ADVERTISEMENT

ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 10:28 IST
Last Updated 24 ಮೇ 2017, 10:28 IST

ಆನೇಕಲ್‌: ‘ತಾಲ್ಲೂಕಿನ ಚಂದಾಪುರದ ಸೂರ್ಯಸಿಟಿಯಲ್ಲಿ ನೀರಿನ ಪೂರೈಕೆಯಾಗುತ್ತಿಲ್ಲ. ಗೃಹ ಮಂಡಳಿಯ ಪ್ರತಿಷ್ಠಿತ ಬಡಾವಣೆಯಾಗಿದ್ದರೂ  ತಿಂಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಮೂಲಸೌಲಭ್ಯಗಳಿಲ್ಲ ಕೂಡಲೇ ಸೌಲಭ್ಯಗಳನ್ನು ಒದಗಿಸಿಕೊಡಬೇಕು’ ಎಂದು ಸೂರ್ಯಸಿಟಿ ನಿವಾಸಿಗಳ ಸಂಘದ ಪದಾಧಿಕಾರಿಗಳು ಸೂರ್ಯಸಿಟಿ ಗೃಹ ಮಂಡಳಿಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಪುರಸಭಾ ಸದಸ್ಯೆ ಜಾನಕಮ್ಮ ವೆಂಕಟೇಶ್ ಮಾತನಾಡಿ, ಗೃಹ ಮಂಡಳಿಯು  ಸೂರ್ಯಸಿಟಿ ಬಡಾವಣೆಯನ್ನು ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಪುರಸಭೆಗೆ ವಹಿಸಿದರೆ ನಿರ್ವಹಣೆ ಮಾಡಲು ಸಿದ್ದ. ಆದರೆ ಯಾವುದೇ ಸೌಲಭ್ಯಗಳಿಲ್ಲದೇ ಜನರು ಪರದಾಡುವಂತಾಗಿದೆ. ಸಮಸ್ಯೆಗಳನ್ನು ಸಂಬಂಧಿಸಿದವರು ಗಮನ ಹರಿಸಿ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಸೂರ್ಯಸಿಟಿ ನಿವಾಸಿಗಳ ಸಂಘದ ಅಧ್ಯಕ್ಷ ಸಾಗರ್‌ ಮಾತನಾಡಿ ಸೂರ್ಯಸಿಟಿ ನಿರ್ಮಾಣವಾಗಿ 12 ವರ್ಷಗಳು ಕಳೆದಿವೆ. ಇಲ್ಲಿ ನೂರಾರು ಕುಟುಂಬಗಳು ವಾಸವಾಗಿವೆ. ಆದರೆ ಗೃಹ ಮಂಡಳಿ ಸೂರ್ಯಸಿಟಿಯನ್ನು  ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿಲ್ಲ. ರಸ್ತೆಗಳು ಹದಗೆಟ್ಟು ಗುಂಡಿಗಳಾಗಿವೆ. ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಬೀದಿ ದೀಪಗಳು ಸಮರ್ಪಕವಾಗಿಲ್ಲ.  ಕರ್ನಾಟಕ ಗೃಹ ಮಂಡಳಿಯು ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ತಿಂಗಳಿಗೊಮ್ಮೆ ನೀರು ಬಿಡಲಾಗುತ್ತಿದೆ ಎಂದರು.

ADVERTISEMENT

ಗೃಹ ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಲೋಕೇಶ್‌ ಬಾಬು ಮಾತನಾಡಿ ಸೂರ್ಯಸಿಟಿಯ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಅವಶ್ಯಕತೆಗೆ ತಕ್ಕಂತೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಶಾಶ್ವತ ನಿವಾರಣೆಗೆ ಕಾವೇರಿ ನೀರು ಪೂರೈಕೆಯೇ ಪರಿಹಾರ.

ಈ ನಿಟ್ಟಿನಲ್ಲಿ ಗೃಹ ಮಂಡಳಿಯು ಜಲ ಮಂಡಳಿಗೆ ₹ 3.2 ಕೋಟಿ ಹಣ ಪಾವತಿಸಿದೆ. ಶೀಘ್ರದಲ್ಲಿ ಕಾವೇರಿ ನೀರು ಪೂರೈಕೆಯಾಗಲಿದೆ. ಉಳಿದ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವುದಾಗಿ ಅವರು ತಿಳಿಸಿದರು.  ಮುಖಂಡರಾದ ಬೋಜರಾಜ್, ವೆಂಕಟೇಶ್, ರೈತ ಸಂಘಟನೆಶಿವರಾಮರೆಡ್ಡಿ, ಪದವೀಧರ ವೇದಿಕೆಯ ಬನಹಳ್ಳಿ ರಾಮಚಂದ್ರರೆಡ್ಡಿ, ಸೌಮ್ಯ, ಮಮತ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.