ADVERTISEMENT

150 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 10:49 IST
Last Updated 8 ಜುಲೈ 2017, 10:49 IST

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ತಾಲ್ಲೂಕಿನಲ್ಲಿ ₹150 ಕೋಟಿ ಗಳಿಗೂ ಹೆಚ್ಚು ಅನುದಾನದಲ್ಲಿ ಅಭಿವೃದ್ಧಿಪಡಿಸಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಜುಲೈ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, ತಾಲ್ಲೂಕಿನ ಜನರ ಬಹುದಿನಗಳ ಒತ್ತಾಸೆಯಾಗಿದ್ದ ಸುಸಜ್ಜಿತವಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಅಂಬೇಡ್ಕರ್ ಭವನ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡಗಳು ನಿರ್ಮಾಣಗೊಂಡಿವೆ. ಹೈಟೆಕ್ ಬಸ್ ನಿಲ್ದಾಣ, ನಗರಸಭೆ ಕಾರ್ಯಾಲಯ, ವಾಲ್ಮೀಕಿ ಭವನಗಳಿಗೆ ಶಂಕುಸ್ಥಾಪನೆ ನೆರವೇರಲಿದೆ.

ಲೋಕೋಪಯೋಗಿ ಇಲಾಖೆ ರಸ್ತೆ ಗಳು ಬಹುತೇಕ ಪೂರ್ಣಗೊಂಡಿವೆ. ₹3.9 ಕೋಟಿ ವೆಚ್ಚದ ಚಿಕ್ಕತುಮಕೂರು ಬೈರಸಂದ್ರ, ಗೌಡಹಳ್ಳಿ ಗ್ರಾಮದವರೆಗಿನ 6.7 ಕಿ.ಮೀ ರಸ್ತೆ ಡಾಂಬರೀಕರಣ, ನಗರಸಭೆ ವ್ಯಾಪ್ತಿಯಲ್ಲಿ ₹3 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿ, ಪಂಚಾಯಿತಿ ಅನುದಾನದಲ್ಲಿ ವಿವಿಧ ಗ್ರಾಮಗಳ ರಸ್ತೆಗಳ ಕಾಮಗಾರಿ, ಗ್ರಾಮೀಣ ಭಾಗಗಳಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ₹1.70 ಕೋಟಿ ವೆಚ್ಚದ ಸಂತೆ ಮೈದಾನ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಲಿದೆ.

ADVERTISEMENT

₹4.89 ಕೋಟಿಗಳ ನಗರಸಭೆ ಆಡಳಿತ ಕಚೇರಿಗೆ ಶಂಕುಸ್ಥಾಪನೆ, ಅಂಬೇಡ್ಕರ್ ಭವನ ಉದ್ಘಾಟನೆ, ಬಿಇಓ ಕಚೇರಿ ಉದ್ಘಾಟನೆ, ಪ್ರೌಢ ಶಾಲಾ ಕಟ್ಟಡಗಳ ಉದ್ಘಾಟನೆ ನಡೆಯಲಿವೆ. ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ಸಮಾರಂಭ ನಡೆಯಲಿದೆ.  ಕಾಂಗ್ರೆಸ್ ತಾಲ್ಲೂಕು ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಲಕ್ಷ್ಮೀಪತಿ, ನಗರ ಬ್ಲಾಕ್ ಅಧ್ಯಕ್ಷ ಕೆ.ಜಿ.ಅಶೋಕ್‌ ಗುರುರಾಜಪ್ಪ, ಎಪಿಎಂಸಿ ಉಪಾಧ್ಯಕ್ಷ ಮಂಜುನಾಥ್,  ವಿ.ಆರ್.ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.