ADVERTISEMENT

ನಂದಗಡದಿಂದ ಸುವರ್ಣ ವಿಧಾನಸೌಧಕ್ಕೆ ರೈತರ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 5:17 IST
Last Updated 6 ನವೆಂಬರ್ 2017, 5:17 IST

ಖಾನಾಪುರ: ರೈತರ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಇದೇ ತಿಂಗಳ 12ರಂದು ತಾಲ್ಲೂಕಿನ ನಂದಗಡದ ಕ್ರಾಂತಿವೀರ ಸಂಗೊಳ್ಳಿರಾಯಣ್ಣನ ಸಮಾಧಿ ಸ್ಥಳದಿಂದ ಬೆಳಗಾವಿಯ ಸುವರ್ಣ ವಿಧಾನಸೌಧದವರೆಗೆ ಪಾದಯಾತ್ರೆ ಆರಂಭಿಸಲಾಗುವುದು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ನಾಯ್ಕ ತಿಳಿಸಿದರು.

ಇಲ್ಲಿ ಭಾನುವಾರ ನಡೆದ ರೈತ ಮುಖಂಡರ ಮತ್ತು ರೈತಪರ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ‘ನಂದಗಡದಿಂದ ಹೊರಡುವ ಪಾದಯಾತ್ರೆ ಚಾಪಗಾವಿ, ಕೊಡಚವಾಡ ಮೂಲಕ ಸಂಚರಿಸಿ ಪಾರಿಶ್ವಾಡದಲ್ಲಿ ತಲುಪಲಿದೆ. ಮರುದಿನ ಪಾರಿಶ್ವಾಡದಿಂದ ಹೊರಟು ಮಧ್ಯಾಹ್ನ ಸುವರ್ಣ ವಿಧಾನಸೌಧ ತಲುಪಲಿದೆ. ಚಳಿಗಾಲದ ಅಧಿವೇಶ ಪ್ರಾರಂಭಗೊಳ್ಳಲಿರುವ ನ. 13ರಂದು ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಲಾಗುತ್ತದೆ. ರಾಜ್ಯದ ವಿವಿಧ ಭಾಗಗಳ ಸಾವಿರಾರು ರೈತರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಯಮಕನಮರಡಿ ಮಾತನಾಡಿ, ‘ರೈತರ ಸಾಲಮನ್ನಾ ಮತ್ತು ಕಬ್ಬಿಗೆ ಎಸ್.ಎ.ಪಿ ಜಾರಿಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದು ಪ್ರತಿಭಟನೆಯ ಮೂಲ ಉದ್ದೇಶವಾಗಿದೆ.

ADVERTISEMENT

ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಬಾಕಿ ಬಿಲ್ಲು ಪಾವತಿಗೆ ಕ್ರಮ, ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು, ಕಳಸಾ ಬಂಡೂರಿ, ಮಹಾದಾಯಿ ಯೋಜನೆ ಅನುಷ್ಠಾನಗೊಳಿಸಬೇಕು, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ನಿಗದಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದು ಮಾಹಿತಿ ನೀಡಿದರು. ಮುಖಂಡರಾದ ಗುರುಲಿಂಗಯ್ಯ ಪೂಜೇರ, ಅಕೀಲಸಾಬ ಮುನವಳ್ಳಿ, ಮಂಜುನಾಥ ಹೂಲಿಕಟ್ಟಿ, ವಾಸು ತಿಪ್ಪಣ್ಣವರ, ಯಲ್ಲಪ್ಪ ಚನ್ನಾಪುರ, ಗಂಗಪ್ಪ ಹೇರೆಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.