ADVERTISEMENT

ಜಿಲ್ಲೆಯಲ್ಲಿ ತೀವ್ರಗೊಳ್ಳುತ್ತಿದೆ ನೀರಿಗಾಗಿ ಪಡಿಪಾಟಲು

ಎಂ.ಮಹೇಶ
Published 13 ಮಾರ್ಚ್ 2017, 5:28 IST
Last Updated 13 ಮಾರ್ಚ್ 2017, 5:28 IST

ಬೆಳಗಾವಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬೇಸಿಗೆ–ಬರಗಾಲದ ತೀವ್ರತೆ ಹೆಚ್ಚಾಗುತ್ತಿದ್ದು, ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತತ್ವಾರ
ಆರಂಭವಾಗಿದೆ. ಈ ಬೇಸಿಗೆಯಲ್ಲಿ 217ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ಸತತ ಮೂರನೇ ವರ್ಷವೂ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನೂ ಸರ್ಕಾರ ‘ಬರಪೀಡಿತ ತಾಲ್ಲೂಕುಗಳು’ ಎಂದು ಘೋಷಿಸಿದೆ. ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೆಳೆ ರೈತರ ಕೈಗೆ ಬರಲಿಲ್ಲ. ಮುಂಗಾರಿನಲ್ಲಿ ಬರೋಬ್ಬರಿ ಶೇ 84ರಷ್ಟು ಮಳೆ ಕೊರತೆಯಿಂದಾಗಿ, ಬೆಳೆ ನಷ್ಟ ಸಂಭವಿಸಿದೆ. ಈ ಸಂಕಷ್ಟದ ನಡುವೆಯೇ ಇದೀಗ ನೀರಿಗಾಗಿ ಪಡಿಪಾಟಲು ಪಡುವ ಸ್ಥಿತಿ ಹಳ್ಳಿಗಳಲ್ಲಿ ಕಂಡುಬರುತ್ತಿದೆ. ಕುಡಿಯುವ ನೀರಿಗಾಗಿ ಮಹಿಳೆಯರು ಹಾಗೂ ಮಕ್ಕಳು ಅಲೆಯುವಂತಾಗಿದೆ. ಈಗಲೇ ಹೀಗಾದರೆ, ಬಿರುಬೇಸಿಗೆಯ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗೆ ಎನ್ನುವ ಆತಂಕವನ್ನು ಗ್ರಾಮೀಣ ಜನರು ವ್ಯಕ್ತಪಡಿಸುತ್ತಿದ್ದಾರೆ.

ನೀರಿಗಾಗಿ ಅಲೆದಾಟ: ಕೊಳವೆಬಾವಿಗಳು, ಬಾವಿಗಳ ಬಳಿ ಬಿಂದಿಗೆಗಳ ಸಾಲು ಸಾಲು ಕಂಡುಬರುತ್ತಿದೆ. ದೂರದ ಜಮೀನು, ತೋಟಗಳಲ್ಲಿರುವ ಕೊಳವೆಬಾವಿಗಳ ಬಳಿಗೆ ಬೈಸಿಕಲ್‌, ತಳ್ಳುಗಾಡಿಯಲ್ಲಿ ಬಿಂದಿಗೆಗಳನ್ನು ಇಟ್ಟುಕೊಂಡು ನೀರಿಗಾಗಿ ಅಲೆಯುವುದು ಸಾಮಾನ್ಯವಾಗಿದೆ. ಒಂದಿಂಚು, ಎರಡಿಂಚು ಪ್ರಮಾಣದಲ್ಲಷ್ಟೇ ಬರುವ ನೀರಿಗಾಗಿ ಕೊಳವೆಬಾವಿಗಳ ಮುಂದೆ ಹತ್ತಾರು ಮಂದಿ ಕಾಯುವುದು ಸಾಮಾನ್ಯವಾಗಿದೆ.

ADVERTISEMENT

ಜಿಲ್ಲೆಯ ಮುರಕಿಭಾವಿ, ನಾಗನೂರು, ಮದನಭಾವಿ, ಲಕ್ಕುಂಡಿ, ನಾಗರಮುನ್ನೋಳಿ, ಬೆಳಗಲಿ, ಬೆಳಕೋಡ, ಕರಗಾಂವಿ, ಬಬಲವಾಡ, ದನವಾಡ, ಉಮರಾಣಿ, ಇಟ್ನಾಳ ಮೊದಲಾದ ಗ್ರಾಮಗಳ ಅಂದಾಜು 40,000ಕ್ಕೂ ಹೆಚ್ಚು ಜನರಿಗೆ 44 ಟ್ರಿಪ್‌ಗಳಲ್ಲಿ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್‌ ನೀರು ಪೂರೈಸುವ ಹಳ್ಳಿಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಪ್ರಸ್ತುತ ಲಭ್ಯವಿರುವ ಮೇವು 6ರಿಂದ 8 ವಾರಗಳಿಷ್ಟೇ ಸಾಕಾಗಲಿದೆ.

ತೊಂದರೆಯಾಗದಂತೆ ಕ್ರಮ: ‘ಜಿಲ್ಲೆಯಲ್ಲಿ ಬರಗಾಲ ನಿರ್ವಹಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಜಿಲ್ಲಾಡಳಿತದ ಬಳಿ ₹12.50 ಕೋಟಿ ಅನುದಾನವೂ ಲಭ್ಯವಿದೆ. ಸರ್ಕಾರದಿಂದ ಜಿಲ್ಲಾ ಪಂಚಾಯ್ತಿಗೂ ಅನುದಾನ ದೊರೆಯುತ್ತದೆ. ಅದನ್ನೆಲ್ಲ ಬಳಸಿ, ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನಿಗಾ ವಹಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಎನ್‌. ಜಯರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಜಿಲ್ಲೆಯ ವಿವಿಧ 17 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. 5 ಮೇವು ಬ್ಯಾಂಕ್‌ ಹಾಗೂ 6 ಗೋಶಾಲೆಗಳನ್ನು ತೆರೆಯಲಾಗಿದೆ. ಮೇವನ್ನು ಹೊರರಾಜ್ಯಗಳಿಗೆ ಸಾಗಿಸುವುದಕ್ಕೆ ನಿಷೇಧ ಹೇರಲಾಗಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ನಿಗಾ ವಹಿಸಲಾಗಿದೆ. ಯರಗಟ್ಟಿ ಭಾಗದಲ್ಲಿ ಕೆಲವರು ಹೊರರಾಜ್ಯಕ್ಕೆ ಮೇವು ಮಾರುತ್ತಿದ್ದರು. ಇದನ್ನು ತಡೆಯಲಾಗಿದೆ. ಯಾವುದೇ ಹಳ್ಳಿಯಲ್ಲಿ ನೀರಿಗೆ ತತ್ವಾರ ಇರುವುದು ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ತೊಂದರೆ ನಿವಾರಿಸಲು ಸ್ಥಳದಲ್ಲಿಯೇ ನಿರ್ಧಾರ ಕೈಗೊಂಡು, ಟ್ಯಾಂಕರ್‌ ಮೂಲಕ ನೀರು ಒದಗಿಸಬೇಕು. ಅನುಮತಿಗಾಗಿ ಕಾಲಹರಣ ಮಾಡಬಾರದು ಎಂದು ಸೂಚಿಸಲಾಗಿದೆ. ಇದಕ್ಕಾಗಿ ಹಣವನ್ನೂ ಒದಗಿಸಲಾಗಿದೆ’ ಎನ್ನುತ್ತಾರೆ ಅವರು.

ತಾಲ್ಲೂಕುಮಟ್ಟದ ಅಧಿಕಾರಿಗೇ ಅಧಿಕಾರ: ಅಗತ್ಯ ಇರುವ ಕಡೆ ಕೊಳವೆಬಾವಿಯ ಆಳವನ್ನು ಹೆಚ್ಚಿಸಲಾಗುವುದು. ಹೆಚ್ಚಿನ ನೀರು ಪಡೆಯಲು ಕೊಳವೆಬಾವಿಗೆ ಹೈಡ್ರೊ ಫ್ಯಾಕ್ಚರಿಂಗ್ ಮಾಡಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಸದಾ ಸನ್ನದ್ಧರಾಗಿರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಲವೆಡೆ ಟ್ಯಾಂಕರ್‌ ಮಾಲೀಕರು ಕೃತಕ ನೀರಿನ ಅಭಾವ ಸೃಷ್ಟಿಸುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರು ಬಂದ ತಕ್ಷಣವೇ ತಹಶೀಲ್ದಾರ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಸಹಾಯಕ ಎಂಜಿನಿಯರ್‌  ಒಳಗೊಂಡ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ನಿಜವಾಗಿಯೂ ಸಮಸ್ಯೆ ಇರುವುದು ಕಂಡುಬಂದರೆ, ತಕ್ಷಣವೇ ಜಲ ಮೂಲ ಪತ್ತೆ ಮಾಡಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ನೀರು ಲಭ್ಯವಿರುವ ಖಾಸಗಿಯವರ ಬಾವಿ, ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು, ಸ್ಥಳೀಯ ಜನರಿಗೆ ನೀರು ಪೂರೈಸುವುದಕ್ಕೂ ಉದ್ದೇಶಿಸಲಾಗಿದೆ. ಇದಕ್ಕಾಗಿ ವಿವಿಧೆಡೆ 60ಕ್ಕೂ ಹೆಚ್ಚು ಖಾಸಗಿಯವರ ಬಾವಿ, ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಮಾಲೀಕರಿಗೆ ಇಂತಿಷ್ಟು ಹಣ ನೀಡಿ, ಅಲ್ಲಿಂದ ನೀರು ಪಡೆದು ಪೂರೈಸಲಾಗುವುದು. ಬರಗಾಲ ಇರುವುದರಿಂದ ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲಿಯೂ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಮುಂದುವರಿಯಲಿದೆ. ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಳ್ಳುವಂತೆ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಔಷಧಿಗಳು ಲಭ್ಯವಿರುವಂತೆ ನೋಡಿಕೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

**

ನೀರೆತ್ತದಂತೆ ನೋಡಿಕೊಳ್ಳಲು...

ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಜೀವ ನದಿ­ಯಾದ ಕೃಷ್ಣೆ ನಿರ್ಮಿಸಲಾಗಿರುವ ಹಿಪ್ಪರಗಿ ಜಲಾಶಯದಲ್ಲಿ ಕೇವಲ ಅರ್ಧ ಟಿಎಂಸಿಯಷ್ಟು ಮಾತ್ರವೇ ನೀರಿದೆ. ಹೀಗಾಗಿ, ನದಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಪಂಪ್‌ಸೆಟ್‌ ಮೂಲಕ ನೀರೆತ್ತುವುದನ್ನು ತಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿ ವಾರ ಬುಧವಾರ ಹಾಗೂ ಗುರುವಾರ ವಿದ್ಯುತ್‌ ಪೂರೈಕೆ ಕಡಿತಗೊಳಿಸಬೇಕು. ಈ ಮೂಲಕ ಜಲಾಶಯ ಬರಿದಾಗುವುದನ್ನು ತಡೆಯಬೇಕು. ಕುಡಿಯುವ ಉದ್ದೇಶಕ್ಕಾಗಿ ನೀರನ್ನು ಕಾಯ್ದಿಟ್ಟುಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ, ಕೊಲ್ಲಾಪುರ ಜಿಲ್ಲೆಯ ಜಿಲ್ಲಾಧಿಕಾರಿಗೂ ಪತ್ರ ಬರೆಯಲಾಗಿದೆ ಎಂದು ಪ್ರಾದೇಶಿಕ ಆಯುಕ್ತರೂ ಆಗಿರುವ ಎನ್‌. ಜಯರಾಮ್ ತಿಳಿಸಿದರು.

**

ಶುದ್ಧೀಕರಣ ಘಟಕಕ್ಕೂ ಟ್ಯಾಂಕರ್‌ ನೀರು!

’ಜಿಲ್ಲೆಯಲ್ಲಿ ನೀರು ಹಾಗೂ ನೈರ್ಮಲ್ಯ ಇಲಾಖೆಯಿಂದ 139 ಹಾಗೂ ಕೆಆರ್‌ಇಡಿಎಲ್‌ ವತಿಯಿಂದ 800ಕ್ಕೂ ಹೆಚ್ಚು ನೀರು ಶುದ್ಧೀಕರಣ ಘಟಕಗಳನ್ನು ಗ್ರಾಮೀಣ ಪ್ರದೇಶದಲ್ಲಿ ಅಳವಡಿಸಲಾಗಿದೆ.

ಇವುಗಳಿಗೆ ನೀರಿನ ಮೂಲದಲ್ಲಿ ಕೊರತೆ ಕಂಡುಬಂದರೆ, ಕೂಡಲೇ ಟ್ಯಾಂಕರ್‌ನಲ್ಲಿಯೇ ನೀರು ಪೂರೈಸಿ ಶುದ್ಧೀಕರಿಸಿ ಸ್ಥಳೀಯರಿಗೆ ಒದಗಿಸಬೇಕು. ಘಟಕಗಳು ನಿಷ್ಕ್ರಿಯವಾಗಿರದಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.

‘ಶುದ್ಧೀಕರಣ ಘಟಕಕ್ಕೂ ಟ್ಯಾಂಕರ್‌ ನೀರು ಪೂರೈಸುವ ಕುರಿತು ಸರ್ಕಾರದಿಂದ ಆದೇಶ ಬಂದಿದೆ. ಇಲಾಖೆಯಿಂದ 139 ನೀರು ಶುದ್ಧೀಕರಣ ಘಟಕಗಳನ್ನು ಜಿಲ್ಲೆಯಲ್ಲಿ ಅಳವಡಿಸಲಾಗಿದೆ. ಇವುಗಳಲ್ಲಿ ನೀರಿನ ಕೊರತೆ, ತಾಂತ್ರಿಕ ಸಮಸ್ಯೆಯಿಂದ 10 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಇವುಗಳನ್ನು ಕೂಡಲೇ ಚಾಲನೆಗೊಳಿಸುವಂತೆ ನಿರ್ವಹಣಾ ಏಜೆನ್ಸಿಗೆ ಸೂಚಿಸಲಾಗಿದೆ. 35 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿರುವುದರಿಂದ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಟ್ಯಾಂಕರ್‌ ನೀರು ಪೂರೈಕೆ ಮಾಡುವ ಹಳ್ಳಿಗಳ ಪ್ರಮಾಣ ಕಡಿಮೆ ಇದೆ. ನದಿಗಳಲ್ಲಿ ನೀರು ಲಭ್ಯವಾಗುವವರೆಗೂ ನೀರು ಪೂರೈಕೆಗೆ ತೊಂದರೆ ಆಗುವುದಿಲ್ಲ’ ಎನ್ನುತ್ತಾರೆ ನೀರು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ವಿ.ಜೆ. ರಾಯ್ಕರ.

**

ಮೇವು ಕೊರತೆ ಆಗದಂತೆ ನೋಡಿಕೊಳ್ಳಲು ಹುನಗುಂದದಿಂದ ಮೇವು ತರಿಸಲಾಗುತ್ತಿದೆ. ಜಿಲ್ಲೆಯಿಂದ ಹೊರರಾಜ್ಯಕ್ಕೆ ಮೇವು ಸಾಗಾಟ ನಿಷೇಧಿಸಲಾಗಿದೆ.
–ಎನ್‌. ಜಯರಾಮ್‌
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.