ADVERTISEMENT

ವರ್ಷಾಂತ್ಯಕ್ಕೆ ‘ಬಯಲು ಶೌಚಮುಕ್ತ ಜಿಲ್ಲೆ’ ಘೋಷಣೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 6:57 IST
Last Updated 18 ಜುಲೈ 2017, 6:57 IST

ಬೆಳಗಾವಿ: ‘ವರ್ಷಾಂತ್ಯದೊಳಗೆ ಜಿಲ್ಲೆಯನ್ನು ‘ಬಯಲು ಶೌಚ ಮುಕ್ತ’ ಎಂದು ಘೋಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಎಚ್‌.ಪಿ. ಪ್ರಕಾಶ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಸ್ವಚ್ಛ ಭಾರತ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಕೈಗೊಂಡಿರುವ ಕ್ರಮಗಳ ಕುರಿತು ತೃಪ್ತಿ ವ್ಯಕ್ತಪಡಿಸಿದ ಅವರು, ‘ಗ್ರಾಮಗಳ ಸಮಗ್ರ ಅಭಿವೃದ್ಧಿ, ಆರೋಗ್ಯವಂತ ಸಮಾಜದ ನಿರ್ಮಾಣ ಕ್ಕಾಗಿ ಸ್ವಚ್ಛತೆ ಹಾಗೂ ಶುಚಿತ್ವದ ಮಹತ್ವದ ಕುರಿತು ಜನಜಾಗೃತಿ ಮೂಡಿಸ ಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಆರ್‌. ರಾಮಚಂದ್ರನ್ ಮಾತನಾಡಿ, ‘ಜಿಲ್ಲೆಯಲ್ಲಿ 5,22,538 ಶೌಚಾಲಯ ನಿರ್ಮಾಣದ ಗುರಿ ಇತ್ತು. 2016ರ ಅಂತ್ಯಕ್ಕೆ 2,99,625 ನಿರ್ಮಿಸಲಾಗಿತ್ತು. ಪ್ರಸ್ತುತ ಸಾಲಿನಲ್ಲಿ 20919 ಕಟ್ಟಲಾಗಿದೆ. ಉಳಿದವು ಪ್ರಗತಿಯಲ್ಲಿವೆ. ಡಿಸೆಂಬರ್ ಅಂತ್ಯಕ್ಕೆ ಪೂರ್ಣ ಗುರಿ ಸಾಧಿಸಲು ಕ್ರಮ ವಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ ಸ್ವಚ್ಛ ಭಾರತ ಅಭಿಯಾನ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿದೆ. ಜನಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಅಭಿಯಾನದಲ್ಲಿ ಒಳಗೊಳಿಸಿಕೊಳ್ಳಲಾಗಿದೆ. ಶಿಕ್ಷಕರು, ವಿದ್ಯಾರ್ಥಿಗಳಿಂದ ಪತ್ರ ಚಳವಳಿ ನಡೆಸಲಾಗಿದೆ. ತಾಲ್ಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಗಳ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಹೇಳಿದರು.

‘ತಾಲ್ಲೂಕುವಾರು ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಭೆಗಳನ್ನು ನಡೆಸಿ, ಸೂಚನೆ ನೀಡಲಾಗಿದೆ. ಅಂಗನವಾಡಿಯ 4,109 ಕಾರ್ಯಕರ್ತೆಯರು ಹಾಗೂ 3,534 ಆಶಾ ಕಾರ್ಯಕರ್ತೆಯರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ನಿಯೋಜಿಸಲಾಗಿದೆ. ಅವರು ಮನೆ– ಮನೆಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ’ ಎಂದು ವಿವರಿಸಿದರು.

‘ಅತ್ಯುತ್ತಮ ಪ್ರಗತಿ ಸಾಧಿಸುವಲ್ಲಿ ಶ್ರಮಿಸಿದ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ಪ್ರಶಂಸಾಪತ್ರ ನೀಡಲಾಗುವುದು. ಪಡಿತರ ಚೀಟಿಗಳಲ್ಲಿ ಶೌಚಾಲಯ ಇರುವ ಮನೆ ಎಂದು ಸೀಲು ಹಾಕಿ ಸಹಿ ಮಾಡುವುದು, ಶಾಲಾ ಮಕ್ಕಳಿಂದ ಪಾಲಕರಿಗೆ ಪತ್ರ ಬರೆಸುವ ಮೂಲಕ ಅಭಿಯಾನವನ್ನು ವ್ಯಾಪಕವಾಗಿ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಆಶಾ ಕಾರ್ಯಕರ್ತೆ ಯರ ಮೂಲಕ ತಿಳಿವಳಿಕೆ ನೀಡಿ ಶೌಚಾ ಲಯ ಕಟ್ಟಿಸಿಕೊಳ್ಳುವಂತೆ ಪ್ರೇರೆಪಣೆ ಮೂಡಿಸಲಾಗುತ್ತಿದೆ. ವಾಟ್ಸ್‌ ಆ್ಯಪ್‌, ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಗತಿ ಕುರಿತು ನಿಗಾ ವಹಿಸಲಾಗುತ್ತಿದೆ. ಶೌಚಾಲಯ ನಿರ್ಮಾಣದ ವಿವಿಧ ಹಂತದ ಛಾಯಾಚಿತ್ರಗಳನ್ನು ತಂತ್ರಾಂಶ ದಲ್ಲಿ ಅಪ್‌ಲೋಡ್‌ ಮಾಡುವಂತೆ ಸೂಚಿಸಲಾಗಿದೆ’ ಎಂದರು. ಅಭಿಯಾನದ ಜಿಲ್ಲಾ ನೋಡಲ್ ಅಧಿಕಾರಿ ಎಸ್.ಬಿ. ಮುಳ್ಳಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.