ADVERTISEMENT

ಹಣ ದುರ್ಬಳಕೆ: ಅಮಾನತಿಗೆ ಆಗ್ರಹ

ಅಣಿಘಟ್ಟ ಸರ್ಕಾರಿ ಶಾಲೆ ಮುಖ್ಯಶಿಕ್ಷಕರ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 10:12 IST
Last Updated 12 ಜನವರಿ 2017, 10:12 IST
ದೇವನಹಳ್ಳಿ: ಶಾಲೆಗೆ ಸರ್ಕಾರದಿಂದ ಬರುತ್ತಿರುವ ವಿವಿಧ ಅನುದಾನಗಳ ಹಣವನ್ನು ದುರುಪಯೋಗ ಮಾಡಿಗೊಂಡಿರುವ ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸುವಂತೆ ತಾಲ್ಲೂಕಿನ ಅಣಿಘಟ್ಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಮಸ್ಥರು ಬುಧವಾರ ಪ್ರತಿಭಟಿಸಿ ಒತ್ತಾಯಿಸಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅದ್ಯಕ್ಷ ನಾಗರಾಜ್ ಕಳೆದ ಹತ್ತು ವರ್ಷಗಳಿಂದ ಇದೇ ಶಾಲೆಯಲ್ಲಿ ಮುಖ್ಯಶಿಕ್ಷಕ ಠಿಕಾಣಿ ಹೂಡಿದ್ದಾರೆ ಎಂದು ದೂರಿದರು.
 
2012–13ನೇ ಸಾಲಿನಲ್ಲಿ ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ಬಂದಿದ್ದು ₹ 2.50 ಲಕ್ಷ ಎಂದು ಅಂದಾಜು ಇದೆ. ಆದರೆ ಅನುದಾನದ ಕಡತ ಪತ್ತೆ ಇಲ್ಲ. ಕಾಂಪೌಂಡ್ ನಿರ್ಮಾಣಕ್ಕೆ ಮೊದಲು ಕಲ್ಲು ಚಪ್ಪಡಿ ಅಳವಡಿಸಲಾಗಿತ್ತು, ತೆರವುಗೊಳಿಸಿ ಸಮಿತಿ ನಿರ್ಧಾರದಂತೆ ಐದುವರೆ ಸಾವಿರಕ್ಕೆ ಮಾರಾಟ ಮಾಡಲಾಗಿತ್ತು, ಹಣ ಮಾತ್ರ ಬ್ಯಾಂಕ್ ಖಾತೆಗೆ ಜಮಾ ಮಾಡಿಲ್ಲ. 2016–17 ನೇ ಸಾಲಿನಲ್ಲಿ ವಿತರಣೆ ಮಾಡಬೇಕಾಗಿದ್ದ ಸಮವಸ್ತ್ರ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದರೂ ಈವರೆಗೂ ವಿತರಣೆ ಮಾಡಿಲ್ಲ, ಮಕ್ಕಳ ಕ್ರೀಡಾ ಚಟುವಟಿಕೆಗೆ ಮುಖ್ಯ ಶಿಕ್ಷಕರ ಬ್ಯಾಂಕ್‌ ಖಾತೆಯಲ್ಲಿ ಐದು ಸಾವಿರ ಸರ್ಕಾರದಿಂದ ನೇರವಾಗಿ ಜಮೆಯಾಗಿದ್ದರೂ ಒಂದೇ ಒಂದು ಕ್ರೀಡಾ ಸಾಮಗ್ರಿ ಖರೀದಿ ಮಾಡಿಲ್ಲ ಎಂದು ದೂರಿದರು.
 
ಎಸ್ ಡಿಎಂಸಿ ಮಾಜಿ ಅಧ್ಯಕ್ಷೆ ಚಂದ್ರಕಲಾ ಮಾತನಾಡಿ, ನಾನು ಅಧ್ಯಕ್ಷೆಯಾಗಿದ್ದ ವೇಳೆ ರಾಷ್ಟೀಯ ಹಬ್ಬ ಆಚರಣೆ ಸಂದರ್ಭದಲ್ಲಿ ಬಲವಂತವಾಗಿ ಚೆಕ್ ಗೆ ಸಹಿ ಮಾಡಿಸಿಕೊಳ್ಳುತ್ತಿದ್ದರು, ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ನೂರಾರು ಬಾರಿ ಕೇಳಿದರೂ ಹೇಳುತ್ತಿರಲಿಲ್ಲ. ಬಿಸಿಯೂಟದ ಅವ್ಯವಸ್ಥೆ ನೋಡೋಕ್ಕಾಗಲ್ಲ, ಒಂದೆರಡು ಟೊಮೆಟೊ ಈರುಳ್ಳಿ ಜತೆಗೆ ಅರಿಶಿಣಪುಡಿ  ಉಪ್ಪು ಮಿಶ್ರಣ ಮಾಡಿ ಬಿಸಿಮಾಡಿ ಹಾಕಿದರೆ ಯಾವ ಮಕ್ಕಳು ತಿನ್ನುತ್ತಾರೆ’ ಎಂದು ದೂರಿದರು.
 
ಮುಖಂಡ ನಾರಾಯಣ ಸ್ವಾಮಿ ಮಾತನಾಡಿ, ಕೂಡಲೇ ಅಮಾನತು ಗೊಳಿಸಿ ಬೇರೆ ಶಿಕ್ಷಕರನ್ನು ನಿಯೋಜನೆ ಮಾಡಬೇಕು ಮತ್ತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
 
ಗ್ರಾಮದ ಮುಖಂಡರಾದ ಪ್ರಕಾಶ್‌, ಕುಮಾರ್‌, ಕೃಷ್ಣಮೂರ್ತಿ, ಮಂಜುನಾಥ್‌ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.