ADVERTISEMENT

‘ಅಭಿವೃದ್ಧಿ ಕಾಮಗಾರಿಗೆ ಗಡುವು’

ವಿಮಾನ ನಿಲ್ದಾಣ; 18ರೊಳಗೆ ಪೂರ್ಣಗೊಳಿಸದಿದ್ದರೆ ಕಪ್ಪುಪಟ್ಟಿಗೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 7:10 IST
Last Updated 4 ಮಾರ್ಚ್ 2017, 7:10 IST

ಬೆಳಗಾವಿ: ‘ಸಾಂಬ್ರಾ ವಿಮಾನನಿಲ್ದಾಣದ ವಿಸ್ತರಣೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಇದೇ 19ರದು ಸ್ಮಾರ್ಟ್ ಸಿಟಿ ಯೋಜನೆಗೆ ಭೂಮಿಪೂಜೆ ನೆರವೇರಿಸಲು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಹಾಗೂ ವಿಮಾನಯಾನ ಸಚಿವ ಗಜಪತಿ ರಾಜು ಬರುತ್ತಿದ್ದು, ಆ ವೇಳೆಗೆ ವಿಮಾನ­ನಿಲ್ದಾಣ ಸೇವೆಗೆ ಸಿದ್ಧವಾ­ಗಬೇಕು’ ಎಂದು ಸಂಸದ ಸುರೇಶ ಅಂಗಡಿ ಇಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿಮಾನನಿಲ್ದಾಣದಲ್ಲಿ ಗುರುವಾರ ನಡೆದ ವಿಮಾನನಿಲ್ದಾಣ ಸಲಹಾಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ನಿಲ್ದಾಣದ ಅಭಿವೃದ್ಧಿ ಕಾರ್ಯ ಆಮೆವೇಗದಲ್ಲಿರುವುದನ್ನು ಗಮನಿಸಿದ ಸಂಸದರು, ವಿಮಾನ ನಿಲ್ದಾಣ ಪ್ರಾಧಿಕಾರದ ಪಾದೇಶಿಕಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್ ಮತ್ತು ಗುತ್ತಿಗೆದಾರ ಸಂತೋಷಮನ್ನೋಳ್ಳಿ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಹುಬ್ಬಳ್ಳಿ ವಿಮಾನ ನಿಲ್ದಾಣ ಕಾಮಗಾರಿ ತ್ವರಿತಗತಿಯಲ್ಲಿದೆ. ಆದರೆ, ಬೆಳಗಾವಿಯಲ್ಲಿ ಕುಂಟುತ್ತಿದೆ. ಇದಕ್ಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ. ಮಾರ್ಚ್‌ ೧೮ಕ್ಕೆ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ‘ಫೆ. 28ಕ್ಕೆ ಮುಗಿಯಬೇಕಿದ್ದ ಕಾಮಗಾರಿಗೆ ಅವಧಿ ವಿಸ್ತರಿಸಲಾಗಿದೆ. ಮಾ. 18ಕ್ಕೆ ಉದ್ಘಾಟನೆ ಸಜ್ಜಾಗಬೇಕು’ ಎಂದು ಸೂಚಿಸಿದರು.

ದರ ಕಡಿಮೆ ಮಾಡಬಹುದು
‘ವಿದೇಶ ವ್ಯಾಪಾರ ನಿರ್ದೇಶನಾಲ­ಯದ ಕಚೇರಿ ಬೆಳಗಾವಿಯಲ್ಲಿ ಕಾರ್ಯಾರಂಭ ಮಾಡಿರುವುದರಿಂದ ಕಾರ್ಗೋ ಹಾಗೂ ಬೋಯಿಂಗ್ ವಿಮಾನಗಳು ಕಾರ್ಯಾಚರಣೆಯನ್ನು ಇಲ್ಲಿಂದ ಶೀಘ್ರದಲ್ಲಿಯೇ ಆರಂಭಿಸಲಿವೆ. ಕೂಡಲೇ ವಿಮಾನ ನಿಲ್ದಾಣದ ಕಾಮಗಾರಿ ಮುಗಿಸಿದರೆ ಎಲ್ಲದಕ್ಕೂ ಅನುಕೂಲವಾಗುತ್ತದೆ’ ಎಂದು ಹೇಳಿದರು.

‘ಪ್ರಸ್ತುತ ಪ್ರತಿ ಪ್ಯಾಸೆಂಜರ್ ಟಿಕೆಟ್‌ ದರ ₹ 13 ಸಾವಿರದಿಂದ ₹ 14 ಸಾವಿರ­ದಷ್ಟಿದೆ. ₹ 2500ಕ್ಕೆ ಟಿಕೆಟ್‌ ದೊರೆ­ಯು­ವಂತಾಗಬೇಕು. ಪ್ರಧಾನಿ ಆಶಯದಂತೆ ವಿಮಾನ ಪ್ರಯಾಣದ ಟಿಕೆಟ್‌ ದರ ಇಳಿಸಬೇಕಾಗಿದೆ. ಸಣ್ಣ ವಿಮಾನಗಳು ಹಾರಾಡಿದರೆ, ದರ ಕಡಿಮೆ ಮಾಡ­ಲಾಗದು. ಬೋಯಿಂಗ್ ವಿಮಾನಗಳ ಕಾರ್ಯಾಚರಣೆ ಪ್ರಾರಂಭ­ವಾದಾಗ ದರ ಕಡಿಮೆ ಮಾಡಲು ಅವಕಾಶವಾಗುತ್ತದೆ’ ಎಂದು ಚರ್ಚಿಸಲಾಯಿತು.

‘ಬೇಗ ಕೆಲಸ ಮುಗಿಸಿದರೆ ದೊಡ್ಡ ವಿಮಾನಗಳ ಕಾರ್ಯಾಚರಣೆ ಆರಂಭ­ವಾಗುತ್ತದೆ’ ಎಂದು ಸಂಸದರು ಹೇಳಿದರು. ಸಾಂಬ್ರಾ ಮತ್ತು ವಿಮಾನ­ನಿಲ್ದಾಣ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳ­ಬೇಕು. ಉದ್ಯೋಗ ಖಾತ್ರಿಯಡಿ ಸ್ವಚ್ಛತಾ ಕೆಲಸ ಮಾಡಿಸಿ ಎಂದು ಸಾಂಬ್ರಾ ಗ್ರಾಮ ಪಂಚಾಯ್ತಿ ಪಿಡಿಒ ಡಿ.ಆರ್. ಚೌಗುಲೆ ಅವರಿಗೆ ಸೂಚಿಸಲಾಯಿತು.

‘ವಿಮಾನನಿಲ್ದಾಣದಲ್ಲಿ ಭದ್ರತೆ ಹೆಸರಿನಲ್ಲಿ ಪ್ರಯಾಣಿಕರಿಗೆ ಅವಮಾನ, ಕಿರಿಕಿರಿ ಮಾಡಬೇಡಿ. ಇದರಿಂದ, ಬೆಳಗಾವಿಗೆ ಕೆಟ್ಟ ಹೆಸರು ಬರುತ್ತದೆ. ವ್ಯಾಪಾರ– ವಹಿವಾಟಿಗೂ ತೊಡಕಾಗುತ್ತದೆ’ ಎಂದು ಸಂಸದರು ಪೊಲೀಸರಿಗೆ ಸೂಚಿಸಿದರು.

ಎಡಿಸಿ ಸುರೇಶ ಇಟ್ನಾಳ, ಡಿಸಿಪಿ ಜಿ. ರಾಧಿಕಾ, ಬಿಎಸ್‌ಎನ್ಎನ್‌ ಪ್ರಧಾನ ವ್ಯವಸ್ಥಾಪಕ ದೀಪಕ ತಯಾಲ್, ವಿಮಾನನಿಲ್ದಾಣದ ವ್ಯವಸ್ಥಾಪಕಿ ರಾಜೇಶ್ವರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.