ADVERTISEMENT

ಮಳಿಗೆ ಹರಾಜು ಅವ್ಯವಹಾರ: ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 8:03 IST
Last Updated 21 ಜನವರಿ 2017, 8:03 IST
ಮಳಿಗೆ ಹರಾಜು ಅವ್ಯವಹಾರ: ತನಿಖೆಗೆ ಆಗ್ರಹ
ಮಳಿಗೆ ಹರಾಜು ಅವ್ಯವಹಾರ: ತನಿಖೆಗೆ ಆಗ್ರಹ   

ಖಾನಾಪುರ: ಪಟ್ಟಣದ ಸ್ಟೇಶನ್ ರಸ್ತೆಯಲ್ಲಿರುವ ತಾಲ್ಲೂಕು ಪಂಚಾಯ್ತಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಹರಾಜು ಅವಧಿ ಕಳೆದ ಡಿ.31ರಂದೇ ಕೊನೆಗೊಂಡಿದ್ದರೂ ಇದುವರೆಗೂ ಹೊಸದಾಗಿ ಹರಾಜು ನಡೆಸದೇ ಕಾನೂನು ಉಲ್ಲಂಘಿಸಿ ಹಳೆಯ ಹರಾಜು ದಾರಿಗೆ ಬಾಡಿಗೆಯನ್ನು ಮುಂದುವರಿ ಸಲಾಗಿದ್ದು, ಇದರಲ್ಲಿ ಲಕ್ಷಾಂತರ ಮೊತ್ತದ ಅವ್ಯವಹಾರವಾಗಿದೆ. ಕೂಡಲೇ ಇದರ ತನಿಖೆ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯರು ಪ್ರೊಬೇಷನರಿ ಐಎಎಸ್ ಅಧಿಕಾರಿ ಹಾಗೂ ಮುಖ್ಯಾಧಿಕಾರಿ ನಿತೀಶ್ ಅವರನ್ನು ಆಗ್ರಹಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಗೃಹದಲ್ಲಿ ಗುರುವಾರ ಜರುಗಿದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ತಾಲ್ಲೂಕು ಪಂಚಾಯ್ತಿಯಿಂದ 10 ವರ್ಷಗಳ ಹಿಂದೆ ತಿಂಗಳಿಗೆ ಕೇವಲ ₹500, ಸಾವಿರ  ರೂಪಾಯಿಗಳಿಗೆ ಮಳಿಗೆಗಳನ್ನು ಬಾಡಿಗೆ ಪಡೆದವರು ಈಗ ಹತ್ತರಿಂದ ಇಪ್ಪತ್ತು ಸಾವಿರ ಹಣಕ್ಕೆ ಮತ್ತೊಬ್ಬರಿಗೆ ಮರು ಬಾಡಿಗೆ ನೀಡಿ ಹಣ ಗಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೆಲ ಮಳಿಗೆಗಳನ್ನು ಬಾಡಿಗೆದಾರರು ಲಕ್ಷಾಂತರ ಮೊತ್ತಕ್ಕೆ ಲೀಜ್ ನೀಡಿದ್ದಾರೆ. ಇದರಿಂದ ತಾಲ್ಲೂಕು ಪಂಚಾಯ್ತಿಗೆ ತಿಂಗಳಿಗೆ ಕನಿಷ್ಠ ₹3 ಲಕ್ಷ ನಷ್ಟ ಉಂಟಾಗುತ್ತಿದೆ. ಈ ಅವ್ಯವಹಾರದ ಹಿಂದೆ ಶಾಮೀಲಾದ ಅಧಿಕಾರಿಗಳು, ತಾಲ್ಲೂಕು ಪಂಚಾಯ್ತಿ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳ ವಿರುದ್ಧ ಇದೇ 23 ಒಳಗೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ಜ.23ರಿಂದ ತಾಲ್ಲೂಕು ಪಂಚಾಯ್ತಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ತೋಪಿನ ಕಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ವಸಂತ ತಿರವೀರ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಕಾರಣ ತಡಮಾಡದೇ ಈ ವಿಷಯದ ಬಗ್ಗೆ ತಾ.ಪಂ ನಿಲುವು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದರು.

ಪಿ.ಟಿ ಸಾವಂತ ಮಾತನಾಡಿ, ವಾಣಿಜ್ಯ ಮಳಿಗೆಗಳನ್ನು ಈಗಾಗಲೇ ಬಾಡಿಗೆ ಪಡೆದವರಿಂದ ಹಣದ ಆಮಿಷ ಮತ್ತು ಹರಾಜು ಪ್ರಕ್ರಿಯೆ ಕೈಗೊಳ್ಳದಂತೆ ಹೇರಲಾದ ರಾಜಕೀಯ ಒತ್ತಡಕ್ಕೆ ಮಣಿದ ಕಾರ್ಯನಿರ್ವಾಹಕ ಅಧಿಕಾರಿ ಗಳು ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಲು ಕಾರಣರಾಗಿದ್ದು, ಕರ್ತವ್ಯಲೋಪ ಎಸಗಿ ರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಳೆದ ಹಲವು ಸಭೆಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿದರೂ ಇಒ ಮತ್ತು ಸಿಬ್ಬಂದಿ ಸೂಕ್ತ ಉತ್ತರ ನೀಡದಿರುವುದು ಅನುಮಾನಾಸ್ಪದ ವಾಗಿದೆ ಎಂದರು. ಉಳಿದಂತೆ ಸಭೆಯಲ್ಲಿ ಆರೋಗ್ಯ, ಕುಡಿಯುವ ನೀರು, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಶಿವಾನಂದ ಚಲವಾದಿ, ಬಸವರಾಜ ಸಾಣಿಕೊಪ್ಪ, ಬಾಳಾಸಾಹೇಬ ಶೇಲಾರ ಸೇರಿದಂತೆ ಜನಪ್ರತಿನಿಧಿಗಳು ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.