ADVERTISEMENT

ಟ್ರಾಫಿಕ್‌ ಸಮಸ್ಯೆ ಬಗೆಹರಿಸಲು ಆದ್ಯತೆ

ಸ್ಮಾರ್ಟ್‌ ಸಿಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಸುರೇಶ ಅಂಗಡಿ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 6:08 IST
Last Updated 12 ಜುಲೈ 2017, 6:08 IST

ಬೆಳಗಾವಿ: ನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದ್ದು, ಪಾರ್ಕಿಂಗ್‌ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಇದಕ್ಕೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಂಸದ ಸುರೇಶ ಅಂಗಡಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಕಾಡಾ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಸ್ಮಾರ್ಟ ಸಿಟಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕಿರಿದಾದ ರಸ್ತೆಗಳು ಹಾಗೂ ಪಾರ್ಕಿಂಗ್ ಸಮಸ್ಯೆಯಿಂದಾಗಿ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಪೊಲೀಸ್ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಜಂಟಿಯಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು.  ಮುಂದಿನ 30 ವರ್ಷದ ಲೆಕ್ಕಾಚಾರದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

ತೆರವಿಗೆ ವಿರೋಧವಿಲ್ಲ: ನಗರದ ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಅಂಗಡಿಗಳ ತೆರವಿಗೆ ತಮ್ಮದು ಯಾವುದೇ ರೀತಿಯ ವಿರೋಧವಿಲ್ಲ  ಎಂದರು.
ಸಂಚಾರ ವಿಭಾಗದ ಡಿಸಿಪಿ ಅಮರನಾಥ ರೆಡ್ಡಿ ಮಾತನಾಡಿ, ಬೆಳಗಾವಿ ಮಹಾನಗರದಲ್ಲಿ ಸುಮಾರು 4.60 ಲಕ್ಷ ವಾಹನಗಳು ಇರುವುದರಿಂದ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದ್ದು, ಇದರ ನಿರ್ವಹಣೆಗೆ ಪೊಲೀಸ್ ಇಲಾಖೆಯಿಂದ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಸ್ತೆಯಲ್ಲಿಯೇ ತಮ್ಮ ವಾಹನ ನಿಲುಗಡೆ ಮಾಡುವುದರಿಂದ ತೊಂದರೆಯಾಗುತ್ತಿದೆ. ಇದರ ಬಗ್ಗೆ ಶಿಕ್ಷಣ ಸಂಸ್ಥೆಗಳ ಗಮನ ಸೆಳೆಯಲಾಗಿದೆ. ನೋಟಿಸ್‌ ಕೂಡ ನೀಡಲಾಗಿದ್ದು, ಶಿಕ್ಷಣ ಸಂಸ್ಥೆಯ ಆವರಣದೊಳಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕೆಂದು ತಿಳಿಸಿದ್ದೇವೆ ಎಂದರು.

ಟೆಂಡರ್‌:  ಸ್ಮಾರ್ಟ್‌ ಸಿಟಿ ಯೋಜನೆಯಡಿ ₹ 76 ಕೋಟಿ ವೆಚ್ಚದಲ್ಲಿ ಕಮಾಂಡಂಟ್‌ ಕಂಟ್ರೊಲ್ ಸಿಸ್ಟಂ ನಿರ್ಮಿಸಲು ಟೆಂಡರ್‌ ಕರೆಯಲಾಗಿದೆ. ಶೀಘ್ರದಲ್ಲಿಯೇ ಇತರ  ಕಾಮಗಾರಿಗಳು ಕೂಡ ಆರಂಭಗೊಳ್ಳಲಿವೆ ಸ್ಮಾರ್ಟ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ   ಪಾಲಿಕೆಯ ಆಯುಕ್ತ ಶಶಿಧರ ಕುರೇರ ಹೇಳಿದರು.

ಬೆಳಗಾವಿ ಬೈಪಾಸ್ ಯೋಜನೆ: ದಿನೇ ದಿನೆ ಬೆಳೆಯುತ್ತಿರುವ ಬೆಳಗಾವಿ ಮಹಾನಗರ ಹಾಗೂ ಸುತ್ತಮುತ್ತಲ ಪ್ರದೇಶಗಳ ಜನರಿಗೆ ಸಂಚಾರ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ 55 ಕಿ.ಮೀ. ಉದ್ದದ ಬೆಳಗಾವಿ ಬೈಪಾಸ್ ಅಥವಾ ರಿಂಗ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ನಿರ್ದೇಶಕ ಕರ್ನಲ್ ಜಾಬಾಜ್ ಸಭೆಯಲ್ಲಿ ವಿವರಿಸಿದರು.

ಬೈಪಾಸ್ ಅಥವಾ ರಿಂಗ್ ರಸ್ತೆ ನಿರ್ಮಾಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲೂ ಸಂಚಾರ ಸುಗಮಗೊಳ್ಳಲಿದ್ದು, ಅಧಿವೇಶನ ನಡೆಯುವ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಉಂಟಾಗುವ ಅನಾನುಕೂಲತೆಯನ್ನು ಪರಿಹರಿಸಬಹುದು ಎಂದು ಹೇಳಿದರು. ಈ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಒಪ್ಪಿಗೆ ಈಗಾಗಲೇ ಪಡೆದುಕೊಳ್ಳಲಾಗಿದ್ದು, ಶೀಘ್ರದಲ್ಲಿಯೇ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯುಟಿವ್‌ ಎಂಜಿನಿಯರ್ ಆರ್.ಬಿ. ದಾಮಣ್ಣವರ,  ಹೆಸ್ಕಾಂ, ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಬಿಎಸ್ಎನ್ಎಲ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.