ADVERTISEMENT

ಪಿಡಿಓ ಹುದ್ದೆ ಭರ್ತಿಗೆ ಜೊಲ್ಲೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 7:49 IST
Last Updated 4 ಜುಲೈ 2015, 7:49 IST

ಬೆಳಗಾವಿ: ಗ್ರಾಮ ಪಂಚಾಯ್ತಿಗಳಲ್ಲಿ ಖಾಲಿ ಇರುವ ಪಿಡಿಓ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ಸದಸ್ಯೆ ಶಶಿಕಲಾ ಜೊಲ್ಲೆ ವಿಧಾನಸಭೆಯಲ್ಲಿ ಶುಕ್ರವಾರ ಮನವಿ ಮಾಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಹಾಗೂ ಕೃಷಿ ಇಲಾಖೆ ಬೇಡಿಕೆಗಳ ಮೇಲಿನ ಚರ್ಚೆ ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಫ್ಲೋರೈಡ್‌ಯುಕ್ತ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಮಾತ್ರವಲ್ಲದೆ, ನದಿ ನೀರನ್ನು ಅವಲಂಬಿಸಿರುವ ಗ್ರಾಮಗಳ ಜನರ ನೆರವಿಗೂ ಶುದ್ಧ ನೀರಿನ ಘಟಕ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದರು.

ನಿಪ್ಪಾಣಿ ಕ್ಷೇತ್ರ ವ್ಯಾಪ್ತಿಯ ಗಳತಗಾ ಮತ್ತು ಮಾನಕಾಪುರ ಗ್ರಾಮಗಳಲ್ಲಿ ಜಾರಿಗೆ ಬಂದಿರುವ ಬಹುಗ್ರಾಮ ಯೋಜನೆ 10 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಪ್ರತಿ ಮನೆಗೂ ಶೌಚಾಲಯ ನಿರ್ಮಿಸಲು ಸಹಾಯಧನ ಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕು ಎಂದ ಅವರು, ಮಂಗಳೂರು ಬಳಿಯ ಪುತ್ತೂರಿನಲ್ಲಿ ತಯಾರಿಸಲಾಗುವ ಸಿದ್ಧ ಶೌಚಾಲಯಗಳ ಮಾರಾಟಕ್ಕೆ ವಿಧಿಸ ಲಾಗುತ್ತಿರುವ ಶೇ 12ರಷ್ಟು ತೆರಿಗೆಯನ್ನು ರದ್ದುಪಡಿಸಿ ಅವುಗಳ ಕುರಿತು ವ್ಯಾಪಕವಾದ ಪ್ರಚಾರ ಮಾಡಬೇಕು. ಅವುಗಳನ್ನು ಅಳವಡಿಸಿಕೊಳ್ಳುವ ಸಾರ್ವಜನಿಕರಿಗೆ ಸಹಾಯಧನ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

ಅನೇಕ ಗ್ರಾಮ ಪಂಚಾಯ್ತಿಗಳಲ್ಲಿ ಕೆಲವು ವರ್ಷಗಳಿಂದ ಹೆಸ್ಕಾಂಗೆ ವಿದ್ಯುತ್‌ ಬಿಲ್‌ ಬಾಕಿ ಇರಿಸಿಕೊಳ್ಳಲಾಗಿದೆ. ಇದೀಗ ನೂತನ ಸದಸ್ಯರು ಆಯ್ಕೆಯಾಗಿದ್ದು, ಸರ್ಕಾರವೇ ಆ ಬಿಲ್‌ ಪಾವತಿಸುವ ಮೂಲಕ ಪಂಚಾಯ್ತಿಗಳ ಆರ್ಥಿಕ ಹೊರೆ ತಗ್ಗಿಸಬೇಕು. ಬೀದಿದೀಪಗಳಿಗೆ ಎಲ್‌ಇಡಿ ಬಲ್ಬ್‌ ಅಳವಡಿಸಿ, ವಿದ್ಯುತ್‌ ಮಿತವ್ಯಯಕ್ಕೆ ಕ್ರಮ ಕೈಗೊಂಡು, ಮಿತವಾಗಿ ವಿದ್ಯುತ್‌ ಬಳಸುವ, ಕಡಿಮೆ ಬಿಲ್‌ ಪಾವತಿಸುವ ಪಂಚಾಯ್ತಿಗಳಿಗೆ ನಗದು ಬಹುಮಾನ ಘೋಷಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.