ADVERTISEMENT

ತಾಲ್ಲೂಕು ರಚನೆ; ಮೂಡಲಗಿಗೆ ಕೊಕ್‌!

ಶ್ರೀಕಾಂತ ಕಲ್ಲಮ್ಮನವರ
Published 8 ಸೆಪ್ಟೆಂಬರ್ 2017, 5:40 IST
Last Updated 8 ಸೆಪ್ಟೆಂಬರ್ 2017, 5:40 IST

ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ಹಾಗೂ ಕಾಗವಾಡ ತಾಲ್ಲೂಕು ರಚನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಜನವರಿಯಿಂದ ಕಾರ್ಯಾರಂಭ ಮಾಡಲಿವೆ. ಆದರೆ, ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರೂ ಮೂಡಲಗಿಯನ್ನು ತಾಲ್ಲೂಕು ಪಟ್ಟಿಯಿಂದ ಕೈಬಿಡಲಾಗಿದೆ. 1ರಿಂದ ಕಾರ್ಯಾರಂಭ ಮಾಡಲಿವೆ. ಇದರೊಂದಿಗೆ ಜಿಲ್ಲೆಯ ತಾಲ್ಲೂಕುಗಳ ಒಟ್ಟು ಸಂಖ್ಯೆ 13ಕ್ಕೆ ಏರಲಿವೆ.

ಮಾರ್ಚ್‌ ತಿಂಗಳಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್‌ ಮಂಡಿಸುವಾಗ ಬೆಳಗಾವಿ ಜಿಲ್ಲೆಗೆ ಮೂರು ಹೊಸ ತಾಲ್ಲೂಕುಗಳನ್ನು ನೀಡುವುದಾಗಿ ಘೋಷಣೆಮಾಡಿದ್ದರು. ಇದರಲ್ಲಿ ಮೂಡಲಗಿಯೂ ಸೇರಿತ್ತು. ಆದರೆ, ಈಗ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಪಟ್ಟಿಯಲ್ಲಿ ಮೂಡಲಗಿಯನ್ನು ಕೈಬಿಡಲಾಗಿದೆ.

ವಿಧಾನಸಭಾ ಕ್ಷೇತ್ರ ವ್ಯಾಪ್ತಿ: ಬಜೆಟ್‌ನಲ್ಲಿ ಪ್ರಸ್ತಾವಿಸಿದಂತೆ ಹೊಸ ತಾಲ್ಲೂಕುಗಳ ಗಡಿಗಳನ್ನು ಗುರುತಿಸಿ, ಸರ್ಕಾರಕ್ಕೆ ವರದಿ ನೀಡುವಂತೆ ಮುಖ್ಯಮಂತ್ರಿಯವರು ಕಳೆದ ತಿಂಗಳು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.

ADVERTISEMENT

ಕಾಗವಾಡ ಹಾಗೂ ನಿಪ್ಪಾಣಿಯು ಈಗಾಗಲೇ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೊಂದಿವೆ. ಬಹುತೇಕ ಇದೇ ಗಡಿಯನ್ನು ನಿಗದಿಪಡಿಸಿ, ಸರ್ಕಾರಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ, ಮೂಡಲಗಿಯ ಗಡಿ ನಿಗದಿಗೆ ಸಂಬಂಧಿಸಿದಂತೆ ವರದಿ ಹೋಗಿರಲಿಲ್ಲವೆಂದು ಮೂಲಗಳು ತಿಳಿಸಿವೆ.

ಸಮಸ್ಯೆ ಏನಾಗಿತ್ತು?:  ಗೋಕಾಕ ತಾಲ್ಲೂಕಿನಲ್ಲಿ ಮೂಡಲಗಿ ಅತ್ಯಂತ ದೊಡ್ಡ ಪಟ್ಟಣವಾಗಿದೆ. ಆರ್ಥಿಕ ಚಟುವಟಿಕೆ, ಜನರ ಸಂಚಾರ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೂಡಲಗಿ ಹೆಚ್ಚು ಕ್ರೀಯಾಶೀಲವಾಗಿದೆ.

ಇದಕ್ಕೆ ಪ್ರತ್ಯೇಕವಾದ ತಾಲ್ಲೂಕಿನ ಸ್ಥಾನಮಾನ ದೊರೆತರೆ, ತಮ್ಮ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಲಿದೆ ಎನ್ನುವ ಆತಂಕದಿಂದ ಗೋಕಾಕ ಕೇಂದ್ರೀತ ಕೆಲವು ರಾಜಕಾರಣಿಗಳು ಅವಕಾಶ ನೀಡಿಲ್ಲ. ಸರ್ಕಾರದ ಮೇಲೆ ಒತ್ತಡ ಹೇರಿ, ಮೂಡಲಗಿ ತಾಲ್ಲೂಕಾಗುವುದನ್ನು ತಪ್ಪಿಸಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ.

ಗೋಕಾಕ ತಾಲ್ಲೂಕಿನ ಕಲ್ಲೋಳಿ, ನಾಗನೂರು, ಗುರ್ಲಾಪುರ, ಧರ್ಮಟ್ಟಿ, ಹಳ್ಳೂರ, ಅರಭಾಂವಿ, ಕುಲಿಗೋಡ, ಯಾದವಾಡ, ಕೌಜಲಗಿ ಹಾಗೂ ರಾಯಬಾಗ ತಾಲ್ಲೂಕಿನ ಕಂಕಣವಾಡಿ, ಮುಗಳಖೋಡ, ಇಟ್ನಾಳ ಸೇರಿದಂತೆ ಸುಮಾರು 36 ಹಳ್ಳಿಗಳನ್ನು ಸೇರಿಸಿಕೊಂಡು ಮೂಡಲಗಿ ತಾಲ್ಲೂಕು ರಚನೆ ಮಾಡುವಂತೆ ಹಲವು ವರ್ಷಗಳಿಂದ ಹೋರಾಟ ನಡೆದಿತ್ತು.

ಹಿಂದೆಯೂ ಅಡ್ಡಿ: ಮೂಡಲಗಿಯಲ್ಲಿ ಜೆಎಂಎಫ್‌ಸಿ ಸ್ಥಾಪಿಸಿದಾಗಲೂ ಭಾರಿ ವಿರೋಧ ವ್ಯಕ್ತವಾಗಿತ್ತು. ಈಗ ತಾಲ್ಲೂಕು ರಚನೆಗೆ ವಿರೋಧ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಮೂಡಲಗಿ ಬೆಳವಣಿಗೆಗೆ ಅಡ್ಡಗಾಲು ಹಾಕಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.