ADVERTISEMENT

‘ಕ್ಯಾನ್ಸರ್‌ ತಡೆಗೆ ಪ್ರಯತ್ನ ಅಗತ್ಯ’

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 8:46 IST
Last Updated 19 ಫೆಬ್ರುವರಿ 2018, 8:46 IST

ದೇವನಹಳ್ಳಿ: ಸಮಾಜವನ್ನು ಕಾಡುತ್ತಿರುವ ಕ್ಯಾನ್ಸರ್‌ ರೋಗಕ್ಕೆ ಕಡಿವಾಣ ಹಾಕಲು ಸಾಮೂಹಿಕ ಪ್ರಯತ್ನ ಬೇಕು ಎಂದು ಕೆಪಿಸಿಸಿ ರಾಜ್ಯ ಹಿಂದುಳಿದ ಘಟಕ ಉಪಾಧ್ಯಕ್ಷ ಸಿ.ಜಗನ್ನಾಥ್‌ ತಿಳಿಸಿದರು.

ಇಲ್ಲಿ ನಡೆದ ಕ್ಯಾನ್ಸರ್‌ ಬಗ್ಗೆ ಜಾಗೃತಿ ಜಾಥಾ ಮತ್ತು ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಇಲ್ಲಿನ ರಾಮಯ್ಯ ಲೀನಾ ಆಸ್ಪತ್ರೆ ಆವರಣದಲ್ಲಿ ಭಾನುವಾರ ರಾಮಯ್ಯ ಲೀನಾ ಆಸ್ಪತ್ರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪುರಸಭೆ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

‘ಇಂದಿನ ಯುವಪೀಳಿಗೆ ಮಾದಕ ವಸ್ತು ಸೇವನೆ, ತಂಬಾಕು ಉತ್ಪನ್ನ, ಗುಟ್ಕಾ ಮುಂತಾದ ದುಶ್ಚಟಗಳಿಗೆ ಬಲಿಯಾಗಿ  ಅಮೂಲ್ಯ ಜೀವ ಕಳೆದುಕೊಳ್ಳುತ್ತಿದ್ದಾರೆ. ಮಾರಕ ರೋಗಕ್ಕೆ ಒಳಗಾಗಿ ಕುಟುಂಬದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದ್ದಾರೆ. ಇದರಿಂದ ಮುಕ್ತಿ ಪಡೆಯಲು ಕೆಟ್ಟ ಚಟದಿಂದ ದೂರವಿರಬೇಕು’ ಎಂದರು.

ADVERTISEMENT

ಪುರಸಭೆ ಅಧ್ಯಕ್ಷ ಎಂ.ಮೂರ್ತಿ ಮಾತನಾಡಿ, ‘ಈ ರೋಗಕ್ಕೆ ಬಲಿಯಾಗುತ್ತಿರುವವರು ಬರಿ ಯುವ ಸಮುದಾಯವಲ್ಲ. ಗ್ರಾಮೀಣ ಜನರು ಬೀಡಿ, ಸಿಗರೇಟ್‌ ಚಟಕ್ಕೆ ಸಿಲುಕಿದ್ದಾರೆ. ಅವರೆಲ್ಲರೂ ಈ ರೋಗಕ್ಕೆ ತುತ್ತಾಗುವರೇ. ಅಪಾಯದ ಅರಿವಿದ್ದರೂ ಚಟದಿಂದ ಹೊರಬರುವ ಪ್ರಯತ್ನ ಮಾಡುವುದೇ ಇಲ್ಲ’ ಎಂದರು.

2016ರಲ್ಲಿ ಅನೇಕ ವಿವಿಧ ಕ್ಯಾನ್ಸರ್‌ ರೋಗಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗಿದೆ. ಎದೆಭಾಗ, ಶ್ವಾಸಕೋಶ, ಥೈರಾಯಿಡ್‌, ಕಿಡ್ನಿ ಸೇರಿ 17 ಬಗೆಯಲ್ಲಿ ಅದು ದೇಹವನ್ನು ಕಾಡುತ್ತದೆ. ಈ ಎಲ್ಲವೂ ಅಪಾಯಕಾರಿ ಎಂದು ವಿವರಿಸಿದರು. ಪುರಸಭೆ ಸದಸ್ಯ ಎನ್‌.ರಘು, ಮುಖಂಡ ವೆಂಕಟಸ್ವಾಮಿ, ಡಾ.ಅರುಣ್‌ ಕುಮಾರ್‌ ಮತ್ತು ಕಾಲೇಜು ಉಪನ್ಯಾಸಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.