ADVERTISEMENT

ಊರಿಗೊಂದೇ ಬಾವಿ; ಹನಿ ಹನಿ ನೀರಿಗೂ ಪರದಾಟ

ಘಟಪ್ರಭಾ ನದಿಗೆ ಹಿಡಕಲ್‌ ಜಲಾಶಯ ನಿರ್ಮಾಣಕ್ಕೆ ಮನೆ– ಮಠ ತೊರೆದವರ ಚಿಂತಾಜನಕ ಸ್ಥಿತಿ

ಶ್ರೀಕಾಂತ ಕಲ್ಲಮ್ಮನವರ
Published 20 ಮಾರ್ಚ್ 2017, 7:02 IST
Last Updated 20 ಮಾರ್ಚ್ 2017, 7:02 IST
ಬೆಳಗಾವಿ ಸಮೀಪದ ಹೊಸ ವಂಟಮುರಿ ಗ್ರಾಮದಲ್ಲಿರುವ ಏಕೈಕ ಬಾವಿಯಿಂದ ನೀರು ಪಡೆಯುತ್ತಿರುವ ದೃಶ್ಯ.
ಬೆಳಗಾವಿ ಸಮೀಪದ ಹೊಸ ವಂಟಮುರಿ ಗ್ರಾಮದಲ್ಲಿರುವ ಏಕೈಕ ಬಾವಿಯಿಂದ ನೀರು ಪಡೆಯುತ್ತಿರುವ ದೃಶ್ಯ.   

ಹೊಸವಂಟಮುರಿ (ಬೆಳಗಾವಿ ಜಿಲ್ಲೆ): ಇದು ಹತ್ತು ಸಾವಿರ ಜನರು ವಾಸವಿರುವ ಹಳ್ಳಿ. ಹಿಡಕಲ್‌ ಜಲಾಶಯ ನಿರ್ಮಾಣ ಕ್ಕಾಗಿ ತಮ್ಮ ಮನೆ, ಮಠ ತೊರೆದು ಸ್ಥಳಾಂತರಗೊಂಡವರು ಇವರು. ಇಲ್ಲೂ ಇವರಿಗೆ ನೀರಿನ ಕಾಟ ಮುಂದುವರಿದಿದೆ. ಅಲ್ಲಿ ನೀರು ಉಕ್ಕಿ ಬಂದಿದ್ದರೆ, ಇಲ್ಲಿ ಕಾಣಲಿಕ್ಕೂ ಸಿಗದಂತೆ ಮಾಯವಾಗಿ ಕಾಡುತ್ತಿದೆ. ಹನಿ ಹನಿ ನೀರಿಗೂ ಪರದಾಡುವ ಸ್ಥಿತಿ ಉದ್ಭವಿಸಿದೆ...

ಬೆಳಗಾವಿ ತಾಲ್ಲೂಕಿನ ಹೊಸ ವಂಟಮುರಿ ಗ್ರಾಮದ ಸ್ಥಿತಿ ಇದು. 1970ರ ದಶಕದಲ್ಲಿ ಹಿಡಕಲ್‌ ಬಳಿ ಘಟಪ್ರಭಾ ನದಿಗೆ ಜಲಾಶಯ ನಿರ್ಮಿಸ ಲಾಯಿತು. ಇದರ ಪರಿಣಾಮವಾಗಿ ಹಿನ್ನೀರಿನಲ್ಲಿ ವಂಟಮುರಿ ಗ್ರಾಮ ಮುಳುಗಡೆಯಾಯಿತು. ಈ ಗ್ರಾಮದ ಜನರನ್ನು ಹೊಸ ವಂಟಮುರಿಗೆ ಸ್ಥಳಾಂತರಿಸಲಾಯಿತು.

ಸ್ಥಳಾಂತರಗೊಂಡ ಕುಟುಂಬಗಳಿಗೆ ನಿವೇಶನ, ಮನೆ ಜೊತೆ ಎರಡು ಎಕರೆ ಭೂಮಿ ನೀಡಲಾಗಿತ್ತು. ಸುಂದರ ಬದುಕಿನ ಕನಸು ಹೊತ್ತು ಸ್ಥಳಾಂತರ ಗೊಂಡ ಗ್ರಾಮಸ್ಥರ ಕನಸು, ಐದು ದಶಕಗಳು ಕಳೆಯುತ್ತ ಬಂದಿದ್ದರೂ ಸಾಕಾರಗೊಂಡಿಲ್ಲ. ಸರ್ಕಾರ ನೀಡಿರುವ ಭೂಮಿ ಬರಡು ಭೂಮಿಯಾಗಿದ್ದು, ನಾಲ್ಕು ಇಂಚು ಕೆಳಗೆ ಕಲ್ಲಿನ ಪದರು ಗಳಿವೆ. ಕೃಷಿ ಮಾಡಲು ಸಾಧ್ಯವಾಗದೇ ಗ್ರಾಮಸ್ಥರು, ಭೂಮಿಯನ್ನು ಪಾಳು ಬಿಟ್ಟಿದ್ದಾರೆ.

ಹನಿ ಹನಿ ನೀರಿಗೂ ತತ್ವಾರ: ಈ ಗ್ರಾಮದಲ್ಲಿ ಒಂದೇ ಒಂದು ಬಾವಿ ಇದೆ. ಇದನ್ನು ಬಿಟ್ಟರೆ 3– 4 ಕಡೆ ಖಾಸಗಿಯಾಗಿ ಕೆಲವರು ಬೋರ್‌ವೆಲ್‌ ಕೊರೆಸಿದ್ದಾರೆ. ಈ ಬೋರ್‌ವೆಲ್‌ಗಳಲ್ಲಿ ನೀರು ಹನಿ ಹನಿಯಾಗಿ ಇಳಿಯುತ್ತದೆ. ಬೋರ್‌ವೆಲ್‌ ಕೊರೆಸಿದವರ ಮನೆಗಳಿಗೇ ಈ ನೀರು ಸಾಕಾಗದ ಸ್ಥಿತಿ ಇದೆ. ಹೀಗಾಗಿ ಇಡೀ ಗ್ರಾಮಕ್ಕೆ ಬಾವಿಯೊಂದೇ ಜಲಮೂಲ.

‘ದಿನವಿಡೀ ಜನರು ಈ ಬಾವಿಯ ಸುತ್ತುವರಿದು ನೀರು ತುಂಬಿಸಿ ಕೊಳ್ಳುತ್ತಾರೆ. ಯುವಕರು, ಮಕ್ಕಳು, ಮಹಿಳೆಯರು, ವೃದ್ಧರು ಎನ್ನದೇ ಎಲ್ಲರೂ ನೀರು ತುಂಬುವ ಕಾಯಕದಲ್ಲಿ ತೊಡಗುವ ಸ್ಥಿತಿ ಬಂದೊದಗಿದೆ’ ಎನ್ನುತ್ತಾರೆ ಗ್ರಾಮದ ನಿವೃತ್ತ ಶಿಕ್ಷಕ ನರಸಪ್ಪ ದಾದಾಗೋಳ.

‘ಶಾಲೆ ಬಿಟ್ಟ ತಕ್ಷಣ ಮಕ್ಕಳು ಬಿಂದಿಗೆ, ಕೊಡ ತೆಗೆದುಕೊಂಡು ಬಂದು ಬಾವಿ ಮುಂದೆ ನಿಲ್ಲುತ್ತಾರೆ. ಕಲ್ಲು, ಮಣ್ಣಿನ ಕಚ್ಚಾ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಾರೆ. ಎಷ್ಟೋ ಸಲ ಆಯತಪ್ಪಿ ಬಿದ್ದ ಉದಾಹರಣೆಗಳಿವೆ’ ಎಂದು ನೊಂದು ನುಡಿದರು.

ಡ್ರಮ್‌ ನೀರಿಗೆ ₹40: ‘ಬಾವಿಗೆ ಹೋಗಿ ನೀರು ತರಲು ಯಾರಿಗೆ ಸಾಧ್ಯವಿಲ್ಲವೋ ಅಂತಹವರು ಖಾಸಗಿ ವ್ಯಕ್ತಿಗಳಿಂದ ಟ್ಯಾಂಕರ್‌ ಮೂಲಕ ನೀರು ತರಿಸಿ ಕೊಳ್ಳುತ್ತಿದ್ದಾರೆ. ಸುಮಾರು 200 ಲೀಟರ್‌ ಅಳತೆಯ ಡ್ರಮ್‌ಗೆ ₹40 ಹಣ ನೀಡುತ್ತಿದ್ದಾರೆ’ ಎಂದು ಗ್ರಾಮಸ್ಥ ಮಹೇಶ ಹಂಚಿನಮನಿ ಹೇಳಿದರು.

‘ಕೆಲವು ವರ್ಷಗಳ ಹಿಂದೆ ಈ ಬಾವಿಗೆ ವಿದ್ಯುತ್‌ ಮೋಟಾರ್‌ ಅಳ ವಡಿಸಿ, ಮನೆ ಮನೆಗಳಿಗೆ ನೀರು ಪೂರೈಸಲು ಪ್ರಯತ್ನ ನಡೆಸಲಾಗಿತ್ತು. ಆದರೆ, ಇದು ಕಾರ್ಯರೂಪಕ್ಕೆ ಬರಲಿಲ್ಲ. ಅರ್ಧಕ್ಕೆ ನಿಂತು ಹೋಗಿದೆ. ನೀರಿಗಾಗಿ ಜನರು ಕಷ್ಟ ಪಡುವುದು ತಪ್ಪಿಲ್ಲ’ ಎಂದರು.

ಗ್ರಾಮದ ರೈತ ರಾಜು ನಾಯಕ ಮಾತನಾಡಿ, ‘ಗ್ರಾಮದಿಂದ 5–6 ಕಿ.ಮೀ ದೂರವಿರುವ ಮಾರ್ಕಂಡೇಯ ಜಲಾ ಶಯದಿಂದ ಕುಡಿಯುವ ನೀರು ಪೂರೈ ಸಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ಗಳು ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಇದು ಕಾರ್ಯಗತವಾಗಲಿ’ ಎಂದು ಆಶಯ ವ್ಯಕ್ತಪಡಿಸಿದರು.

ಉಚಿತ ಟ್ಯಾಂಕರ್‌ ನೀರಿಗೆ ಸೂಚನೆ: ಗ್ರಾಮದಲ್ಲಿರುವ ತೀವ್ರ ನೀರಿನ ಸಮಸ್ಯೆ ವೀಕ್ಷಿಸಿದ ಜಿಲ್ಲಾಧಿಕಾರಿ ಎನ್‌. ಜಯರಾಮ್‌, ಪ್ರತಿದಿನ ಉಚಿತವಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಸು ವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ನೀರು ಹೊತ್ತು ತರುವ ಗರ್ಭಿಣಿ ಯರ ಗರ್ಭಪಾತ ಸಂಭವಿಸಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಯಾಗಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಇಂತಹ ಯಾವ ಪ್ರಕರಣಗಳೂ ಸಂಭವಿ ಸಿಲ್ಲ’ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಅಪ್ಪಾಸಾಹೇಬ ನರಟ್ಟಿ ಹಾಗೂ ಆಯುಷ್‌ ವೈದ್ಯಾಧಿಕಾರಿ ಸೌಮ್ಯಾ ಕೌಜಲಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.