ADVERTISEMENT

ತಾ.ಪಂ: ಬರ ನಿರ್ವಹಣೆಯಲ್ಲಿ ವಿಫಲ

ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದ ತಾಲ್ಲೂಕು ಪಂಚಾಯ್ತಿ ಸದಸ್ಯರು

​ಪ್ರಜಾವಾಣಿ ವಾರ್ತೆ
Published 25 ಮೇ 2017, 9:34 IST
Last Updated 25 ಮೇ 2017, 9:34 IST

ಬೆಳಗಾವಿ: ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ, ಅನೇಕ ಸಲ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯರು ಆರೋಪಿಸಿದರು.

ನಗರದಲ್ಲಿ ಬುಧವಾರ ನಡೆದ ಬೆಳಗಾವಿ ತಾಲ್ಲೂಕು ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸದಸ್ಯರು ಹರಿಹಾಯ್ದರು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಶಂಕರಗೌಡ ಪಾಟೀಲ ವಹಿಸಿದ್ದರು. ಉಪಾಧ್ಯಕ್ಷ ಮಾರುತಿ ಸನದಿ ವೇದಿಕೆಯಲ್ಲಿದ್ದರು.

‘ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ನಾವು ಗಮನಕ್ಕೆ ತಂದರೂ ಅಧಿಕಾರಿಗಳು ಕ್ಯಾರೇ ಮಾಡುತ್ತಿಲ್ಲ. ನೀರಿನ ಕೊರತೆಯಿಂದಾಗಿ ಹಳ್ಳಿಗಳಲ್ಲಿ ರೈತರು ಜಾನುವಾರುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡುತ್ತಿದ್ದಾರೆ. ಬೆಳಗಾವಿ ಪೂರ್ವ ಮತ್ತು ಪಶ್ಚಿಮ ಭಾಗದ ಹಳ್ಳಿಗಳಲ್ಲಿ ನೀರಿಲ್ಲ, ಬೇಕಾದರೆ ಹಳ್ಳಿಗಳಿಗೆ ಭೇಟಿ ನೀಡಿ ಪರೀಕ್ಷಿಸಿ’ ಎಂದು ನಾರಾಯಣ ನಲವಡೆ, ಸುನೀಲ ಅಷ್ಟೇಕರ ಸವಾಲ್‌ ಹಾಕಿದರು.

ಜುಲೈದಲ್ಲಿ ಬೆಳೆ ವಿಮೆ: ಕಳೆದ ಹಿಂಗಾರು ಹಂಗಾಮಿನಲ್ಲಿ ರೈತರು ತುಂಬಿರುವ ಬೆಳೆ ವಿಮೆಯ ಪರಿಹಾರವು ವಿಮಾ ಕಂಪೆನಿಯಿಂದ ಜುಲೈ ಮೊದಲ ವಾರ ರೈತರ ಖಾತೆಗೆ ಜಮಾ ಆಗಲಿದೆ ಎಂದು ತಹಶೀಲ್ದಾರ ಗಿರೀಶ ಸ್ವಾದಿ ಭರವಸೆ ನೀಡಿದರು.

ಹಿಂಗಾರು ಹಂಗಾಮಿಗೆ 9,000 ಕ್ಕೂ ಅಧಿಕ ರೈತರು ಬೆಳೆ ವಿಮೆ ತುಂಬಿದ್ದಾರೆ, ಅವುಗಳ ಸಮೀಕ್ಷೆ ನಡೆಯುತ್ತಿದೆ, ಈಗಾಗಲೇ 8,000ಕ್ಕೂ ಅಧಿಕ ಅರ್ಜಿಗಳ ಪರಿಶೀಲನೆ ಮುಗಿದಿದೆ, ಇನ್ನೊಂದು ಸಾವಿರ ಅರ್ಜಿಗಳನ್ನು ಈ ತಿಂಗಳಲ್ಲಿ ಪರಿಶೀಲಿಸಿ, ಜೂನ್‌ ಅಂತ್ಯಕ್ಕೆ ಅಂತಿಮ ವರದಿ ಸಿದ್ಧವಾದ ಕೂಡಲೇ ಪರಿಹಾರ ಮೊತ್ತ ಸಿಗಲಿದೆ ಎಂದು ಹೇಳಿದರು. ನಿಗದಿಪಡಿಸಿದಂತೆ ಪ್ರತಿ ಎಕರೆ ಜೋಳಕ್ಕೆ ₹ 11,700 ಬೆಳೆ ನಷ್ಟ ಪರಿಹಾರ ಕೊಡಲಾಗುವುದು. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಆತಂಕ: ಬೆಳಗಾವಿ ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಅತ್ಯಂತ ಕಳಪೆ ಮಟ್ಟದ್ದಾಗಿದೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ಏನು ಮಾಡುತ್ತಿದ್ದಾರೆ ಎಂದು ಯಲ್ಲಪ್ಪ ಕೋಳೇಕರ, ನಾರಾಯಣ ನಲವಡೆ, ಸುನೀಲ ಅಷ್ಟೇಕರ, ಮೀರಾ ಕಾಕತಕರ ಪ್ರಶ್ನಿಸಿದರು.

ಶಿಕ್ಷಕರ ವೇತನಕ್ಕೆ ಕತ್ತರಿ: ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 61 ರಷ್ಟಾಗಿದೆ. ಶೇ 40ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳ ಮುಖ್ಯ ಶಿಕ್ಷಕರ ವೇತನ ಹೆಚ್ಚಳವನ್ನು ತಡೆಹಿಡಿಯಬೇಕೆಂದು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.
ಬಿ. ಜುಟ್ಟನವರ ಹೇಳಿದರು. ಮುಂದಿನ ವರ್ಷ ಒಳ್ಳೆಯ ಫಲಿತಾಂಶ ಪಡೆಯಲು ಈಗಿನಿಂದಲೇ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತಿದೆ ಎಂದರು.

ಬಿತ್ತನೆ ಬೀಜಗಳ ವಿತರಣೆ ಆರಂಭ: ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆ ಹಂಗಾಮಿಗೆ ಬೇಕಾದ ಅಗತ್ಯ ಬಿತ್ತನೆ ಬೀಜ, ಗೊಬ್ಬರಗಳ ದಾಸ್ತಾನು ಇದ್ದು, ಬೀಜ ವಿತರಣೆ ಮಾಡಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಜಿ. ಬಿ. ಕಲ್ಯಾಣಿ ಹೇಳಿದರು.

ತಾಲ್ಲೂಕಿನಲ್ಲಿ 1,893 ಕ್ವಿಂಟಾಲ್‌ ಸೋಯಾಬಿನ್‌, 350 ಕ್ವಿಂಟಾಲ್‌ ಭತ್ತ, ಹೆಸರು, ತೊಗರಿ ಬೀಜಗಳು ದಾಸ್ತಾನು ಇದೆ. ತಾಲ್ಲೂಕು 4 ರೈತ ಸಂಪರ್ಕ ಕೇಂದ್ರಗಳು ಹಾಗೂ 7 ಸಹಕಾರಿ ಸಂಘಗಳಲ್ಲಿ ಬಿತ್ತನೆ ಬೀಜಗಳನ್ನು ಸಹಾಯ ಧನದಲ್ಲಿ ವಿತರಿಸಲಾಗುತ್ತಿದೆ. ಬೇಡಿಕೆ ಹೆಚ್ಚಾದಂತೆ ಇನ್ನೂ ಹೆಚ್ಚಿನ ಬೀಜ ನೀಡಲಾಗುತ್ತದೆ ಎಂದರು.

ಕೃಷಿ ಅಭಿಯಾನ: ಬೆಳಗಾವಿ ತಾಲ್ಲೂಕಿನಲ್ಲಿ ಕೃಷಿ ಅಭಿಯಾನ ಆರಂಭವಾಗಿದ್ದು, ರೈತರಿಗೆ ಬೆಳೆಗಳು, ಅವುಗಳ ವಿಧಾನ, ಬಿತ್ತನೆ ಕ್ರಮ, ಬೆಳೆಯುವ ಕ್ರಮಗಳನ್ನು ಹಾಗೂ ಸರ್ಕಾರದ ಯೋಜನೆಗಳ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.

ಉಚಗಾಂವದ ಅಂಬೇಡ್ಕರ ಭವನದಲ್ಲಿ ಇದೇ ತಿಂಗಳ 25 ರಂದು, ಕಾಕತಿಯ ಸಿದ್ದೇಶ್ವರ ಮಂದಿರದಲ್ಲಿ ಇದೇ ತಿಂಗಳ 29 ರಂದು, ಹಿರೇಬಾಗೇವಾಡಿಯ ಪಡಿಬಸವೇಶ್ವರ ಮಂದಿರದಲ್ಲಿ ಇದೇ ತಿಂಗಳ 30ರಂದು ಹಾಗೂ ಬೆಳಗಾವಿಯ ಕೃಷಿ ಇಲಾಖೆಯ ಭವನದಲ್ಲಿ ಇದೇ ತಿಂಗಳ 31ರಂದು ರೈತರ ಬೃಹತ್‌ ಕಾರ್ಯಕ್ರಮಗಳು ನಡೆಯಲಿದೆ. ಕೃತಿಗೆ ಸಂಬಂಧಿಸಿದ ಇತರ ಇಲಾಖೆಯಗಳ ಅಧಿಕಾರಿಗಳು, ಕೃಷಿ ತಜ್ಞರು, ತಾಂತ್ರಿಕ ಪರಿಣಿತರು ರೈತರಿಗೆ ಮಾಹಿತಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.