ADVERTISEMENT

ಕೃಷಿ ಜಮೀನು ಕಿತ್ತುಕೊಳ್ಳದಿರಲು ಮನವಿ

​ಪ್ರಜಾವಾಣಿ ವಾರ್ತೆ
Published 24 ಮೇ 2017, 9:46 IST
Last Updated 24 ಮೇ 2017, 9:46 IST

ಬೆಳಗಾವಿ: ‘ನಮಗಿರುವುದೊಂದೇ ಜಮೀನು. ಅದನ್ನೂ ಕಿತ್ತುಕೊಳ್ಳಬೇಡಿ...’ Bತಾಲ್ಲೂಕಿನ ಹಲಗಾ ಬಳಿ ತ್ಯಾಜ್ಯ ನೀರು ಸಂಸ್ಕರಣ ಘಟಕ (ಎಸ್‌ಟಿಪಿ) ಸ್ಥಾಪಿಸಲು ಜಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರು ಹಾಗೂ ರೈತ ಮಹಿಳೆಯರು, ನಗರಾಭಿವೃದ್ಧಿ ಸಚಿವ ಆರ್. ರೋಷನ್‌­ಬೇಗ್‌ ಅವರ ಎದುರು ಮಾಡಿಕೊಂಡ ಮನವಿ ಇದು.

ನಗರಪಾಲಿಕೆ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಘಟಕಕ್ಕಾಗಿ 19 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳ­ಲಾಗಿದೆ. ಇದನ್ನು ವಿರೋಧಿಸಿ ರೈತರು ಹೈಕೋರ್ಟ್‌ ಮೊರೆ ಹೋಗಿದ್ದರು. ನ್ಯಾಯಾಲಯವು ನಗರಪಾಲಿಕೆ ಪರ ಆದೇಶ ನೀಡಿದೆ. ಹೀಗಾಗಿ, ಜಮೀನನ್ನು ವಶಕ್ಕೆ ಪಡೆದಿರುವ ಘಟಕ ಸ್ಥಾಪನೆಯ ಪ್ರಕ್ರಿಯೆ ಕೈಗೊಂಡಿದ್ದರು. ಈ ನಡುವೆ, ರೈತರು ಮತ್ತೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ಜಮೀನನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇವರ ಹೋರಾಟಕ್ಕೆ ಕ್ಷೇತ್ರದ ಶಾಸಕ ಸಂಜಯ ಪಾಟೀಲ ಕೈಜೋಡಿಸಿದ್ದಾರೆ. ಇದರಿಂದಾಗಿ ಘಟಕ ಸ್ಥಾಪನೆ ಯೋಜನೆ ವಿವಾದಕ್ಕೆ ಒಳಗಾಗಿದೆ. ಹೀಗಾಗಿ, ಸಚಿವರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ, ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಸ್ಪಷ್ಟ ಭರವಸೆಯನ್ನೂ ಅವರು ನೀಡಲಿಲ್ಲ.

ADVERTISEMENT

ಅಲರವಾಡ ಬಳಿ ಇದೆ: ರೈತರ ಪರವಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಸಾಜಿದ್‌ ಸೈಯದ್‌, ‘ಘಟಕ ಸ್ಥಾಪಿಸಲು ತಾಲ್ಲೂಕಿನ ಅಲರವಾಡದಲ್ಲಿ ನಗರಪಾಲಿಕೆಗೆ ಸೇರಿದ ಜಾಗವನ್ನು ಹಿಂದೆ ಗುರುತಿಸಲಾಗಿತ್ತು. ಇದನ್ನು ಬಿಟ್ಟು ಹಲಗಾ ಬಳಿ ಫಲವತ್ತಾದ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡಿ­ಕೊಂಡಿರುವುದು ಸರಿಯಲ್ಲ.

ಈ ಜಮೀನಿನಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ ಹಾಗೂ ಇದರ ಮೇಲೆಯೇ ಅವಲಂಬಿತವಾಗಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿಯನ್ನೂ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

‘ಅಲರವಾಡದಲ್ಲಿ ಘಟಕ ಸ್ಥಾಪಿಸುವುದರಿಂದ ಯಾರಿಗೂ ತೊಂದರೆ ಇಲ್ಲ. ಕೃಷಿ ಜಮೀನು ಪಡೆದು ರೈತರಿಗೆ ತೊಂದರೆ ಕೊಡಬಾರದು. ರೈತರ ವಿಷಯದಲ್ಲಿ ರಾಜಕಾರಣ ಮಾಡಬಾರದು.

ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ಯಾವುದೇ ಪಕ್ಷದ ಸರ್ಕಾರವಿರಲಿ, ಕೃಷಿ ಜಮೀನನ್ನು ದಬ್ಬಾಳಿಕೆಯಿಂದ ಕಸಿದುಕೊಳ್ಳುವುದು ಸರಿಯಲ್ಲ’ ಎಂದು ಶಾಸಕ ಸಂಜಯ ಪಾಟೀಲ ಹೇಳಿದರು.

‘ಜಮೀನು ಬಿಟ್ಟುಕೊಡಲು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ನಮಗೆ ಕಿರುಕುಳ ನೀಡುತ್ತಿದ್ದಾರೆ. ಇದನ್ನು ತಪ್ಪಿಸಬೇಕು’ ಎಂದು ಸ್ಥಳೀಯರು ಸಚಿವರನ್ನು ಕೋರಿದರು.

‘ಇದು ಒಳ್ಳೆಯ ಕೃಷಿ ಜಮೀನು. ಇದನ್ನು ಕಿತ್ತುಕೊಂಡರೆ ನಾವು ಬೀದಿಗೆ ಬೀಳಬೇಕಾಗುತ್ತದೆ. ಆಗ, ವಿಷ ಸೇವಿಸದೇ ಬೇರೆ ದಾರಿ ಇರುವುದಿಲ್ಲ’ ಎಂದು ರೈತ ಮಹಿಳೆಯರು ಕಾಲಿಗೆರಗಿ ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಭೂಸ್ವಾಧೀನಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಮುಖ್ಯಮಂತ್ರಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಆಶ್ವಾಸನೆ ನೀಡಿದರು.

ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ‘ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು’ ಎಂದು ಕೋರಿ ಬೆಳಗಾವಿ ಶೇತ್ಕರಿ (ರೈತರ) ಸಂಘಟನೆಯಿಂದ ಪ್ರಧಾನಿ ನರೇಂಧ್ರ ಮೋದಿ ಅವರಿಗೂ ಪತ್ರ ಬರೆಯಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.