ADVERTISEMENT

ಮಕ್ಕಳ ಜಗಳ ಪೊಲೀಸ್‌ ಠಾಣೆಗೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 14:16 IST
Last Updated 4 ಜುಲೈ 2018, 14:16 IST

ದೊಡ್ಡಬಳ್ಳಾಪುರ: ತಾಲ್ಲೂಕಿನ ಕಸಾಘಟ್ಟ ಗ್ರಾಮದಲ್ಲಿ ಆಟವಾಡುವಾಗ ಮಕ್ಕಳು ಜಗಳವಾಡಿಕೊಂಡಿದ್ದನ್ನೇ ನೆಪಮಾಡಿಕೊಂಡ ಪೋಷಕರು ಠಾಣೆ ಮೆಟ್ಟಿಲು ಏರಿದ್ದಾರೆ.

ಒಂದನೇ ತರಗತಿ ವಿದ್ಯಾರ್ಥಿಗಳಿಬ್ಬರು ಪರಸ್ಪರ ಜಗಳವಾಡಿಕೊಂಡಿದ್ದು, ಬಳಿಕ ಅಂಗನವಾಡಿ ಕಾರ್ಯಕರ್ತೆ ಕೆ.ಜಿ.ಮುನಿಯಮ್ಮ, ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದ ಬಾಲಕನಿಗೆ ಚಿಕಿತ್ಸೆ ಕೊಡಿಸಿದ ನಂತರ ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು, ‘ಕಸಾಘಟ್ಟ ಗ್ರಾಮದ ಸರ್ಕಾರಿ ಕಿರಿಯ ಶಾಲೆಯ ಆವರಣದಲ್ಲಿ ಬುಧವಾರ ಬೆಳಿಗ್ಗೆ 1ನೇ ತರಗತಿ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದರು. ಈ ವೇಳೆ ಒಬ್ಬ ವಿದ್ಯಾರ್ಥಿ ಇನ್ನೊಬ್ಬನಿಗೆ ಬ್ಲೇಡ್ ನಿಂದ ಗೀರಿದ್ದಾನೆ’ ಎಂದರು.

ಶಾಲೆಗೆ ಬಂದ ಅಂಗನವಾಡಿ ಕಾರ್ಯಕರ್ತೆ ಮುನಿಯಮ್ಮ ಏಕಾಏಕಿ ಶಾಲಾ ಮಕ್ಕಳೆದುರಿಗೆ ಚಾಕುವಿನಿಂದ ಕುತ್ತಿಗೆ ಹಾಗೂ ಕೈಮೇಲೆ ಹಲ್ಲೆ ನಡೆಸಿದ್ದಾರೆ. ಮುನಿಯಮ್ಮ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಬೇಜವಾಬ್ದಾರಿಯಿಂದ ಹಲ್ಲೆ ನಡೆಸಲಾಗಿದೆ. ಇವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಇನ್ನೊಬ್ಬ ವಿದ್ಯಾರ್ಥಿಯ ಪೋಷಕರು ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ಈ ಕುರಿತಂತೆ ಅಂಗನವಾಡಿ ಕಾರ್ಯಕರ್ತೆ ಕೆ.ಜಿ.ಮುನಿಯಮ್ಮ ಮಾಹಿತಿ ನೀಡಿ, ವಿದ್ಯಾರ್ಥಿಗೆ ಬ್ಲೇಡ್‌ನಿಂದ ಕೊಯ್ದ ಕಾರಣ ಶಾಲೆಗೆ ತೆರಳಿ ಇನ್ನೊಬ್ಬ ವಿದ್ಯಾರ್ಥಿಗೆ ಬುದ್ಧಿ ಹೇಳಿ ಗಲಾಟೆ ಮಾಡಿಕೊಳ್ಳಬಾರದು ಎಂದು ಹೊಡೆದದ್ದು ನಿಜ. ಆದರೆ ಚಾಕುವಿನಿಂದ ಹಲ್ಲೆ ನಡೆಸಿಲ್ಲ. ಪೋಷಕರು ಮಹಿಳೆ ಎಂದು ನೋಡದೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವೈಯಕ್ತಿಕ ದ್ವೇಷದಿಂದಾಗಿ ಅವರೇ ಬ್ಲೇಡ್‌ನಲ್ಲಿ ಮಗುವಿಗೆ ಗಾಯಗೊಳಿಸಿ ನನ್ನ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ’ ಎಂದರು.

ದೊಡ್ಡಬೆಳವಂಗಲ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಗಜೇಂದ್ರ ಮಾತನಾಡಿ, ‘ಇಬ್ಬರು ದೂರು ನೀಡಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ವಿಚಾರಣೆಯ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.