ADVERTISEMENT

ಪ್ರವರ್ಗ 2ಎ ಮೀಸಲಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 5:42 IST
Last Updated 8 ಸೆಪ್ಟೆಂಬರ್ 2017, 5:42 IST
ಚನ್ನಮ್ಮನ ಕಿತ್ತೂರಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೌನ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮರಾಠಾ ಸಮಾಜದ ಜನಸ್ತೋಮ
ಚನ್ನಮ್ಮನ ಕಿತ್ತೂರಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೌನ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮರಾಠಾ ಸಮಾಜದ ಜನಸ್ತೋಮ   

ಚನ್ನಮ್ಮನ ಕಿತ್ತೂರು: ಮರಾಠಾ ಸಮು ದಾಯಕ್ಕೆ ಪ್ರವರ್ಗ 2 ಎ ಮೀಸಲಾತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಗುರುವಾರ ಪಟ್ಟಣದಲ್ಲಿ ಮರಾಠಿಗರಿಂದ ಮೌನ ಮೆರವಣಿಗೆ ನಡೆಯಿತು.

ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಶ್ವಾರೂಢ ರಾಣಿ ಚನ್ನಮ್ಮ ಪ್ರತಿಮೆ ಸ್ಥಳದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಯಲ್ಲಿ ಸಂಚರಿಸಿ ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಆಗಮಿಸಿತು. ಅನಂತರ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದ ಮರಾಠಾ ಸಮಾಜದ ಗಣ್ಯರು ಬೇಡಿಕೆ ಈಡೇರಿಸಲು ತಮ್ಮ ಹಕ್ಕೊತ್ತಾಯ ಮಂಡಿಸಿದರು.

ಮೆರವಣಿಗೆಗೆ ಚಾಲನೆ ನೀಡಿದ ಮುಖಂಡ ಪುಂಡಲೀಕ ನೀರಲಕಟ್ಟಿ ಮಾತನಾಡಿ ‘ರಾಜಧಾನಿ ಬೆಂಗಳೂರು ಒಳಗೊಂಡಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ಸುಮಾರು 35ಲಕ್ಷಕ್ಕೂ ಹೆಚ್ಚು ಮರಾಠಾ ಸಮಾಜದವರು ಇದ್ದಾರೆ. 20ರಿಂದ 25 ಶಾಸಕರನ್ನು ವಿಧಾನಸಭೆಗೆ ಕಳುಹಿಸಲು ಈ ಸಮಾಜದ ಜನರದ್ದು ನಿರ್ಣಾಯಕ ಪಾತ್ರವಿದೆ’ ಎಂದರು.

ADVERTISEMENT

‘ಇಷ್ಟೆಲ್ಲ ದೊಡ್ಡ ಸಂಖ್ಯೆಯಲ್ಲಿ ಈ ಸಮಾಜದ ಜನರಿದ್ದರೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅವರು ಹಿಂದುಳಿದಿದ್ದಾರೆ. ಎಲ್ಲ ರಂಗಗಳಲ್ಲೂ ಸಮಾಜದ ಜನರ ಮೇಲೆತ್ತಿ ಮುಖ್ಯ ವಾಹಿನಿಗೆ ತರಲು ಮರಾಠಾ ಸಮಾಜವನ್ನು ಪ್ರವರ್ಗ 3ಬಿ ಯಿಂದ ಪ್ರವರ್ಗ 2ಎಗೆ ಸೇರಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಶಿವಾಜಿ ಮಹಾರಾಜ ಜನ್ಮ ದಿನವಾದ ಫೆ. 19 ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಬೇಕು. ರಾಜರ್ಷಿ ಶಾಹು ಮಹಾರಾಜರ ಮರಾಠಾ ಅಭಿವೃದ್ಧಿ ಮಹಾಮಂಡಳ ಸ್ಥಾಪಿಸಿ ಮರಾಠಾ ಸಮುದಾಯಕ್ಕೆ ಆರ್ಥಿಕ ಮತ್ತಿತರ ಸವಲತ್ತು ನೀಡಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕ ಮರಾಠಾ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯ ಸ್ಥಾಪಿಸಿ ಸಮಾಜದ ಮಕ್ಕಳ ಶಿಕ್ಷಣಕ್ಕೆ ಅನುಕೂಲತೆ ಕಲ್ಪಿಸಿಕೊಡಬೇಕು ಮತ್ತು  ಸ್ವಾಮಿನಾಥನ್ ಆಯೋಗ ನೀಡಿರುವ ಶಿಫಾರಸುಗಳನ್ನು ರೈತರಿಗೆ ಜಾರಿಗೆ ತರಬೇಕು’ ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

ವಿಜಯಕುಮಾರ್ ಶಿಂಧೆ ಮಾತ ನಾಡಿ ‘ಸರ್ಕಾರಕ್ಕೆ ಸಮಾಜದವರ ಧ್ವನಿ ಕೇಳದ ಪರಿಣಾಮ ಅವರು ಮುಖ್ಯ ವಾಹಿನಿಯಿಂದ ದೂರ ಉಳಿಯುವಂ ತಾಗಿದೆ. ಸರ್ಕಾರ ಇದೇ ರೀತಿಯ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ಉಗ್ರ ಪ್ರತಿಭಟನೆ ನಡೆಸಬೇಕಾದೀತು’ ಎಂದು ಎಚ್ಚರಿಸಿದರು.

ಸಮಾಜದ ಮೀಸಲಾತಿಗಾಗಿ ಆಗ್ರಹಿಸಿ ನಡೆದ ಕಾರ್ಯಕ್ರಮದಲ್ಲಿ 9ವರ್ಷದ ಪ್ರಮುಗ್ದಾ ನೀರಲಕಟ್ಟಿ ಹಾಗೂ 12 ವರ್ಷದ ಪೂಜಾ ಮಿಲ್ಕೆ ಮಾತನಾಡಿದ್ದು ಗಮನ ಸೆಳೆಯಿತು.
ಪಟ್ಟಣ ಪಂಚಾಯ್ತಿ ಸದಸ್ಯ ವಿಠ್ಠಲ ನಾಗೋಜಿ, ಮುಖಂಡರಾದ ರಮೇಶ ಮೊಕಾಶಿ, ಈರಣ್ಣ ಶ್ರೀಪತಿ, ಸರಸ್ವತಿ ಹೈಬತ್ತಿ, ಬಿಷ್ಟಪ್ಪ ಶಿಂಧೆ, ಸಂಜೀವ ಹೈಬತ್ತಿ, ಬಸವರಾಜ ಹೈಬತ್ತಿ, ಬಸವರಾಜ ಕದಮ್, ನವೀನ ರಾಮಜಿ, ರಮೇಶ ಉಗರಕೋಡ,  ಮಂಜುನಾಥ ಆರೇರ, ಬಸವರಾಜ ಉಗರಕೋಡ, ಶಿವಪ್ಪ ಸಾವನ್ನವರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

* * 

ಶಾಸಕ ಡಿ.ಬಿ. ಇನಾಮದಾರ ಮರಾಠಾ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರ್ಕಾರದ ಗಮನಕ್ಕೆ ತಂದು ಸವಲತ್ತು ಕೊಡಿಸಲು ಮುಂದಾಗಬೇಕು
ಪುಂಡಲೀಕ ನೀರಲಕಟ್ಟಿ
ಸಮಾಜದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.