ADVERTISEMENT

ಶಕುನ ಹೇಳುವ ನೆಪದಲ್ಲಿ ಭಕ್ತರ ಸುಲಿಗೆ

ಯಲ್ಲಮ್ಮನ ಗುಡ್ಡದಲ್ಲಿ ನಿರಾತಂಕವಾಗಿ ನಡೆದಿದೆ ಈ ದಂಧೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 10:34 IST
Last Updated 28 ಫೆಬ್ರುವರಿ 2017, 10:34 IST

ಸವದತ್ತಿ: ಶಕುನ ಹೇಳುವ ನೆಪದಲ್ಲಿ ಇಲ್ಲಿಯ ಯಲ್ಲಮ್ಮನ ಗುಡ್ಡದಲ್ಲಿ ಮತ್ತು ಜೋಗುಳಬಾವಿ ಸುತ್ತಮುತ್ತ ಭಕ್ತರ ಸುಲಿಗೆ ನಿರಾತಂಕವಾಗಿ ನಡೆದಿದೆ. ಯುವಕರು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಇದಕ್ಕೆ ಬಲಿಯಾಗುತ್ತಿದ್ದಾರೆ.

‘ನಿನ್ನ ಮನಸಿನ್ಯಾಗ್‌ ಒಂದ್‌ ಆಸೆ ಐತಿ... ಅದು ಈಡೇರುವ ಹೊತ್ತ ಬಂದೈತಿ... ಸ್ವಲ್ಪ ಸಮಾಧಾನದಿಂದ ನನ್ನ ಮಾತು ಕೇಳು...’ ಎಂದು ನಯವಾಗಿ ಮಾತನಾಡಿ, ನೂರು ರೂಪೈ ಇಲ್ಲೇ ಇಡು’ ಎಂದಾಗ ಮುಗ್ಧ ಭಕ್ತರು ಹಣ ಇಟ್ಟ ಕೊಡಲೇ ಇಲ್ಲದ ಭವಿಷ್ಯ ನುಡಿದು, ‘ಇನ್ನ ಮುಂದ್‌ ನಿನಗ ತಿಳಿದಷ್ಟು ಖುಷಿ ಕೊಡು’ ಎನ್ನುತ್ತ ಮತ್ತೆ ಹಣ ಕೀಳುತ್ತಾರೆ.

ಅಷ್ಟರಲ್ಲಿ ಆ ಭಕ್ತ ಇತರೇ ಜನರನ್ನು ಕಂಡು ಮುಜುಗರದಿಂದ ‘ಸಾಕಮ್ಮಾ ಬಿಡು’ ಎಂದರೂ ಬಿಡದ ಈ ಶಕುನ ಹೇಳುವ ಮಹಿಳೆ, ಓಡಿ ಹೋಗುವವನ ಅಂಗಿ ಹಿಡಿದು ಎಳೆದಾಡಿದಾಗ, ನನ್ನನ್ನು ಬಿಟ್ಟರೇ ಸಾಕು ಎಂದು ಕೇಳಿದಷ್ಟು ಹಣ ಕೊಟ್ಟು, ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ.

ಇಂಥ ಘಟನೆಗಳು ಉತ್ತರ ಕರ್ನಾಟಕದ ಪ್ರಸಿದ್ಧ ಶಕ್ತಿಪೀಠ ಯಲ್ಲಮ್ಮನ ಗುಡ್ಡದಲ್ಲಿ ನಿರಾತಂಕವಾಗಿ ನಡೆಯುತ್ತಿವೆ. ಅಮಾಯಕ ಹಾಗೂ ಯುವ ಭಕ್ತರನ್ನು ಮಾತಿನ ಮೋಡಿಯಿಂದ ತಮ್ಮ ವಶಕ್ಕೆ ತೆಗೆದುಕೊಳ್ಳುವ ಇಲ್ಲಿನ ಶಕುನ ಹೇಳುವ ಮಹಿಳೆಯರು, ಮೊದಲು ಇಲ್ಲದ ಕತೆ ಕಟ್ಟುತ್ತಾರೆ. ಕವಡೆ ಹಚ್ಚಿದ ಪಾತ್ರೆಯಲ್ಲಿ ಹಣ ಇಡುವಂತೆ ಹೇಳುತ್ತಾರೆ. ಭಕ್ತರು ತಮ್ಮ ಕಿಸೆಯಿಂದ ಹಣ ತೆಗೆಯುವಾಗ ಅವರಲ್ಲಿರುವ ಹಣ ಗಮನಿಸುವ ಇವರು, ಒಂದು ಮಾತಿಗೆ ಒಂದೊಂದು ನೋಟು ಬಿಚ್ಚುವಂತೆ ಮರುಳು ಮಾಡುತ್ತಾರೆ.

ಈ ಮೊದಲು ಈ ಶಕುನ ಹೇಳುವ ಮಹಿಳೆಯರು ದೇವಸ್ಥಾನದ ಎದುರಲ್ಲೇ ಠಿಕಾಣಿ ಹೂಡಿದ್ದರು. ಇವರಿಂದ ಅವಮಾನಗೊಂಡ ಕೆಲವರು ಆಡಳಿತ ಮಂಡಳಿ ಗಮನಕ್ಕೆ ತಂದಾಗ, ಅವರನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಲಾಯಿತು. ಆದರೆ ಇದೀಗ ದೇವಸ್ಥಾನದ ದ್ವಾರಬಾಗಿಲ ಬಳಿ ಹಾಗೂ ಜೋಗುಳಬಾವಿ ಸುತ್ತಮುತ್ತ ಠಿಕಾಣಿ ಹೂಡಿದ್ದಾರೆ.

‘ಇವರು ನಮ್ಮ ಭವಿಷ್ಯ ಹೇಳುವ ನೆಪದಲ್ಲಿ ಮನಬಂದಂತೆ ಸುಲಿಗೆ ಮಾಡುತ್ತಾರೆ. ಆದರೆ ಇಂಥವರಿಂದ ಇಡೀ ಕ್ಷೇತ್ರದ ಘನತೆಗೆ ಧಕ್ಕೆ ಉಂಟಾಗುತ್ತಿದೆ. ಅಲ್ಲದೆ ಮೂಢನಂಬಿಕೆ ಎಂಬ ಕೊಳಚೆಯಲ್ಲಿ ಮತ್ತೆ ನಮ್ಮನ್ನು ಸಿಲುಕಿಸುವ ಅನಿಷ್ಟ ಪದ್ಧತಿ ಇದಾಗಿದ್ದು, ಇವರನ್ನು ಪೊಲೀಸರು ಬಂಧಿಸಬೇಕು’ ಎಂದು  ಮಹಾರಾಷ್ಟ್ರದ ರತ್ನಾಗಿರಿಯ ಮಧುಕರ ಜಾಧವ ಅವರು ‘ಪ್ರಜಾವಾಣಿ’ ಎದುರು ಅಗ್ರಹಿಸಿದರು.
‘ಮೊದಲು ₹ 50 ಇಟ್ಟೆ. ಆ ನಂತರ ಮತ್ತೆ 50 ಇಡು ಅಂದ್ರು, ಅದನ್ನು ಇಡುವಾಗ ನನ್ನಲ್ಲಿ ₹ 100 ಹಾಗೂ ₹ 500 ನೋಟು ಗಮನಿಸಿದ ಆ ಮಹಿಳೆ, ‘ನಿನ್ನದೊಂದು ಭಾರಿ ಕನಸು ನನ ಸಾಗುವ ಸಮಯ ಬಂದೈತಿ, ಅದಕ್ಕೊಂದು ತಂತ್ರ ಹೇಳತೇನಿ, ಮೊದಲ್‌ ₹ 500 ನೋಟು ಇಲ್ಲಿ ಇಟ್ಟು ಮತ್ತ್‌ ತಕ್ಕೊ ಎಂದಳು. ಅದಕ್ಕ ಅವಳಿಂದ ತಪ್ಪಿಸಿಕೊಂಡು ಬಂದೇನಿ...’ ಎಂದು ಜೋಗುಳಬಾವಿ ಬಳಿ ಶಕುನ ಹೇಳುವ ಮಹಿಳೆಯಿಂದ ತಪ್ಪಿಸಿಕೊಂಡು ಓಡಿಬಂದ ಧಾರವಾಡದ ಲಕ್ಷ್ಮಿ ಹೇಳಿದರು.

‘ಈ ಅನಿಷ್ಟ ಪದ್ಧತಿ ಸಮಾಜಕ್ಕೆ ಮಾರಕವಾಗಿದ್ದು, ಇದನ್ನು ಬೇರು ಸಮೇತ ಕಿತ್ತುಹಾಕುವ ನಿಟ್ಟಿನಲ್ಲಿ ಈ ಶಕುನ ಹೇಳುವ ಮಹಿಳೆಯರನ್ನು ನಿಯಂತ್ರಿಸುವುದು ಅಗತ್ಯ’ ಎಂದು ಅವರು ಆಗ್ರಹಿಸಿದರು.

* ಅಮಾಯಕ ಜನರ ಮನೋ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ದೈವದ ಹೆಸರಲ್ಲಿ ಸುಲಿಗೆ ನಡೆಯುತ್ತಿದೆ. ಇದನ್ನು ತಡೆಯಲು ಕಾನೂನು ಕ್ರಮ ಅಗತ್ಯ -ಲಕ್ಷ್ಮೀ ಧಾರವಾಡ, ರೇಣುಕಾದೇವಿ ಭಕ್ತೆ


-ಸದಾಶಿವ ಮಿರಜಕರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.