ADVERTISEMENT

ಕೋರ್ಟ್‌ ಅಂಡರ್‌ಪಾಸ್‌ ರಸ್ತೆ ಬಳಕೆ

ಸಾರ್ವಜನಿಕರು ಅಂಡರ್‌ಪಾಸ್‌ ರಸ್ತೆ ಬಳಸುವಂತೆ ಮಾಡಲು ಮೇಲಿನ ರಸ್ತೆ ಬಂದ್‌

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 4:59 IST
Last Updated 10 ಸೆಪ್ಟೆಂಬರ್ 2017, 4:59 IST
ಬೆಳಗಾವಿಯ ಕೋರ್ಟ್‌ ಬಳಿ ನಿರ್ಮಿಸಲಾಗಿರುವ ಅಂಡರ್‌ಪಾಸ್‌ ರಸ್ತೆಯಲ್ಲಿ ಆಟೊಗಳು ಶನಿವಾರ ಸಂಚರಿಸಿದ್ದು ಕಂಡುಬಂದಿತು
ಬೆಳಗಾವಿಯ ಕೋರ್ಟ್‌ ಬಳಿ ನಿರ್ಮಿಸಲಾಗಿರುವ ಅಂಡರ್‌ಪಾಸ್‌ ರಸ್ತೆಯಲ್ಲಿ ಆಟೊಗಳು ಶನಿವಾರ ಸಂಚರಿಸಿದ್ದು ಕಂಡುಬಂದಿತು   

ಬೆಳಗಾವಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಹೊಸ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಕ್ಕೆ ತೆರಳಲು ಜನರು ಬಳಸುತ್ತಿದ್ದ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಶನಿವಾರ ಬಂದ್‌ ಮಾಡಿದ್ದಾರೆ. ಈ ಮಾರ್ಗದಲ್ಲಿ ನಿರ್ಮಿಸಲಾಗಿರುವ ಅಂಡರ್‌ಪಾಸ್‌ (ಸಬ್‌ವೇ) ರಸ್ತೆಯನ್ನು ಬಳಸುತ್ತಿದ್ದಾರೆ.

‘ಮೂರು ವರ್ಷಗಳ ಹಿಂದೆ ನಿರ್ಮಿಸಲಾದ ಅಂಡರ್‌ಪಾಸ್‌ ರಸ್ತೆಯನ್ನು ಜನರು ಬಳಸುವಂತೆ ಮಾಡಲು ಮೇಲಿನ ರಸ್ತೆಯನ್ನು ಬಂದ್‌ ಮಾಡಿದ್ದೇವೆ. ಈ ರೀತಿ ಮಾಡುವಂತೆ ಲೋಕಾಯುಕ್ತ ನ್ಯಾಯಾಲಯವು ನಮಗೆ ಆದೇಶ ನೀಡಿತ್ತು. ಅದರನ್ವಯ ನಾವು ಕ್ರಮಕೈಗೊಂಡಿದ್ದೇವೆ’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್‌.ಬಿ. ದಾಮಣ್ಣವರ ಹೇಳಿದರು.

ಸುಮಾರು 3– 4 ವರ್ಷಗಳ ಹಿಂದೆ ಈ ರಸ್ತೆಯನ್ನು ದಾಟುತ್ತಿದ್ದ ಪಾದಚಾರಿಯೊಬ್ಬ ವಾಹನ ಅಪಘಾತದಲ್ಲಿ ಸಿಲುಕಿ ಮೃತಪಟ್ಟಿದ್ದ. ಆಗ ಸಾರ್ವಜನಿಕರು, ವಕೀಲರು ಅಂಡರ್‌ಪಾಸ್‌ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರು. ಇದರ ಫಲವಾಗಿ ಮಹಾನಗರ ಪಾಲಿಕೆಯವರು ₹ 1.5 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಿದರು. ನಂತರದ ದಿನಗಳಲ್ಲಿ ಸಾರ್ವಜನಿಕರು ಇದನ್ನು ಬಳಸದೇ ಮತ್ತೆ ಮೊದಲಿನಂತೆ ರಸ್ತೆಯ ಮೇಲೆ ಸಂಚರಿಸಲು ಆರಂಭಿಸಿದರು.

ADVERTISEMENT

ನ್ಯಾಯಾಲಯಕ್ಕೆ ಮೊರೆ: ಸಾರ್ವಜನಿಕರ ತೆರಿಗೆ ಹಣದಿಂದ ಸಬ್‌ವೇ ನಿರ್ಮಿಸಲಾಗಿದೆ. ಆದರೆ, ಬಳಕೆಯಾಗುತ್ತಿಲ್ಲ. ಇದೊಂದು ರೀತಿಯಲ್ಲಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಿದಂತೆ ಎಂದು ನಗರದ ನಿವಾಸಿ, ನಾಗರಾಜ ಶೆಟ್ಟಿ ಅವರು ಲೋಕಾಯುಕ್ತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

ಅರ್ಜಿದಾರರ ವಾದವನ್ನು ಆಲಿಸಿದ ನ್ಯಾಯಾಲಯವು, ‘ಅಂಡರ್‌ಪಾಸ್‌  ರಸ್ತೆ ಬಳಸಲು ಅನುವು ಆಗುವಂತೆ ಕ್ರಮಕೈಗೊಳ್ಳಬೇಕು’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಆದೇಶ ನೀಡಿತ್ತು.

ನ್ಯಾಯಾಲಯಕ್ಕೆ ವರದಿ: ‘ಅಂಡರ್‌ಪಾಸ್‌ ರಸ್ತೆಯನ್ನು ಜನರು ಬಳಸುವಂತೆ ಮಾಡಲು ನಾವು ಕೈಗೊಂಡಿರುವ ಕ್ರಮಗಳ ಬಗ್ಗೆ ಲೋಕಾಯುಕ್ತ ನ್ಯಾಯಾಲಯಕ್ಕೆ ಇದೇ ತಿಂಗಳ 14ರಂದು ವರದಿ ನೀಡಲಿದ್ದೇನೆ’ ಎಂದು ದಾಮಣ್ಣವರ ಹೇಳಿದರು.

ನುಗ್ಗಿದ ಆಟೊ:   ಅಂಗವಿಕಲರ ಗಾಲಿಖುರ್ಚಿಗಳಿಗೆ ಸಂಚರಿಸಲು ಅನುಕೂಲವಾಗಲೆಂದು ಅಂಡರ್‌ಪಾಸ್‌ನ ಒಂದು ಬದಿ ರ್‌್ಯಾಂಪ್‌ ನಿರ್ಮಿಸಲಾಗಿದೆ. ಇದನ್ನು ಬಳಸಿಕೊಂಡು ಕೆಲವು ಆಟೊಗಳು, ಬೈಕ್‌ಗಳು ಸಂಚರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.