ADVERTISEMENT

ಹೆನ್ನಾಗರ ಯಲ್ಲಮ್ಮ ದೇವಿ ಬ್ರಹ್ಮರಥೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 11:40 IST
Last Updated 11 ಜನವರಿ 2017, 11:40 IST
ಹೆನ್ನಾಗರ ಯಲ್ಲಮ್ಮ ದೇವಿ ಬ್ರಹ್ಮರಥೋತ್ಸವ ನಾಳೆ
ಹೆನ್ನಾಗರ ಯಲ್ಲಮ್ಮ ದೇವಿ ಬ್ರಹ್ಮರಥೋತ್ಸವ ನಾಳೆ   

ಆನೇಕಲ್‌: ತಾಲ್ಲೂಕಿನ ಹೆನ್ನಾಗರ ಗ್ರಾಮದ ಯಲ್ಲಮ್ಮ ದೇವಿ ಬ್ರಹ್ಮರಥೋತ್ಸವ ಇದೇ ಗುರುವಾರ ನಡೆಯಲಿದೆ ಎಂದು ದೇವಾಲಯ ಟ್ರಸ್‌್ಟನ ಸಂಚಾಲಕ ಜೆ.ಜೋತಯ್ಯ ತಿಳಿಸಿದ್ದಾರೆ.

ಜ್ಯೋತಿ ಲಿಂಗೇಶ್ವರಸ್ವಾಮಿ ಸೇವಾ ಟ್ರಸ್‌್ಟ ವತಿಯಿಂದ ಯಲ್ಲಮ್ಮ ದೇವಿ ಜಾತ್ರೆ ಹಾಗೂ ಗದ್ದಿಗೆ ಜ್ಯೋತಿಲಿಂಗ ಸ್ವಾಮಿಗಳ 216ನೇ ವರ್ಷದ ಆರಾಧನೆ ಕಾರ್ಯಕ್ರಮ ನಡೆಯಲಿದೆ. ಜಾತ್ರೆಯ ಅಂಗವಾಗಿ ಬುಧವಾರ ಧ್ವಜಾರೋಹಣ, ಗಂಗಾಪೂಜೆ, ಯಲ್ಲಮ್ಮ ದೇವಿ, ಜ್ಯೋತಿಲಿಂಗ ಸ್ವಾಮಿ, ಬಸವೇಶ್ವರ ಸ್ವಾಮಿಗೆ ಅಭಿಷೇಕ, ಹೋಮ ನಡೆಯಲಿದೆ.

ಇದೇ ಗುರುವಾರ ಯಲ್ಲಮ್ಮ ದೇವಿ ಬ್ರಹ್ಮರಥೋತ್ಸವವು ಗುಮ್ಮಳಾಪುರ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ದೇವಾಲಯದ ಇತಿಹಾಸ :  ತಾಲ್ಲೂಕಿನ ಹಲವಾರು ಧಾರ್ಮಿಕ ಕ್ಷೇತ್ರಗಳಲ್ಲಿ ಹೆನ್ನಾಗರ ಗ್ರಾಮ ತನ್ನದೇ ಆದ ಹೆಗ್ಗಳಿಕೆಯನ್ನು ಹೊಂದಿದೆ. ಹಲವಾರು ಶಾಸನಗಳು, ವೀರಗಲ್ಲುಗಳು, ಮಾಸ್ತಿಗಲ್ಲುಗಳು ಗ್ರಾಮದಲ್ಲಿರುವುದು ವಿಶೇಷ. ಹೆನ್ನಾಗರ ಗ್ರಾಮವು ಹಲವು ದೇವಾಲಯಗಳ ಸಂಗಮವಾಗಿದೆ. ಯಲ್ಲಮ್ಮ ದೇವಿ, ಜ್ಯೋತಿ ಲಿಂಗೇಶ್ವರ ಸ್ವಾಮಿ ಗದ್ದಿಗೆ, ಸಂಕಷ್ಟಹರ ಗಣಪತಿ, ನಾಗಲಿಂಗೇಶ್ವರ ಸ್ವಾಮಿ ದೇವಾಲಯ, ಧರ್ಮರಾಯಸ್ವಾಮಿ ದೇವಾಲಯ ಸೇರಿದಂತೆ ಹಲವು ದೇವಾಲಯಗಳು ಗ್ರಾಮದಲ್ಲಿದ್ದು ಗ್ರಾಮದ ಧಾರ್ಮಿಕ ಪರಂಪರೆಗೆ ಸಾಕ್ಷಿಯಾಗಿವೆ.

ಸುಮಾರು ಎರಡು ಸಾವಿರ ವರ್ಷಗಳ ಈ ಹಿಂದೆ ಈ ಗ್ರಾಮವನ್ನು ಸೂಜೂರು ಎಂದು ಕರೆಯಲಾಗುತ್ತಿತ್ತು ಎನ್ನಲಾಗಿದೆ. ಹೆನ್ನಾಗರ ಗ್ರಾಮದ ಯಲ್ಲಮ್ಮ ದೇವಿ ಜಾತ್ರೆಯು ಈ ಭಾಗದ ಅತ್ಯಂತ ಪ್ರಸಿದ್ಧ ಜಾತ್ರೆಯಾಗಿದ್ದು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಹಲವು ವರ್ಷಗಳ ಹಿಂದೆ ಜಾತ್ರೆಯ ಸಂದರ್ಭದಲ್ಲಿ ದನಗಳ ಜಾತ್ರೆ ಸಹ ನಡೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ನಿಂತುಹೋಗಿದೆ. ಹೆನ್ನಾಗರದ ಜ್ಯೋತಿಲಿಂಗೇಶ್ವರ ಸ್ವಾಮಿಗಳು ಸುಮಾರು 300 ವರ್ಷಗಳ ಹಿಂದೆ ಗ್ರಾಮದಲ್ಲಿ ನೆಲೆಸಿದ್ದ ಹಲವಾರು ಪವಾಡಗಳಿಂದ ಪ್ರಸಿದ್ಧಿಯಾಗಿದ್ದರು. ಜ್ಯೋತಿಲಿಂಗ ಸ್ವಾಮಿಗಳ ಜೀವಂತ ಸಮಾಧಿ ಹೊಂದಿದ್ದು ಗದ್ದಿಗೆಯು ಯಲ್ಲಮ್ಮ ದೇವಾಲಯದ ಸಮೀಪದಲ್ಲಿದೆ.

ಸವದತ್ತಿಯಿಂದ ಯಲ್ಲಮ್ಮ ದೇವಿಯ ಮೂರ್ತಿ ತಂದು ಜ್ಯೋತಿಲಿಂಗ ಸ್ವಾಮಿಗಳು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿಯಿದೆ. ಜ್ಯೋತಿಲಿಂಗ ಸ್ವಾಮೀಜಿಗಳ ಗದ್ದಿಗೆ ಇಂದಿಗೂ ಹಲವಾರು ಭಕ್ತರ ಆಕರ್ಷಣೆಯಾಗಿದೆ. ಭಕ್ತರು ಸ್ವಾಮಿಗೆ ನಡೆದುಕೊಂಡರೆ ಒಳ್ಳೆಯದಾಗುತ್ತದೆ ಎಂಬ ಭಾವನೆ ಈ ಭಾಗದ ಜನರಲ್ಲಿದೆ.

ಮೈಸೂರು ಮಹಾರಾಜರಾಗಿದ್ದ ಜಯಚಾಮ ರಾಜೇಂದ್ರ ಒಡೆಯರ್ ಅವರು ಗ್ರಾಮಕ್ಕೆ ಭೇಟಿ ನೀಡಿದ್ದು ದೇವರಿಗೆ ಅಡ್ಡ ಪಲ್ಲಕ್ಕಿ ನೀಡಿದ್ದಾರೆ. ಇಂದಿಗೂ ಜಾತ್ರೆಯ ಸಂದರ್ಭದಲ್ಲಿ ದೇವಿಯ ಉತ್ಸವಮೂರ್ತಿಯನ್ನು ಕುಳ್ಳಿರಿಸಿ  ಜಗದ ಪಲ್ಲಕ್ಕಿಯನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ.

ಆನೇಕಲ್‌ ತಾಲ್ಲೂಕಿನ ನಾರಾಯಣ ಹೃದಯಾಲಯದಿಂದ ಕೇವಲ 2ಕಿ.ಮೀ. ದೂರದಲ್ಲಿರುವ ಹೆನ್ನಾಗರ ಯಲ್ಲಮ್ಮ ದೇವಿ ದೇವಾಲಯವು ವಿಶಾಲವಾದ ಜಾಗದಲ್ಲಿದ್ದು ಸಹಸ್ರಾರು ಭಕ್ತರ ಆರಾಧ್ಯ ದೈವವಾಗಿದೆ.

ದೇವಾಲಯದ ಮುಂಭಾಗದಲ್ಲಿ ಉದ್ಯಾನವನ ನಿರ್ಮಾಣವಾಗಿದೆ. ಇದರ ಸಮೀಪವೇ ಕಲ್ಯಾಣ ಮಂಟಪವಿದೆ. ದಾನಿಗಳ ನೆರವಿನಿಂದ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಟ್ರಸ್‌್ಟನವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.