ADVERTISEMENT

ಯಲ್ಲಮ್ಮ ಭಕ್ತರಿಗೆ ಕೊಳಕು ನೀರೇ ಗತಿ!

ಅಧಿಕಾರಿಗಳ ಬೇಕಾಬಿಟ್ಟಿ ವರ್ತನೆ; ಕೆಸರಿನಲ್ಲಿ ಸ್ನಾನ ಮಾಡುತ್ತಿರುವ ಲಕ್ಷಾಂತರ ಯಾತ್ರಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:35 IST
Last Updated 3 ಫೆಬ್ರುವರಿ 2017, 6:35 IST
ಯಲ್ಲಮ್ಮ ಭಕ್ತರಿಗೆ ಕೊಳಕು ನೀರೇ ಗತಿ!
ಯಲ್ಲಮ್ಮ ಭಕ್ತರಿಗೆ ಕೊಳಕು ನೀರೇ ಗತಿ!   

ಸವದತ್ತಿ: ಮಲಪ್ರಭೆಯ ಒಡಲು ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ಮುಂದಿನ 4–5 ತಿಂಗಳ ಕಾಲ ಕುಡಿಯುವ ನೀರಿಗೆ ಮಾತ್ರವಲ್ಲ ಇತರ ಬಳಕೆಗೂ ನೀರು ಲಭ್ಯವಾಗಲಿಕ್ಕಿಲ್ಲ.

ಹೀಗಾಗಿ ಇದೇ ತಿಂಗಳು ನಡೆಯುವ ಭಾರತ ಹುಣ್ಣಿಮೆಗೆ ಬರುವ ಭಕ್ತರ ಸ್ನಾನಕ್ಕೆ, ಕುಡಿಯಲು ಇಲ್ಲಿನ ತಾವರೆ ಕೆರೆಯಲ್ಲಿನ ಕೆಸರಿನ ನೀರೇ ಗತಿಯಾಗಿದೆ.
ಕಳೆದ 4ರಿಂದ 5 ವರ್ಷಗಳ ಕಾಲ ಬರಗಾಲದಿಂದಾಗಿ ಮಲಪ್ರಭೆಯ ಒಡಲು ಪೂರ್ತಿ ಭರ್ತಿಯಾಗಲೇ ಇಲ್ಲ. ಇದರಿಂದ ಈ ಭಾಗದ ರೈತರು ಹಾಗೂ ಸಾರ್ವಜನಿಕರು ಆತಂಕದಲ್ಲಿದ್ದರು. ಈ ವರ್ಷವೂ ಕೃಷಿ ವಿಫಲವಾಯಿತು ಎಂದು ಕೈ ಚೆಲ್ಲಿದ್ದರು. ಈ ಭಾಗದ ಜನಪ್ರತಿನಿಧಿಗಳು ಹಾಗೂ ಇವರುಗಳ ತಾಳಕ್ಕೆ ಕುಣಿಯುವ ಅಧಿಕಾರಿಗಳ ಬೇಕಾಬಿಟ್ಟಿ ವರ್ತನೆಯಿಂದಾಗಿ ಮಲಪ್ರಭೆ ಇನ್ನಷ್ಟು ಸೊರಗಿ ಹೋಗಿದೆ.

ಮಲಪ್ರಭಾ ನದಿಯಲ್ಲಿ ಸಾಕಷ್ಟು ಹೂಳು ತುಂಬಿದ್ದರಿಂದ ನೀರಿನ ಸಂಗ್ರಹ ಅತ್ಯಂತ ಕಡಿಮೆಯಾಗಿದ್ದು, ಬರುವ ದಿನಗಳಲ್ಲಿ ಕುಡಿಯುವ ನೀರಿಗೂ ಸಂಚಕಾರ ಬರುವ ಎಲ್ಲ ಲಕ್ಷಣಗಳು ಕಂಡುಬಂದರೂ ಬೆಳಗಾವಿ ಅಧಿವೇಶನ ದಲ್ಲಿ ಸರ್ಕಾರ ಕೈಗೊಂಡ ನಿರ್ಧಾರ ದಿಂದಾಗಿ ಕೃಷಿಗೆ ನೀರು ಹರಿಸಲಾಯಿತು. ಆದರೆ ಆ ಸಂದರ್ಭದಲ್ಲಿ ರೈತರ ಜಮೀನಿನಲ್ಲಿ ಯಾವುದೇ ಬೆಳೆ ಇರಲಿಲ್ಲ. ರೈತರ ಪ್ರತಿಭಟನೆ ಹಾಗೂ ಹೋರಾಟದ ದಿಕ್ಕು ತಪ್ಪಿಸಲು ಬೇಜವಾಬ್ದಾರಿಯಿಂದ ನೀರು ಹರಿಸಿದರು ಎಂದು ರೈತಸೇನಾ ಕರ್ನಾಟಕದ ಜಯಶಂಕರ ವನ್ನೂರ ಆಕ್ರೋಶ ವ್ಯಕ್ತಪಡಿಸಿದರು.

ನದಿ ನೀರಿನ ಜತೆ ರಾಜಕಾರಣ ಮಾಡಿದ್ದರ ಫಲವಾಗಿ ಇಂದು ಮಲಪ್ರಭೆಯ ನೀರು ಕಿಲೋ ಮೀಟರ್‌ ಗಟ್ಟಲೇ ಹಿಂದೆ ಸರಿದಿದೆ. ಇದರಿಂದ ಕೃಷಿ ಇರಲಿ, ಮಹಾನಗರಕ್ಕೆ, ಜಿಲ್ಲೆಯ, ಪಕ್ಕದ ತಾಲ್ಲೂಕುಗಳ ಕುಡಿಯುವ ನೀರು ಪಡೆಯಲು ಹರಸಾಹಸ ಪಡುವುದರಲ್ಲಿ ಸಂಶಯವಿಲ್ಲ. ನದಿಯಲ್ಲಿ ನೀರು ಇರುವಾಗ ಅದನ್ನು ಮಿತ ಬಳಕೆಯಿಂದ ಉಳಿಸಿಕೊಳ್ಳುವ ಗೋಜಿಗೆ ಯಾವ ಅಧಿಕಾರಿಯೂ ಹೋಗಲಿಲ್ಲ. ಇವರೆಲ್ಲರು ಭಂಡರು ಎಂದು ಹಿರಿಯ ನಾಗರಿಕ ಬಿ.ಎನ್‌. ಪ್ರಭುನವರ ಕಾಕಾ ದೂರಿದರು.

ಇಂದಿನ ನೀರಿನ ಮಟ್ಟ: ಇಂದಿನ (ಗುರುವಾರ) ದಿನದ ನೀರಿನ ಮಟ್ಟ 2047.45 ಅಡಿ ಅಂದರೆ 8.6617 ಟಿಎಂಸಿ ಅಡಿ. ನದಿಗೆ ಯಾವುದೇ ಒಳಹರಿವು ಇಲ್ಲ. 134 ಕ್ಯೂಸೆಕ್ಸ್‌ ಹೊರಹರಿವು ಇದೆ ಎಂದು ನವಿಲು ತೀರ್ಥದ ಮಲಪ್ರಭಾ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಬಾರಿ ಕಳೆದ ವರ್ಷದಷ್ಟು ಕುಡಿಯುವ ನೀರಿನ ಸಮಸ್ಯೆಯಾಗದು ಎನ್ನುತ್ತಾರೆ.

ಲಕ್ಷಾಂತರ ಭಕ್ತರ ಸ್ನಾನಕ್ಕೆ ತೊಂದರೆ: ಇದೇ ಭರತ ಹುಣ್ಣಿಮೆಯಂದು ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಸವದತ್ತಿಗೆ ಬರುತ್ತಾರೆ. ಅದಕ್ಕೂ ಮುನ್ನವೇ ಮಂಗಳವಾರ ಹಾಗೂ ಶುಕ್ರವಾರ ಭಕ್ತರ ದಂಡವೇ ಹರಿದು ಬರುತ್ತದೆ. ಮಲಪ್ರಭಾ ನದಿಯಲ್ಲಿ ನೀರಿಲ್ಲದ ಕಾರಣ ಎಲ್ಲ ಭಕ್ತರಿಗೆ ತಾವರೆ ಕೆರೆಯ ನೀರೇ ಗತಿ.

‘ಕುಡಿಯುವ ನೀರು ಹರಿಸಲು ಯಾರದೂ ತಕರಾರಿಲ್ಲ. ಆದರೆ ನದಿಯೊಳಗೆ ಎಷ್ಟು ನೀರಿದೆ, ಅದರಲ್ಲಿ ಉಪಯುಕ್ತ ನೀರೆಷ್ಟು, ನೀರಾವರಿಗೆ ಎಷ್ಟು, ಕಾಲುವೆ ಮೂಲಕ ಬೇರೆ ತಾಲ್ಲೂಕುಗಳಿಗೆ ಎಷ್ಟು ನೀರು ಹೋಗುತ್ತದೆ ಎಂಬ ಮಾಹಿತಿ ಇಲ್ಲದೇ ಯಾರೋ ಹೇಳಿದ್ರು ಎಂದು ಅಧಿಕಾರಿಗಳು ಬಿಡಲಾಯಿತು. ಈ ಬಗ್ಗೆ ಕೇಳಿದರೆ ಜಿಲ್ಲಾಧಿಕಾರಿಗಳ ಆದೇಶದಂತೆ ನೀರು ಬಿಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

-ಸದಾಶಿವ ಮಿರಜಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT