ADVERTISEMENT

‘ಪಕ್ಷ ಗಟ್ಟಿಗೊಳಿಸಿ; ಆಮೇಲೆ ಟಿಕೆಟ್’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 4:27 IST
Last Updated 19 ನವೆಂಬರ್ 2017, 4:27 IST
ಅರಭಾವಿ ಕ್ಷೇತ್ರದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಶನಿವಾರ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ
ಅರಭಾವಿ ಕ್ಷೇತ್ರದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಶನಿವಾರ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ   

ರಾಮದುರ್ಗ/ಮೂಡಲಗಿ (ಬೆಳಗಾವಿ ಜಿಲ್ಲೆ): ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ಹಾಗೂ ಪಕ್ಷದೊಳಗೇ ಇದ್ದು ದ್ರೋಹ ಬಗೆಯುವವರ ವಿರುದ್ಧ ಕ್ರಮ ಕೈಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಎಚ್ಚರಿಸಿದರು.

ಶನಿವಾರ ಆಯೋಜಿಸಿದ್ದ ನವಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಆದರೆ, ಮೊದಲು ಪಕ್ಷವನ್ನು ಗಟ್ಟಿಗೊಳಿಸಬೇಕು ನಂತರ ವರಿಷ್ಠರು ಟಿಕೆಟ್‌ ನೀಡುತ್ತಾರೆ. ಅದನ್ನು ಎಲ್ಲರೂ ಒಪ್ಪಿ ಪಕ್ಷ ಗೆಲ್ಲಿಸಬೇಕು’ ಎಂದು ಕಾರ್ಯಕರ್ತರಿಗೆ ತಾಕೀತು ಮಾಡಿದರು.

‘ಅರಭಾವಿ ಕ್ಷೇತ್ರ ವ್ಯಾಪ್ತಿಯ ಮೂಡಲಗಿ ಸಮಾವೇಶವು ಬಿಜೆಪಿ ಪರಿವರ್ತನಾ ಯಾತ್ರೆಗೆ ದಿಕ್ಸೂಚಿಯಾಗಿದೆ. ನಿರೀಕ್ಷೆ ಮೀರಿ ಜನ ಸೇರಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪಿಸುವ ಮೂಲಕ ಮೂಡಲಗಿ ನೂತನ ತಾಲ್ಲೂಕಿಗೆ ಬೇಕಾದ ಎಲ್ಲ ಸೌಲಭ್ಯ ಕಲ್ಪಿಸಿಕೊಡುವೆ’ ಎಂದು ಭರವಸೆ ನೀಡಿದರು.

ADVERTISEMENT

ಕಳಸಾ– ಬಂಡೂರಿ ಸಮಸ್ಯೆಗೆ ಕಾಂಗ್ರೆಸ್‌ ಸರ್ಕಾರ ಕಾರಣವಾಗಿದ್ದು, ಇನ್ನೊಂದು ತಿಂಗಳಲ್ಲಿ ಗೋವಾ ಮುಖ್ಯಮಂತ್ರಿ ಭೇಟಿಯಾಗಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

ಘೇರಾವ್‌, ಕಪ್ಪು ಬಾವುಟ ಪ್ರದರ್ಶನ
(ಗೋಕಾಕ ವರದಿ): ಮಹದಾಯಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ಅನಗತ್ಯ ವಿಳಂಬವಾಗುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ತಾಲ್ಲೂಕಿನ ಸಂಗನಕೇರಿ ಕ್ರಾಸ್‌ ಬಳಿ ಶನಿವಾರ ಸಂಜೆ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಕಪ್ಪುಬಾವುಟ ಪ್ರದರ್ಶಿಸಿದರು.

ಯಾತ್ರೆಯು ರಾಮದುರ್ಗದಿಂದ ಮೂಡಲಗಿ ಕಡೆಗೆ ಸಾಗುತ್ತಿತ್ತು. ಈ ಮಾರ್ಗದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ, ಯಾತ್ರೆಗೆ ತಡೆಯೊಡ್ಡಿದ ಪ್ರತಿಭಟನಾಕಾರರು, ಯಡಿಯೂರಪ್ಪ ಪ್ರಯಾಣಿಸುತ್ತಿದ್ದ ವಾಹನಕ್ಕೆ ಮುತ್ತಿಗೆ ಹಾಕಿದರು.

‘ಮಹದಾಯಿ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ. ಇದನ್ನು ತಪ್ಪಿಸಲು, ಬಿಜೆಪಿ ಮುಖಂಡರು ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗಲಾಗಲೀ ಅಥವಾ ಪ್ರಧಾನಮಂತ್ರಿ ಮೋದಿ ಮಧ್ಯಸ್ಥಿಕೆಗಾಗಲೀ ಯಾವುದೇ ಪ್ರಾಮಾಣಿಕ ಯತ್ನ ಮಾಡಲಿಲ್ಲ. ಚುನಾವಣೆ ಹತ್ತಿರಕ್ಕೆ ಬಂದಾಗ ಮಾತ್ರ ಅವರಿಗೆ ರೈತರ ನೆನಪಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನಿರೀಕ್ಷಿತ ಪ್ರತಿಭಟನೆ ಎದುರಾಗಿದ್ದರಿಂದ, ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಯಡಿಯೂರಪ್ಪ ಮನವಿ ಸ್ವೀಕರಿಸಿದ ಬಳಿಕ, ಪ್ರತಿಭಟನಾಕಾರರು ಯಾತ್ರೆಗೆ ಅನುವು ಮಾಡಿಕೊಟ್ಟರು.

* * 

ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ ಕಾಂಗ್ರೆಸ್‌ನ್ನು ಧಿಕ್ಕರಿಸಿ, ಬಿಜೆಪಿ ಗೆಲ್ಲಿಸಬೇಕು.
ರಮೇಶ ಜಿಗಜಿಣಗಿ, 
ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.