ADVERTISEMENT

ಬಣ್ಣದಲ್ಲಿ ಮಿಂದೆದ್ದ ಬೆಳಗಾವಿ ಜನತೆ

ಕಡಲೆ ಕಾಯಿ ಸುಟ್ಟು ತಿಂದು, ಪರಸ್ಪರ ಶುಭ ಕೋರಿ ಸಡಗರ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:44 IST
Last Updated 14 ಮಾರ್ಚ್ 2017, 6:44 IST
ಬೆಳಗಾವಿಯ ಪಾಂಗುಳ ಗಲ್ಲಿಯ ಬಣ್ಣದೋಕುಳಿ
ಬೆಳಗಾವಿಯ ಪಾಂಗುಳ ಗಲ್ಲಿಯ ಬಣ್ಣದೋಕುಳಿ   

ಬೆಳಗಾವಿ: ನಗರದೆಲ್ಲೆಡೆ ಹೋಳಿ ಹಬ್ಬ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು, ಯುವಕ, ಯುವತಿಯರು, ವಯೋವೃದ್ಧರು ಎಲ್ಲರೂ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.

ಅಲ್ಲಲ್ಲಿ ಯುವಕ ಮಂಡಳಗಳು ಕಾಮಣ್ಣನ ಮೂರ್ತಿ ಮಾಡಿ, ಕಟ್ಟಿಗೆ, ಸೆಗಣಿ ಕುಳ್ಳುಗಳಿಂದ ಸುಟ್ಟು ಹಾಕಿದರು. ಬೆಂಕಿಯ ಮುಂದೆ ಹಲಗೆ ಬಾರಿಸುತ್ತ, ಬಣ್ಣ ಎರಚಿದರು. ಸಿಳ್ಳೆ ಹೊಡೆದರು, ಲಬೋ ಲಬೋ ಹೊಯ್ಯಕೊಂಡರು.

ದಿನವಿಡೀ ಬೆಂಕಿ ಉರಿಯಲಿ ಎನ್ನುವ ಉದ್ದೇಶದಿಂದ ದೊಡ್ಡ ದೊಡ್ಡ ಮರದ ದಿನ್ನೆಗಳನ್ನು ಬೆಂಕಿಗೆ ಹಾಕಿದ್ದರು.  ಬೆಂಕಿಯ ಕಿಚ್ಚು ಸ್ವಲ್ಪ ಆರಿದ ಮೇಲೆ ಕಡಲೆ ಕಾಯಿ ಸುಟ್ಟು ತಿಂದರು.

ಎಲ್ಲೆಲ್ಲೂ ಬಣ್ಣ: ಬೆಳಿಗ್ಗೆಯಿಂದಲೇ ಜನರು ಬಣ್ಣದ ಓಕುಳಿಯಲ್ಲಿ ತೊಡಗಿದ್ದರು. ಮಕ್ಕಳು ನೀರಿನಲ್ಲಿ ಕರಿಗಿಸಿದ ಬಣ್ಣವನ್ನು ಎರಚಿ ಸಂಭ್ರಮಿಸಿದರು. ವಿವಿಧ ರೂಪದ ಪಿಚಕಾರಿಗಳಲ್ಲಿ ಬಣ್ಣದ ನೀರು ತುಂಬಿ ಒಬ್ಬರಿಗೊಬ್ಬರು ಸಿಡಿಸಿ ಸಂತಸಪಟ್ಟರು. ಚಿಕ್ಕಚಿಕ್ಕ ವಾಟರ್‌ ಬಲೂನ್‌ನಲ್ಲಿ ಬಣ್ಣದ ನೀರು ತುಂಬಿ ಎಸೆದರು.

ವಯಸ್ಕರರು ಗಾಢವಾದ ಬಣ್ಣದ ಲೇಪ ಹಚ್ಚಿ ಸಂಭ್ರಮಿಸಿದರು. ವಾರನಿಸ್‌, ಆಯಿಲ್‌ ಪೇಂಟ್‌ ಪರಸ್ಪರರ ಮುಖಕ್ಕೆ ಹಚ್ಚಿ ತಿಕ್ಕಿದರು. ಬಣ್ಣ ಹಚ್ಚಿ ‘ಹ್ಯಾಪಿ ಹೋಳಿ’ ಎಂದು ಪರಸ್ಪರ ಶುಭಾಶಯ ಕೋರಿದರು.

ಮನೆಯಂಗಳ, ಕಟ್ಟಡಗಳು, ರಸ್ತೆಗಳು ಬಣ್ಣದಲ್ಲಿ ಅದ್ದಿ ತೆಗೆದಂತಿತ್ತು. ಕೆಂಪು, ಹಳದಿ, ಹಸಿರು, ಕೇಸರಿ, ನೀಲಿ ಬಣ್ಣಗಳು ಎಲ್ಲೆಡೆ ರಾರಾಜಿಸುತ್ತಿದ್ದವು.
ಕೇಸರಿ ಬಣ್ಣವನ್ನು ಹಣೆಯ ಮೇಲೆ ತಿಲಕ ಮಾದರಿಯಲ್ಲಿ ಹಚ್ಚಿಕೊಂಡ ಯುವಕರು, ಬೈಕ್‌ ಮೇಲೆ ಊರು ತುಂಬ ತಿರುಗಿದರು. ತಾವೇನೂ ಕಮ್ಮಿ ಎನ್ನುವಂತೆ ಯುವತಿಯರು ಕೂಡ ಬಣ್ಣ ಬಳಿದುಕೊಂಡು ಸ್ಕೂಟಿ ಮೇಲೆ ನಗರ ಪ್ರದಕ್ಷಿಣೆ ಹಾಕಿದರು.

ಆಕರ್ಷಕ ಮುಖವಾಡ: ಜೋಕರ್‌, ಭೂತ ಮಾದರಿಯ ಮುಖವಾಡಗಳನ್ನು ಧರಿಸಿದ ಯುವಕರು ಅಲ್ಲಲ್ಲಿ ಕಂಡುಬಂದರು. ಮಧ್ಯಾಹ್ನದ ನಂತರ ಓಕುಳಿ ಮುಗಿದ ನಂತರ ಯುವಕರು ಕೆರೆ, ನದಿ, ತೊರೆಗಳನ್ನು ಹುಡುಕಿ ಹೋದರು. ಸ್ನಾನ ಮಾಡಿ ವಾಪಸ್‌ ಮರಳಿದರು.

ಸಮಾವೇಶ:  ನಗರದ ವ್ಯಾಕ್ಸಿನ್‌ ಡಿಪೊ ಬಳಿಯ ಮೈದಾನದಲ್ಲಿ ಮಾಜಿ ಶಾಸಕ ಅಭಯ ಪಾಟೀಲ ಸಾರ್ವಜನಿಕ ಹೋಳಿ ಆಚರಣೆ ಸಮಾವೇಶ ಏರ್ಪಡಿಸಿದ್ದರು.

ಸಾವಿರಾರು ಯುವಕರು, ಯುವತಿ ಯರು ಪಾಲ್ಗೊಂಡಿದ್ದರು. ಬಣ್ಣ ಎರಚಿ ಸಂಭ್ರಮಿಸಿದರು. ಡಿ.ಜೆ, ಆರ್ಕೆಸ್ಟ್ರಾ ಆಯೋಜಿಸಲಾಗಿತ್ತು. ಈ ಸಂಗೀತಕ್ಕೆ ತಕ್ಕಂತೆ ಯುವಕರು– ಯುವತಿಯರು ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿದರು. ಕಳೆದ ಎಂಟು ವರ್ಷಗಳಿಂದ ಅಭಯ ಪಾಟೀಲ ಈ ರೀತಿ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಸುತ್ತಮುತ್ತಲಿನ ಜನರು ಇದರಲ್ಲಿ ಭಾಗವಹಿಸುತ್ತಿದ್ದಾರೆ.

ನಗರದ ಸಿ.ಪಿ.ಇಡಿ ಮೈದಾನದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಮಹಿಳೆಯರು ಹಾಗೂ ಮಕ್ಕಳಿಗಾಗಿ ಹೋಳಿ ಆಚರಣೆಯ ‘ವುಮೇನಿಯಾ’ ಆಯೋಜಿಸಿದ್ದರು. ₹100 ಪ್ರವೇಶ ಶುಲ್ಕವಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಯುವತಿ ಯರು ಪಾಲ್ಗೊಂಡಿದ್ದರು. ಡಿ.ಜೆ ಆಯೋ ಜಿಸಲಾಗಿತ್ತು.

ಅಂಗಡಿ ಮುಂಗಟ್ಟು ಬಂದ್‌: ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು. ರಸ್ತೆಗಳಲ್ಲಿ ಬಣ್ಣ ಆಡಿದವರನ್ನು ಹೊರತುಪಡಿಸಿದರೆ ಇತರರ ಓಡಾಟ ವಿರಳವಾಗಿತ್ತು. ಆಟೊಗಳು, ಖಾಸಗಿ ವಾಹನಗಳ ಸಂಚಾರ ವಿರಳವಾಗಿತ್ತು. ನಗರ ಸಂಚಾರ ಬಸ್‌ಗಳು ಎಂದಿನಂತೆ ಸಂಚರಿಸಿದವು. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಸಂಜೆಯ ನಂತರ ವಾಹನಗಳು ಎಂದಿನಂತೆ ಸಂಚರಿಸಿದವು. ಕೆಲವು ಅಂಗಡಿಗಳು ತೆರೆದವು.

ರಜೆ ಇಲ್ಲದ ಕಾರಣ ಸರ್ಕಾರಿ ಕಚೇರಿಗಳು ತೆರೆದಿದ್ದವು. ಆದರೆ, ಸಿಬ್ಬಂ ದಿಗಳ ಹಾಜರಾತಿ ಕಡಿಮೆ ಯಾಗಿತ್ತು. ಪೂರ್ವ ನಿಗದಿಯಂತೆ ಪಿಯುಸಿ ಪರೀಕ್ಷೆಗಳು ನಡೆದವು. ಪರೀಕ್ಷಾ ಕ್ಷೇಂದ್ರದ ಸುತ್ತಮುತ್ತ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.