ADVERTISEMENT

ಅಕ್ರಮ ಮರಳು ಗಣಿ ಪ್ರದೇಶದ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 6:08 IST
Last Updated 23 ಏಪ್ರಿಲ್ 2017, 6:08 IST

ಚನ್ನಮ್ಮನ ಕಿತ್ತೂರು: ಮಲಪ್ರಭಾ ನದಿಯ ಒಡಲಲ್ಲಿ ಹಾಗೂ ದಂಡೆಯ ಮೇಲೆ ಅಕ್ರಮವಾಗಿ ಮರಳು ಸಂಗ್ರಹ ಮಾಡಿದ್ದ ಸ್ಥಳದ ಮೇಲೆ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಶುಕ್ರವಾರ ಸಂಜೆ ದಾಳಿ ನಡೆಸಿದರು.ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಲಕಿನಕೊಪ್ಪ ಗ್ರಾಮದ ಬಳಿ ಮಲಪ್ರಭಾ ನದಿ ಹಾಗೂ ದಂಡೆಯ ಮೇಲೆ ಈ ಅಕ್ರಮ ಸಂಗ್ರಹ ಮಾಡಲಾಗಿತ್ತೆಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಮರಳು ತುಂಬಲು ಯಂತ್ರ ಬಳಸ ಲಾಗಿದ್ದು, ಭಾರದಿಂದಾಗಿ ಅದು ನದಿ ಒಡಲಲ್ಲೇ ಕುಸಿದು ನಿಂತಿದೆ. ಇದರ ಪಕ್ಕದಲ್ಲೇ ಮರಳು ಗುಪ್ಪೆ ಹಾಕಲಾಗಿದ್ದು ಇದರ ಸುತ್ತಲೂ ನದಿಯಲ್ಲಿ ಕಂದಕ ನಿರ್ಮಾಣವಾಗಿದೆ.ಸುಮಾರು 50ಕ್ಕೂ ಹೆಚ್ಚು ಬ್ರಾಸ್ ಮರಳು ಸಂಗ್ರಹವನ್ನು ನದಿ ಮತ್ತು ದಂಡೆಯ ಮೇಲೆ ಮಾಡಲಾಗಿದೆ. ಇಲ್ಲಿಂದ ಮರಳು ಎತ್ತಲು ಪರವಾನಗಿ ಇರಲಿಲ್ಲ ಎಂದು ಬೈಲಹೊಂಗಲ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ತಿಳಿಸಿದರು.

ಸಂಜೆ ಪೊಲೀಸರು ಸ್ಥಳದಲ್ಲಿ ಕೆಲವರನ್ನು ವಿಚಾರಿಸುವ ವೇಳೆ ವಾಹನ ನಿಲ್ಲಿಸಿ ಎಂದು ಕೂಗಿದರೂ ನಿಲ್ಲಿಸದೇ ಕೆಲವರು ಪರಾರಿಯಾದ ಘಟನೆ ಕೂಡ ನಡೆಯಿತು.
ಮರಳು ನಿಕ್ಷೇಪವಿಲ್ಲ: ಬೈಲಹೊಂಗಲ ತಾಲ್ಲೂಕು ವ್ಯಾಪ್ತಿಯಲ್ಲಿ ಮರಳು ನಿಕ್ಷೇಪ ಎಲ್ಲಿಯೂ ಇಲ್ಲ. ಹೀಗಾಗಿ ಇಲ್ಲಿ ಮರಳು ಎತ್ತಿ ಸಂಗ್ರಹ ಮಾಡಿದ್ದು ಅಕ್ರಮವಾಗಿದೆ ಎಂದು ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ತಿಳಿಸಿದರು.

ADVERTISEMENT

ಈ ಮರಳು ಸಂಗ್ರಹ ಬಳಿ ಬ್ರಿಜ್ ಕಮ್ ಬ್ಯಾರೇಜ್ ಕೆಲಸ ನಡೆದಿದ್ದು ಅವರು ಅಕ್ರಮ ಸಂಗ್ರಹ ಮಾಡಿ ಕೊಂಡಿ ದ್ದಾರೆ ಎಂದೂ ಅವರು ಹೇಳಿದರು.ದಾಳಿ ಮಾಡಿ ಪತ್ತೆ ಹಚ್ಚಿದ ಮರಳು ಲಕ್ಷಾಂತರ ರೂಪಾಯಿ ಮೌಲ್ಯದ್ದು ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.