಸ್ವಾಮಿ ಅಭಿವೃದ್ದಿ ಟ್ರಸ್ಟ್‌ ವತಿಯಿಂದ ಮಾಕಳಿ ಬೆಟ್ಟದ ದೇವಾಲಯದ ಸಮೀಪದಲ್ಲಿನ ಕುಡಿಯುವ ನೀರಿನ ಕಲ್ಯಾಣಿಯನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು
ಮಾಕಳಿ ಮಲ್ಲೇಶ್ವರ ಸ್ವಾಮಿ ಅಭಿವೃದ್ದಿ ಟ್ರಸ್ಟ್‌ ವತಿಯಿಂದ ಮಾಕಳಿ ಬೆಟ್ಟದ ದೇವಾಲಯದ ಸಮೀಪದಲ್ಲಿನ ಕುಡಿಯುವ ನೀರಿನ ಕಲ್ಯಾಣಿಯನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು   

ದೊಡ್ಡಬಳ್ಳಾಪುರ: ಮಾಕಳಿ ಬೆಟ್ಟಕ್ಕೆ ಹತ್ತುವ ದಾರಿಯಲ್ಲಿ ಕಡಿದಾದ ಸ್ಥಳಗಳಲ್ಲಿ ಮೆಟ್ಟಿಲುಗಳನ್ನು ಹಾಗೂ ದಾರಿಯನ್ನು ಶ್ರಮದಾನದ ಮೂಲಕ ಮಾಕಳಿ ಮಲ್ಲೇಶ್ವರ ಸ್ವಾಮಿ ಅಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು ದುರಸ್ತಿಗೊಳಿಸಿದರು. ಇದೇ ಸಂದರ್ಭದಲ್ಲಿ ಬೆಟ್ಟದ ಮೇಲಿನ ದೇವಾಲಯದ ಸಮೀಪದಲ್ಲಿನ ಕುಡಿಯುವ ನೀರಿನ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ಕಲ್ಯಾಣಿಗೆ ಮಳೆ ನೀರು ಸರಾಗವಾಗಿ ಹರಿದು ಬರುವಂತೆ ಕಾಲುವೆಗಳನ್ನು ನಿರ್ಮಿಸಲಾಯಿತು.

ಈ ಬಗ್ಗೆ ಮಾಹಿತಿ ನೀಡಿದ ಮಾಕಳಿ ಮಲ್ಲೇಶ್ವರ ಸ್ವಾಮಿ ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ್, ಪ್ರತಿ ತಿಂಗಳ ಮೂರನೇ ಭಾನುವಾರ ಟ್ರಸ್ಟ್‌ನ ಎಲ್ಲ ಪದಾಧಿಕಾರಿಗಳು ಹಾಗೂ ಮಲ್ಲೇಶ್ವರ ಸ್ವಾಮಿ ಭಕ್ತಾದಿಗಳು ಸೇರಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹತ್ತುವ ರಸ್ತೆ, ಬೆಟ್ಟದ ಮೇಲಿನ ಕಲ್ಯಾಣಿಯನ್ನು ದುರಸ್ತಿ ಮಾಡುವುದು, ಬೆಟ್ಟದಲ್ಲಿನ ದೇವಾಲಯದ ಸುತ್ತಲು ವಿವಿಧ ಜಾತಿ ಸಸಿಗಳನ್ನು ನೆಡಲಾಗುತ್ತಿದೆ.

ಈಗಾಗಲೇ ಮುಜರಾಯಿ ಇಲಾಖೆ ವತಿಯಿಂದ ದೇವಾಲಯದ ಅಭಿವೃದ್ಧಿಗೆ ₹ 5 ಲಕ್ಷ ಬಿಡುಗಡೆಯಾಗಿದೆ. ಇದಲ್ಲದೆ ಭಕ್ತಾದಿಗಳೂ ಬೆಟ್ಟದ ಮೇಲಿನ ಮಲ್ಲೇಶ್ವರ ಸ್ವಾಮಿ ದೇವಾಲಯದ ಅಭಿವೃದ್ಧಿಗೆ ಸಹಕಾರ ನೀಡಲು ಮುಂದೆ ಬರುತ್ತಿದ್ದಾರೆ ಎಂದರು.

ADVERTISEMENT

ಬೆಟ್ಟದಲ್ಲಿ ಐತಿಹಾಸಿಕ ಕೋಟೆ, ಮದ್ದಿನ ಮನೆಗಳು ಇದ್ದು ಇವುಗಳನ್ನು ಸಂರಕ್ಷಿಸಲು ಪ್ರಾಮುಖ್ಯತೆ ನೀಡಲಾಗುವುದು. ಇದರಿಂದ ಮುಂದಿನ ಪೀಳಿಗೆಗೆ ನಮ್ಮ ಪೂರ್ವಿಕರು ನಿರ್ಮಿಸಿರುವ ಕೋಟೆ, ಕೊತ್ತಲಗಳನ್ನು ತೋರಿಸಲು ಸಾಧ್ಯವಾಗಲಿದೆ ಎಂದರು.

ಶ್ರಮದಾನದಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ರಾಮಚಂದ್ರರೆಡ್ಡಿ, ದೇವರಾಜ್, ಹರ್ಷವರ್ಧನ್, ಲಕ್ಷ್ಮೀನಾರಾಯಣ, ಎಂ.ದೇವರಾಜ್‌, ನಾರಾಯಣಸ್ವಾಮಿ, ಪುಲ್ಲಯ್ಯ, ಶಿವಾನಂದ್, ನಾಗರಾಜು, ಶಿವಣ್ಣ, ರವಿ ಚಂದ್ರರೆಡ್ಡಿ, ಧನು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.