ADVERTISEMENT

ಅತ್ಯಾಚಾರ ಖಂಡಿಸಿ ನಿಪ್ಪಾಣಿ ಬಂದ್‌

ಪ್ರಮುಖ ಬೀದಿಗಳಲ್ಲಿ ಮೌನ ಮೆರವಣಿಗೆ; ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 5:50 IST
Last Updated 10 ಜನವರಿ 2017, 5:50 IST
ನಿಪ್ಪಾಣಿ: ನಗರದಲ್ಲಿ ಶಿಕ್ಷಕನಿಂದ ಬಾಲಕಿಯೊಬ್ಬಳು ಅತ್ಯಾಚಾರಕ್ಕೆ ಒಳಗಾದ ಘಟನೆಯನ್ನು ಖಂಡಿಸಿ ಸ್ಥಳೀಯ ಸಂಘಟನೆಗಳು ಕರೆ ನೀಡಿದ ಬಂದ್‌ ಸೋಮವಾರ ಎಲ್ಲರೂ ಕೈಜೋಡಿಸಿದರು. 
 
ಸಂಘಟನೆಗಳ ಕರೆಗೆ ಓಗೊಟ್ಟು ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಯುವಜನತೆ, ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮೌನ ಮೆರವಣಿಗೆಯಲ್ಲಿ ಭಾಗವಹಿಸಿ ಘಟನೆಯನ್ನು ಖಂಡಿಸಿದರು. ಆರೋಪಿ ಶಿಕ್ಷಕ ಹಾಗೂ ಆತನ ಪತ್ನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. 
 
ನಗರದ ಭಾಗಶಃ ಎಲ್ಲ ಅಂಗಡಿ–ಮುಗ್ಗಟ್ಟುಗಳನ್ನು ಮುಚ್ಚಿ ಮೆರವಣಿಗೆಯಲ್ಲಿ ವ್ಯಾಪಾರಸ್ಥರೂ ಭಾಗವಹಿಸಿದ್ದರು. 
 
ಸ್ಥಳೀಯ ಟೈನಿ ಟಾಟ್ಸ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯ ಶಿಕ್ಷಕ ಅನ್ವರ್‌ ಹುಸೇನ್‌ ನದಾಫ್‌ ತನ್ನ ಪತ್ನಿಯ ರುಕ್ಸಾನಾ ಸಹಕಾರದಿಂದ ಅದೇ ಶಾಲೆಯ ಬಾಲಕಿ ಮೇಲೆ ಹಲವಾರು ತಿಂಗಳಿಂದ ಅತ್ಯಾಚಾರ ನಡೆಸಲಾಗುತ್ತಿತ್ತು. ಘಟನೆಗೆ ಎಲ್ಲ ಸಂಘಟನೆಗಳು ಭಾನುವಾರ ಸ್ಥಳೀಯ ರಾಮ ಮಂದಿರದಲ್ಲಿ ಸಭೆ ಸೇರಿ ನಗರ ಬಂದ್‌ ನಿರ್ಧಾರ ತೆಗೆದುಕೊಂಡಿದ್ದರು. ಮೌನ ಮೆರವಣಿಗೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ತಹಶೀಲ್ದಾರರಿಗೆ ಮನವಿ ಸಲ್ಲಿಸಲು ನಿರ್ಣಯಿಸಲಾಗಿತ್ತು. 
 
ಅದರಂಗವಾಗಿ ಸೋಮವಾರ ಬೆಳಿಗ್ಗೆ ರಾಮಮಂದಿರದ ಹತ್ತಿರ ಎಲ್ಲರೂ ಸೇರಿ ಅಲ್ಲಿಂದ ಹಳೆಯ ಪಿ.ಬಿ. ರಸ್ತೆ ಮಾರ್ಗವಾಗಿ ಕಿತ್ತೂರ ರಾಣಿ ಚನ್ನಮ್ಮ ವೃತ್ತ, ಕೋಠಿವಾಲೆ ವೃತ್ತ, ತಾನಾಜಿ ಚೌಕ್‌, ಶಿವಾಜಿ ಚೌಕ್‌, ಹಳೆಯ ವಾಹನ ನಿಲ್ದಾಣ ಮಾರ್ಗವಾಗಿ ಪ್ರವಾಸಿ ಮಂದಿರದ ಹಿಂಬದಿ ಇರುವ ತಹಶೀಲ್ದಾರರ ಕಾರ್ಯಾಲಯಕ್ಕೆ ಬಂದು ವಿಶೇಷ ತಹಶೀಲ್ದಾರ್ ಸಂಜಯ ಕಾಂಬಳೆ ಅವರಿಗೆ ಮನವಿ ಸಲ್ಲಿಸಿದರು. ಹಲವಾರು ಬೇಡಿಕೆಗಳೊಂದಿಗೆ ಶಾಲಾ ಕಾಲೇಜು ಆವರಣದಲ್ಲಿ ಸಿಸಿ ಟಿವಿ ಅಳವಡಿಕೆ, ತಪ್ಪಿತಸ್ಥ ಶಿಕ್ಷಕ ವರ್ಗದ ವಿರುದ್ಧ ಸೂಕ್ತ ಕ್ರಮ ಕೂಡಲೇ ಜರುಗಿಸಬೇಕೆಂದು ಒತ್ತಾಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.