ADVERTISEMENT

ಭಕ್ತರಿಗೆ ಕಿರುಕುಳ ನೀಡದಿರಲು ಪೊಲೀಸರಿಗೆ ತಾಕೀತು

ಚಿಂಚಲಿ ಮಾಯಕ್ಕ ದೇವಿ ಜಾತ್ರಾ ಮಹೋತ್ಸವ: ಪೂರ್ವಭಾವಿ ಸಭೆಯಲ್ಲಿ ಶಾಸಕ ಐಹೊಳೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 9:17 IST
Last Updated 20 ಜನವರಿ 2017, 9:17 IST

ರಾಯಬಾಗ: ಪೊಲೀಸ್‌ ಇಲಾಖೆಯ ಕೆಳವರ್ಗದ ಅಧಿಕಾರಿಗಳು ಉತ್ತರ ಕರ್ನಾಟಕದ ಪ್ರಸಿದ್ಧ ಚಿಂಚಲಿ ಮಾಯ­ಕ್ಕಾದೇವಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಹಾಗೂ ವಾಹನ ಚಾಲಕರಿಗೆ ಕಿರುಕುಳ ಹಾಗೂ ಅನವಶ್ಯಕ­ವಾಗಿ ತೊಂದರೆ ನೀಡಬಾರದು ಎಂದು ಶಾಸಕ ಡಿ.ಎಂ ಐಹೊಳೆ ಸೂಚಿಸಿದರು.

ಚಿಂಚಲಿ ಪಟ್ಟಣದಲ್ಲಿ ಮಾಯಕ್ಕಾ­ದೇವಿಯ ಜಾತ್ರೆಯು ಫೆಬ್ರುವರಿ 10ರಿಂದ 25ರವರಗೆ ನಡೆಯಲಿರುವ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ವಿವಿಧ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದರು.

‘ಜಾತ್ರೆಗೆ ಬರುವ ಲಕ್ಷಾಂತರು ಭಕ್ತರು ಸುಗಮವಾಗಿ ಬಂದು ಹೋಗಲು ರಸ್ತೆಗಳನ್ನು ಶಿಘ್ರವಾಗಿ ದುರಸ್ತಿ ಮಾಡ­ಬೇಕೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪವಿತ್ರ ಪುಣ್ಯ ಸ್ನಾನ ಕ್ಷೇತ್ರವಾದ ಹಾಲಹಳ್ಳಕ್ಕೆ ಜಾತ್ರೆಯ ಮುಂಚೆಯೇ ಕಾಲುವೆ ಮೂಲಕ ನೀರನ್ನು ಹರಿಸು­ವಂತೆ ಹೇಳಿದರು. ಪಟ್ಟಣದಲ್ಲಿ ಜಾಗ ನೀಡಿದರೆ ಶಾಸಕರ ಅನುದಾನದಲ್ಲಿ ನಾಲ್ಕು ಸ್ಥಳಗಳಲ್ಲಿ ಬಸ್ ತಂಗುದಾಣ ಮಾಡುವುದಾಗಿ ಹೇಳಿದರು.

‘ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ, ಆರೋಗ್ಯ, ರಸ್ತೆ ಸುಧಾರಣೆ, ಕಾನೂನು ಹಾಗೂ ಸುವ್ಯವಸ್ಥೆ ಪಾಲನೆಗೆ ಗ್ರಾಮಸ್ಥರ ಸಹಕಾರ ಪಡೆದು ಕಾರ್ಯ ಪ್ರವೃತ್ತರಾಗಿ ತಮ್ಮ ಇಲಾಖೆಯ ಕೆಲಸವನ್ನು ಚಾಚೂ ತಪ್ಪದೇ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಯಬಾಗ ಪ್ರಭಾರ ಸಿಪಿಐ ಬಿ.ಎಸ್. ಲೋಕಾಪೂರ ಮಾತನಾಡಿ, ‘ಪೊಲೀಸ್ ಬಂದೋಬಸ್ತ್‌ ಮತ್ತು ಕಾನೂನು ಶಿಸ್ತು ಪಾಲನೆ ಮಾಡಲು ಗ್ರಾಮಸ್ಥರು ಸಹಕರಿಸಬೇಕು. ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಸೂಕ್ತ ರಕ್ಷಣೆ ಹಾಗೂ ಬಂದೋಬಸ್ತ್‌ ಒದಗಿಸ­ಲಾಗುವುದು’ ಎಂದರು.

ತಹಶೀಲ್ದಾರ ಕೆ.ಎನ್. ರಾಜಶೇಖರ ಮಾತನಾಡಿ, ಮಾಯಕ್ಕಾದೇವಿ ಜಾತ್ರೆಯು ಸುಗಮವಾಗಿ ನಡೆಯುವಂತೆ ಎಲ್ಲ ತಾಲ್ಲೂಕು ಅಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿಯನ್ನು ಚಾಚೂ ತಪ್ಪದೇ ಮಾಡಬೇಕೆಂದರು.

ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುನಿಲಕುಮಾರ್‌ ಬಬಲಾದಿ, ‘ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಯಾಗದಂತೆ ಪಟ್ಟಣ ಪಂಚಾಯ್ತಿಯಿಂದ ಮೂಲಸೌಲಭ್ಯಗಳ ವ್ಯವಸ್ಥೆ ಮಾಡಲಾಗುವುದೆಂದರು. ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಶೇಖರ ಬಹುರೂಪಿ ಮಾತನಾಡಿ, ಜಾತ್ರೆಯ ಸಮಯದಲ್ಲಿ ಭಕ್ತಾದಿಗಳಿಗೆ ತೊಂದರೆಯಾಗದಂತೆ  ಸರಿಯಾಗಿ ವಿದ್ಯುತ್ ಪೂರೈಸಲಾಗುವುದೆಂದರು.
ನಿವೃತ್ತ ಡಿವೈಎಸ್‍ಪಿ ಸದಾಶಿವ ಪಡೋಳಕರ ಮಾತನಾಡಿದರು.

ಪೂರ್ವಭಾವಿ ಸಭೆಯಲ್ಲಿ ಕಾಡಾ ಅಧ್ಯಕ್ಷ ಈರಗೌಡ ಪಾಟೀಲ, ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಜಿತೇಂದ್ರ ಜಾಧವ, ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಂ ಜಕ್ಕಪ್ಪಗೋಳ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಎನ್.ಆರ್. ಪೋಳ, ಉಪಾಧ್ಯಕ್ಷ ರಮೇಶ ಹಾರೂಗೇರಿ, ಅಂಕುಶ ಜಾಧವ, ಜಾಕೀರ್‌ ತರಡೆ, ಜಗದೀಶ ಕಿತ್ತೂರ, ಲಕ್ಷ್ಮಣ ಕರಾಕಾಯಿ, ಕದ್ದು ಜಾಧವ, ಮಹಾದೇವ ಪಡೋಳಕರ, ಪ.ಪಂ ಸದಸ್ಯರು, ತಾಲ್ಲೂಕಾ ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.
ಕಾರ್ಯಕ್ರಮವನ್ನು ಎಸ್.ಪಿ ಕಂಕಣವಾಡಿ, ನಿರೂಪಿಸಿದರು. ಸಂಜು ನಿಂಗನೂರೆ ಸ್ವಾಗತಿಸಿದರು. ಲಕ್ಷ್ಮಣ ಕೊಳಿಗುಡ್ಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.