ADVERTISEMENT

ಜಾತ್ರೆಗೆ ರಂಗು ತುಂಬಿದ ಕುಸ್ತಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 5:34 IST
Last Updated 10 ನವೆಂಬರ್ 2017, 5:34 IST
ಬೈಲಹೊಂಗಲದಲ್ಲಿ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಗೆ ಶಾಸಕ ಡಾ.ವಿಶ್ವನಾಥ ಪಾಟೀಲ ಚಾಲನೆ ನೀಡಿದರು. ಮುಖಂಡರಾದ ಮಡಿವಾಳಪ್ಪ ಹೋಟಿ, ಸಿ.ಕೆ. ಮೆಕ್ಕೇದ ಇದ್ದಾರೆ
ಬೈಲಹೊಂಗಲದಲ್ಲಿ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಗೆ ಶಾಸಕ ಡಾ.ವಿಶ್ವನಾಥ ಪಾಟೀಲ ಚಾಲನೆ ನೀಡಿದರು. ಮುಖಂಡರಾದ ಮಡಿವಾಳಪ್ಪ ಹೋಟಿ, ಸಿ.ಕೆ. ಮೆಕ್ಕೇದ ಇದ್ದಾರೆ   

ಬೈಲಹೊಂಗಲ: ಸುಡುಬಿಸಿಲಲ್ಲೂ ಕೆಮ್ಮಣ್ಣಿನ ಮಟ್ಟಿಯಲ್ಲಿ ಪೈಲ್ವಾನರು ಪ್ರಸ್ತುತಪಡಿಸಿದ ಪಟ್ಟು– ಪ್ರತಿ ಪಟ್ಟು. ಏದುಸಿರುಬಿಡುತ್ತಲೇ ಎದುರಾಳಿಯನ್ನು ಹೆಡಮುರಿ ಕಟ್ಟಿ ಪಂದ್ಯ ಗೆಲ್ಲುವ ಅದಮ್ಯ ಉತ್ಸಾಹ. ಕಾದಾಟ ವೀಕ್ಷಿಸಲು ನೆರೆದಿದ್ದ ಸಾವಿರಾರ ಜನ. ಪಟ್ಟಣದ ಮರಡಿ ಬಸವೇಶ್ವರ ಜಾತ್ರೆ ಅಂಗವಾಗಿ ಹನುಮಂತ ದೇವಸ್ಥಾನ ಪಕ್ಕದ ಮೈದಾನದಲ್ಲಿ ನಡೆದ ಕುಸ್ತಿ ಪಂದ್ಯಾವಳಿ ವೇಳೆ ಕಂಡುಬಂದ ದೃಶ್ಯಗಳಿವು.

ಜಾತ್ರಾ ಮಹೋತ್ಸವ ಸಮಿತಿ, ಕ್ರೀಡಾ ಮತ್ತು ಕಲಾವೇದಿಕೆ, ಶಾಸಕ ಡಾ.ವಿಶ್ವನಾಥ ಪಾಟೀಲ ಅಭಿಮಾನಿ ಬಳಗ ಮತ್ತು ವರ್ತಿಸಿದ್ದ ಬಸವೇಶ್ವರ ಸೊಸೈಟಿ ವತಿಯಿಂದ ಗುರುವಾರ ಸಂಜೆ ನಡೆದ ಅಂತರರಾಜ್ಯ ಮಟ್ಟದ ಹೊನಲು ಬೆಳಕಿನ ಬೈಲು ಕಣದ ಕುಸ್ತಿ ಪಂದ್ಯಾವಳಿ ನೆರೆದಿದ್ದವರಲ್ಲಿ ರೋಮಾಂಚನ ಮೂಡಿಸಿತು.

ಕಾದಾಡಿದ ಮಲ್ಲರು ಕೆಂಪು ಮಣ್ಣಿನಲ್ಲಿ ಮಿಂದೆದ್ದರು. ಅವರು ರೆಟ್ಟೆ, ತೊಡೆ ತಟ್ಟಿಕೊಂಡು ಕಣಕ್ಕಿಳಿಯುತ್ತಿದ್ದ ದೃಶ್ಯ ವೀಕ್ಷಕರನ್ನು ಪುಳಕಿತಗೊಳಿಸಿತು. ಜನರು ಕೇಕೆ, ಸಿಳ್ಳೆ, ಚಪ್ಪಾಳೆ ಮೂಲಕ ಪೈಲ್ವಾನರನ್ನು ಪ್ರೋತ್ಸಾಹಿಸಿದರು. ಪೈಲ್ವಾನರು ಪಟ್ಟುಗಳನ್ನು ಪ್ರದರ್ಶಿಸಿ ಜನರನ್ನು ನಿಬ್ಬೆರಗಾಗಿಸಿದರು. ರಾಜ್ಯ ಹಾಗೂ ಹೊರರಾಜ್ಯಗಳ ಪೈಲ್ವಾನರು ತಮ್ಮ ಕೌಶಲ ಪ್ರದರ್ಶಿಸಿದರು.

ADVERTISEMENT

ಶಾಸಕ ಡಾ.ವಿಶ್ವನಾಥ ಪಾಟೀಲ, ಸಿಪಿಐ ಸಂಗನಗೌಡ, ಪಿಎಸ್ಐ ಮಂಜುನಾಥ ಹಿರೇಮಠ, ಮುಖಂಡರಾದ ಮಡಿವಾಳಪ್ಪ ಹೋಟಿ, ಸಿ.ಕೆ. ಮೆಕ್ಕೇದ, ಶ್ರೀಶೈಲ ಯಡಳ್ಳಿ ಚಾಲನೆ ನೀಡಿದರು.

ಪಂದ್ಯಗಳು: ಮೊದಲ ಪಂದ್ಯದಲ್ಲಿ ಕೊಲ್ಲಾಪುರದ ಸಂತೋಷ ದರುಡ ಮಾಡಿದ ‘ಗಿಸ್ಸಾ ಡಾವ’ಗೆ ಹರಿಯಾಣದ ಸುನೀಲ ದಲಾಲ ಚಿತ್ತಾದರು. ಎರಡನೇ ಜೋಡಿಯಲ್ಲಿ ಕೊಲ್ಲಾಪುರದ ನಿಲೇಶ ತರಂಗಿ ಹಾಗೂ ಬೆಳಗಾವಿ ದರ್ಗಾ ತಾಲೀಮ ಅಪ್ಪಾಸಾಬ ಇಂಗಳಗಿ ನಡುವಿನ ಸ್ಪರ್ಧೆ ಸಮಬಲದಲ್ಲಿ ಕೊನೆಗೊಂಡಿತು.

ಇನ್ನೊಂದು ಹೋರಾಟದಲ್ಲಿ ದಾವಣಗೆರೆಯ ಕಾರ್ತಿಕ್‌ ಕಾಟೆ ಅವರು ಪಾಂಡುರಂಗ ಮಾಂಡವೆ ಅವರನ್ನು ಚಿತ್‌ ಮಾಡಿದರು. ಬೆಳಗಾವಿಯ ಬಸು ಚಿಮ್ಮಡ– ಮಹಾರಾಷ್ಟ್ರದ ರಾಮದಾಸ ಪವಾರ ನಡುವಿನ ಪಂದ್ಯ ಸಮವಾಯಿತು.

ಕೊಲ್ಲಾಪುರದ ಪ್ರವೀಣ ದೊಡವಾಡ ವಿರುದ್ಧ ಸಾಂಗ್ಲಿಯ ಮಂಜುನಾಥ ಸಾಂಗ್ಲಿ ಸೋಲನುಭವಿಸಿದರು. ಶಂಕರ ಚಿಕ್ಕಬಾಗೇವಾಡಿ ವಿರುದ್ಧ ಬಸವರಾಜ ಚಿಂಚಲಿ ಚಿತ್ತಾದರು.
ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಎಷ್ಟು ಎನ್ನುವುದನ್ನು ಸಂಘಟಕರು ಬಹಿರಂಗಪಡಿಸಲಿಲ್ಲ. ಇನ್ನೊಂದು ಪಂದ್ಯದಲ್ಲಿ ಪ್ರಶಾಂತ್‌ ಅಥಣಿ ವಿರುದ್ಧ ಗೆದ್ದ ಸ್ಥಳೀಯ ಪೈಲ್ವಾನ್‌ ಪ್ರಕಾಶ ಬೆಟಗೇರಿ ಅವರಿಗೆ ಬಹುಮಾನವಾಗಿ ಟಗರನ್ನು ನೀಡಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆಯಿಂದಲೂ ಐದು ಜೋಡಿ ಕುಸ್ತಿ ಪಂದ್ಯಗಳು ನಡೆದವು. ವರ್ತಿಸಿದ್ದ ಬಸವೇಶ್ವರ ಸೊಸೈಟಿ ಅಧ್ಯಕ್ಷ ಬಿ.ಎಂ. ಕುಡಸೋಮಣ್ಣವರ, ಗಂಗಪ್ಪ ಬೋಳನ್ನವರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ, ರಾಮು ಕುಡಸೋಮಣ್ಣವರ, ಬಾಬು ಕುಡಸೋಮಣ್ಣವರ, ಅಬ್ದುಲ್‌ ರೆಹಮಾನ ನಂದಗಡ, ಮುಖಂಡರಾದ ಪಂಚರಾಗಿ ಸಣ್ಣಬಸಪ್ಪ ಕುಡಸೋಮಣ್ಣವರ, ಸಿದ್ರಾಯ ಕುದರಿ, ವಿಠ್ಠಲ ಅಂದಾನಿ, ಉಳವಪ್ಪ ಉಪ್ಪಿನ, ಅಶೋಕ ಮತ್ತಿಕೊಪ್ಪ, ಚನ್ನಪ್ಪ ಬೆಟಗೇರಿ, ಅಲ್ಲಾಭಕ್ಷ ದಾಸ್ತಿಕೊಪ್ಪ ನಿರ್ವಹಿಸಿದರು. ಶಿಕ್ಷಕ ದುಂಡಪ್ಪ ಅಕ್ಕಿ, ಚಂದ್ರಕಾಂತ ಕಾರಜೋಳ, ಸೋಮಲಿಂಗ ಬೋರಕ್ಕನವರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.