ADVERTISEMENT

‘ಖಜಾನೆ ಖಾಲಿ ಮಾಡಿದ್ದೇ ಸಾಧನೆ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 6:28 IST
Last Updated 22 ನವೆಂಬರ್ 2017, 6:28 IST

ಚಿಕ್ಕೋಡಿ:  ‘ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರ ಬಿಡುವಾಗ ಖಜಾನೆ ಬರಿದಾಗಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರೂವರೆ ವರ್ಷದಲ್ಲಿ ಖಜಾನೆ ಯನ್ನು ತುಂಬಿಸಿದೆ. ನೀರಾವರಿ, ವಿದ್ಯುತ್‌, ರೈಲ್ವೆ ಕ್ಷೇತ್ರಗಳಲ್ಲಿ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ’ ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಪಟ್ಟಣದಲ್ಲಿ ಮಂಗಳವಾರ ಸಂಜೆ ನಡೆದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.

‘ಬೆಳಗಾವಿಯಲ್ಲಿ ₹ 450 ಕೋಟಿ ಖರ್ಚು ಮಾಡಿ ಸುವರ್ಣ ವಿಧಾನಸೌಧ ಕಟ್ಟಿಸಿದ್ದೇವೆ. ಅಲ್ಲಿ ಸರ್ಕಾರಿ ಕಚೇರಿಗಳನ್ನು ತೆರೆದು ಈ ಭಾಗದ ಜನರಿಗೆ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂಬ ಕನಸು ಕಂಡಿದ್ದೆ. ಆದರೆ, ಈಗಿನ ಸರ್ಕಾರ ವರ್ಷಕ್ಕೆ ₹ 2, 3 ಕೋಟಿ ಖರ್ಚು ಮಾಡಿ ಕಸ ಗೂಡಿಸುವ ಕೆಲಸ ಮಾಡುತ್ತಿದೆ’ ಎಂದು ಟೀಕಿಸಿದರು.

‘ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸದಸ್ಯರು ಕಮೀಷನ್ ಏಜೆಂಟರಾಗಿದ್ದಾರೆ. ರಾಜ್ಯ ಸರ್ಕಾರ ಹಗಲು ದರೋಡೆ ನಡೆಸುತ್ತಿದೆ’ ಎಂದರು. ‘ಬೆಳಗಾವಿ ಜಿಲ್ಲೆಯ ಬಿಜೆಪಿಯ ಎಲ್ಲ ಮುಖಂಡರು ಒಂದಾದರೆ 15 ಕ್ಷೇತ್ರಗಳಲ್ಲಿ ಗೆಲುವು ಸಾಧ್ಯ. ಆ ಕೆಲಸವನ್ನು ಮುಖಂಡರು ಮಾಡಬೇಕು. ಹಣಬಲ, ತೋಳ್ಬಲ, ಅಧಿಕಾರ ಬಲದಿಂದ ಆಯ್ಕೆಯಾಗುವವರಿಗೆ ಜನ ತಕ್ಕ ಪಾಠ ಕಲಿಸಬೇಕು’ ಎಂದು ಯಡಿಯೂರಪ್ಪ ಮನವಿ ಮಾಡಿಕೊಂಡರು.

ADVERTISEMENT

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ, ಶಾಸಕ ಲಕ್ಷ್ಮಣ ಸವದಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿದರು. ಅಣ್ಣಾ ಸಾಹೇಬ ಜೊಲ್ಲೆ ಸ್ವಾಗತಿಸಿದರು. ಶಾಸಕ ಉಮೇಶ ಕತ್ತಿ,ಡಿ.ಎಂ.ಐಹೊಳೆ, ಶಶಿಕಲಾ ಜೊಲ್ಲೆ, ಶಶಿಕಾಂತ ನಾಯಿಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.