ADVERTISEMENT

₹75 ಲಕ್ಷ ವೆಚ್ಚದಲ್ಲಿ ಮಲ ತ್ಯಾಜ್ಯ ಸಂಸ್ಕರಣ ಘಟಕ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 6:22 IST
Last Updated 25 ನವೆಂಬರ್ 2017, 6:22 IST

ದೇವನಹಳ್ಳಿ: ನೀರಗಂಟಿ ಪಾಳ್ಯದಲ್ಲಿ ನಿರ್ಮಾಣ ಮಾಡಲಾಗಿರುವ ಮಲ ತ್ಯಾಜ್ಯ ಹೂಳು ಸಂಸ್ಕರಣ ಘಟಕ ದೇಶಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಎಸ್. ಪಾಲಯ್ಯ ತಿಳಿಸಿದರು.

ಘಟಕ ಪರಿಶೀಲಿಸಿ ಮಾತನಾಡಿದ ಅವರು, ದೇಶದಲ್ಲಿ ಅನೇಕ ಕಡೆಗಳಲ್ಲಿ ಯಾಂತ್ರೀಕೃತ ಮಲ ತ್ಯಾಜ್ಯ ಸಂಸ್ಕರಣ ಘಟಕಗಳಿವೆ, ನೈಸರ್ಗಿಕವಾಗಿ ಮಲ ತ್ಯಾಜ್ಯ ಸಂಸ್ಕರಣ ಘಟಕ ಇರುವುದು ದೇಶದಲ್ಲಿ ಇದೇ ಮೊದಲು ಎಂದರು.‌ ಸ್ಮಾರ್ಟ್ ಸಿಟಿಗಳಲ್ಲಿ ಇಂತಹ ಘಟಕಗಳು ಅತಿ ಸೂಕ್ತ. ದುರ್ವಾಸನೆ ಬರುವುದಿಲ್ಲ. ಸಂಸ್ಕರಿಸಿದ ಮಲ ತ್ಯಾಜ್ಯ ನೀರುಪ್ಲಾಂಟೇಷನ್ ಗಳಿಗೆ ಬಳಕೆ ಮಾಡಬಹುದು. ಸಂಸ್ಕರಿಸಿದ ತ್ಯಾಜ್ಯವನ್ನು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಉಪಯೋಗಿಸಬಹುದು ಎಂದರು.

ನಗರದ ಅನೇಕ ಪ್ರದೇಶಗಳಲ್ಲಿ ಮಲ, ಮೂತ್ರ, ತ್ಯಾಜ್ಯಗಳನ್ನು ನೇರವಾಗಿ ರಾಜಕಾಲುವೆಗಳಿಗೆ ಬಿಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ನಗರಸಭೆ ಮತ್ತು ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಯಲು ಬಹಿರ್ದೆಸೆ ಮುಕ್ತವನ್ನಾಗಿಸಲು ಪ್ರತಿಯೊಂದು ಕುಟುಂಬ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಹಣಕಾಸಿನ ನೆರವು ನೀಡಲು ಸರ್ಕಾರ ಸಿದ್ಧವಿದ್ದರೂ ಅನೇಕರು ಆಸಕ್ತಿ ವಹಿಸುತ್ತಿಲ್ಲ ಎಂದರು.

ADVERTISEMENT

ಶೌಚಾಲಯ ನಿರ್ಮಾಣ ಮಾಡಿಕೊಂಡ ಕುಟುಂಬಗಳಿಗೆ ಮೂಲ ಸೌಲಭ್ಯ ನೀಡುವ ಕುರಿತು ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಪ್ರತಿಯೊಬ್ಬರು ಶೌಚಾಲಯ ನಿರ್ಮಿಸುವುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಅಂಬಿಕಾ ಮಾತನಾಡಿ, ಸಿಡಿಡಿ ಸಂಸ್ಥೆ, ಬೈಮೆನ್ ಓವರ್ ಸೀಸ್‌ ರಿಸರ್ಚ್ ಅಂಡ್ ಡೆವೆಲಪ್‌ಮೆಂಟ್ ಅಸೋಶಿಯೇಷನ್ ಹಾಗೂ ದಿ ಬಿಲ್ ಮಿಲಿಂಡಾ ಗೇಟ್ಸ್ ಫೌಡೇಷನ್ ಎರಡು ವರ್ಷಗಳ ಹಿಂದೆ ₹ 75 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿ ಪ್ರಸ್ತುತ ಪುರಸಭೆಗೆ ನಿರ್ವಹಣೆ ಮಾಡಲು ಹಸ್ತಾಂತರಿಸಿದೆ ಎಂದರು.

ಪುರಸಭೆ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷೆ ಪದ್ಮಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಗೋಪಾಲ್, ಸದಸ್ಯರಾದ ಆಶಾರಾಣಿ, ರತ್ನಮ್ಮ, ಎಂ.ನಾರಾಯಣಸ್ವಾಮಿ, ಗ್ರೇಡ್–2 ತಹಶೀಲ್ದಾರ್ ತುಳಸಿ, ಪುರಸಭೆ ಪರಿಸರ ಎಂಜಿನಿಯರ್‌ ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.