ADVERTISEMENT

ನಾಮಪತ್ರ ಸಲ್ಲಿಸಿದ ರಮೇಶ ಜಾರಕಿಹೊಳಿ

ಗೋಕಾಕಿನಲ್ಲಿ ಬೆಂಬಲಿಗರೊಂದಿಗೆ ಬೃಹತ್‌ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 6:00 IST
Last Updated 24 ಏಪ್ರಿಲ್ 2018, 6:00 IST

ಗೋಕಾಕ: ಇಲ್ಲಿನ ವಿಧಾನಸಭಾ ಮತಕ್ಷೇತ್ರದಿಂದ ಪುನಃ ಕಣಕ್ಕಿಳಿದಿರುವ ಜಿಲ್ಲಾ ಉಸ್ತುವಾರಿ ಸಚಿವ, ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು. ತಾಲ್ಲೂಕಿನ ಶಿಂಧಿಕುರಬೇಟ ಗ್ರಾಮದ ಬಾಬು ಮಿಟ್ಟುಸಾಭ ಫಣೀಬಂದ ನಾಮಪತ್ರ ಸಲ್ಲಿಸಿದರು.

ನಗರದ ಬ್ಯಾಳಿ ಕಾಟಾ ಬಳಿಯ ಪಟಗುಂದಿ ಹಣಮಂತ ದೇವರಿಗೆ ಪೂಜೆ ಸಲ್ಲಿಸಿದ ನಂತರ ರಮೇಶ ಅವರು, ಅಪಾರ ಸಂಖ್ಯೆಯ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ನಂತರ ತಹಶೀಲ್ದಾರ್‌ ಕಾರ್ಯಾಲಯ ತಲುಪಿ ಚುನಾವಣಾಧಿಕಾರಿ ದಿನೇಶಕುಮಾರ ಜಿ.ಟಿ. ಅವರಿಗೆ ನಾಮಪತ್ರ ಸಲ್ಲಿಸಿದರು.

ಕರವೇ ಮೊದಲಾದ ಸಂಘಟನೆಗಳ ಕಾರ್ಯಕರ್ತರು ಜಾಂಜ್ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತ ತಲುಪಿ, ಸಚಿವ ರಮೇಶ ಜಾರಕಿಹೊಳಿ ಅವರ ಪರ ಜಯಕಾರದ ಘೋಷಣೆಗಳನ್ನು ಕೂಗಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ADVERTISEMENT

ಒಟ್ಟು ನಾಮಪತ್ರಗಳು: ಇದುವರೆಗೆ ಇಬ್ಬರು ಉಮೇದುವಾರರು ಒಟ್ಟು 5 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ರಮೇಶ ಜಾರಕಿಹೊಳಿ ಅವರು 4 ಹಾಗೂ ಬಾಬು ಫಣಿಬಂದ್‌ 1 ನಾಮಪತ್ರ ಸಲ್ಲಿಸಿದ್ದಾರೆ

ಅರಬಾವಿ ಕ್ಷೇತ್ರ: ಗೋಕಾಕ ತಾಲ್ಲೂಕಿನ ಇನ್ನೊಂದು ವಿಧಾನಸಭಾ ಮತಕ್ಷೇತ್ರ ಅರಬಾವಿ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನ ಅರವಿಂದ ಮಹಾದೇವರಾವ ದಳವಾಯಿ ಅವರು ಚುನಾವಣಾ ಅಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರಿಗೆ ಸಲ್ಲಿಸಿದರು.ಅದೇ ಕ್ಷೇತ್ರದಿಂದ ಮಾಹಿತಿ ಹಕ್ಕು ಕಾರ್ಯಕರ್ತರ ಭೀಮಪ್ಪ ಗುಂಡಪ್ಪ ಗಡಾದ ಅವರು ಪಕ್ಷೇತರರಾಗಿ ಎರಡು ನಾಮಪತ್ರಗಳನ್ನು ಹಾಗೂ ಜೆಡಿಎಸ್‌ ಅಭ್ಯರ್ಥಿಯಾಗಿ ಎರಡು ನಾಮಪತ್ರಗಳನ್ನು ಸಲ್ಲಿಸಿದರು.

ಒಟ್ಟು ನಾಮಪತ್ರಗಳು: ಅರಬಾವಿ ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧಿಸಲು ಸೋಮವಾರದ ವರೆಗೆ ಒಟ್ಟು ನಾಲ್ಕು ಜನ ಅಭ್ಯರ್ಥಿಗಳು ಒಂಭತ್ತು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.