ADVERTISEMENT

ಹಳೆ ಸರ್ಕಾರಿ ಆಸ್ಪತ್ರೆ ಬಂದ್‌: ಪರದಾಟ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 5:29 IST
Last Updated 17 ನವೆಂಬರ್ 2017, 5:29 IST
ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆ ಸ್ಥಳಾಂತರಗೊಂಡಿರುವ ಹಿನ್ನಲೆಯಲ್ಲಿ ಬಾಗಿಲು ಮುಚ್ಚಿರುವ ನಗರದ ಹಳೆ ಬಸ್ ನಿಲ್ದಾಣದ ಸಮೀಪದ ಸಾರ್ವಜನಿಕ ಆಸ್ಪತ್ರೆ
ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆ ಸ್ಥಳಾಂತರಗೊಂಡಿರುವ ಹಿನ್ನಲೆಯಲ್ಲಿ ಬಾಗಿಲು ಮುಚ್ಚಿರುವ ನಗರದ ಹಳೆ ಬಸ್ ನಿಲ್ದಾಣದ ಸಮೀಪದ ಸಾರ್ವಜನಿಕ ಆಸ್ಪತ್ರೆ   

ದೊಡ್ಡಬಳ್ಳಾಪುರ: ಒಂದೆಡೆ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳನ್ನು ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದರಿಂದ ಸಾರ್ವಜನಿಕ ಆಸ್ಪತ್ರೆಗೆ ಅನಿವಾರ್ಯವಾಗಿ ಹೋಗಬೇಕಾದ ಪ್ರಸಂಗ ಎದುರಾಗಿದೆ. ಮತ್ತೊಂದೆಡೆ ನಗರದ ಹಳೆ ಬಸ್ ನಿಲ್ದಾಣದ ಸಮೀಪವಿದ್ದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯನ್ನು ಪ್ರವಾಸಿ ಮಂದಿರದ ಬಳಿಯಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡಕ್ಕೆ ಸಂಪೂರ್ಣ ಸ್ಥಳಾಂತರ ಮಾಡಿರುವುದು ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನ.9 ರಂದು ಡಿ.ಕ್ರಾಸ್ ಸಮೀಪ ₹ 13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ತಾಯಿ ಮತ್ತು ಮಕ್ಕಳ 100 ಹಾಸಿಗೆಗಳ ಆಸ್ಪತ್ರೆ ಕಾರ್ಯಾರಂಭಕ್ಕೆ ಶಾಸಕ ಟಿ.ವೆಂಕಟರಮಣಯ್ಯ ಪೂಜೆ ನೆರವೇರಿಸಿದ್ದರು.

ಆಸ್ಪತ್ರೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎಂದು ಹೆಸರಿಟ್ಟಿದ್ದರಿಂದ ಹೆರಿಗೆ ಆಸ್ಪತ್ರೆ ಮಾತ್ರ ಸ್ಥಳಾಂತರವಾಗಿ ಸಾಮಾನ್ಯ ಕಾಯಿಲೆಗಳಿಗೆ ಹಳೆಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಸಿಗುತ್ತಿದೆ ಎನ್ನುವ ನಂಬಿಕೆಯಿತ್ತು. ಈ ಮೊದಲು ಆರೋಗ್ಯ ಇಲಾಖೆ ಸಹ ಇದೇ ಭರವಸೆ ನೀಡಿತ್ತು.

ADVERTISEMENT

ಆದರೆ ಸಾಮಾನ್ಯ ಚಿಕಿತ್ಸೆ ಸಹ ಲಭ್ಯವಿಲ್ಲದೇ ಆಸ್ಪತ್ರೆಯನ್ನು ಸಂಪೂರ್ಣವಾಗಿ ಹೊಸ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸಣ್ಣ ಜ್ವರ, ಗಾಯಗಳಾದರೂ ಹೊಸ ಆಸ್ಪತ್ರೆಗೆ ಹೋಗಬೇಕಿದೆ.

ಮೂಗಿಗಿಂತ ಮೂಗುತಿ ಭಾರ !: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಬರುವವರು ಬಹುತೇಕ ಬಡವರು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಆರ್ಥಿಕವಾಗಿ ಸಾಧ್ಯವಿಲ್ಲದವರು. ಇವರು ಸಣ್ಣ ಚಿಕಿತ್ಸೆಗೆ ₹ 10 ರಿಂದ ₹ 50 ಖರ್ಚು ಮಾಡಿದರೆ ಹೆಚ್ಚು.

ಆದರೆ ಹೊಸ ಆಸ್ಪತ್ರೆ ಬಸ್ ನಿಲ್ದಾಣದಿಂದ 2 ಕಿಲೋ ಮೀಟರ್ ದೂರದಲ್ಲಿರುವುದರಿಂದ ಹೋಗಿ ಬರಲು ನೂರಾರು ರೂಪಾಯಿ ಖರ್ಚು ಮಾಡಬೇಕಿದೆ. ಆಟೋಗಳಲ್ಲಿ ಆಸ್ಪತ್ರೆಗೆ ತಲುಪಲು ಸ್ಥಳ ಆಧರಿಸಿ ₹ 50,150 ರವರೆಗೆ ಆಟೋಗೆ ನೀಡಬೇಕಿದೆ.

ಇಲ್ಲಿನ ಆಸ್ಪತ್ರೆ ಸುಸಜ್ಜಿತವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಾಮಾನ್ಯ ಚಿಕಿತ್ಸೆಗೂ ನೂರಾರು ರೂಪಾಯಿ ಖರ್ಚು ಮಾಡಿ ಬರಲು ಸಾಧ್ಯವೇ ಎನ್ನುವ ಪ್ರಶ್ನೆ ಸಾಮಾನ್ಯ ರೋಗಿಗಳದು. ಈ ಬಗ್ಗೆ ಕ್ಷೇತ್ರದ ಶಾಸಕರು ಹಾಗೂ ಆರೋಗ್ಯ ಇಲಾಖೆ ಗಮನ ಹರಿಸಿ, ಹೆರಿಗೆ ಹೊರತು ಪಡಿಸಿ ಉಳಿದ ಸೇವೆಗಳನ್ನು ಹಳೆ ಬಸ್ ನಿಲ್ದಾಣದ ಬಳಿಯಿರುವ ಆಸ್ಪತ್ರೆಯಲ್ಲಿಯೇ ನೀಡಬೇಕೆಂದು ಸಂಜಯನಗರದ ನಿವಾಸಿಗಳಾದ ರಾಜಣ್ಣ, ಭುವನೇಶ್ವರಿ ನಗರದ ನಿವಾಸಿ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.