ADVERTISEMENT

‘ಶರಣರನ್ನು ಜಾತಿಯಿಂದ ಗುರುತಿಸಬೇಡಿ’

ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ದಲಿತ ವಚನಕಾರರ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 11:34 IST
Last Updated 11 ಮಾರ್ಚ್ 2017, 11:34 IST
ಸವದತ್ತಿ: ‘ಶರಣರು, ದಾರ್ಶನಿಕರನ್ನು ಜಾತಿಯಿಂದ ಗುರುತಿಸಬಾರದು. ಅವರ ತತ್ವ, ಸಂದೇಶಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ’ ಎಂದು ಶಾಸಕ ಆನಂದ ಮಾಮನಿ ಹೇಳಿದರು.
 
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ದಲಿತ ವಚನಕಾರರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
‘ವಚನಕಾರರನ್ನು ಅವರ ಜಯಂತ್ಯುತ್ಸವ ದಿನ ಮಾತ್ರ ನೆನಸಿಕೊಳ್ಳುವುದು ಸರಿಯಲ್ಲ. ಅವರು ರಚಿಸಿದ ವಚನಗಳನ್ನು ನಿತ್ಯವೂ ಮೆಲುಕು ಹಾಕುವುದೇ ಅವರಿಗೆ ನೀಡುಬಹುದಾದ ನಿಜವಾದ ಗೌರವ’ ಎಂದೂ ಹೇಳಿದರು.
 
ಶಿವಾಪುರದ ರಾಣಿ ಚನ್ನಮ್ಮ ವಸತಿ ಶಾಲೆಯ ನಿಲಯ ಪಾಲಕ ಎಸ್‌.ಡಿ ಮಾಳಗಿ ಮಾತನಾಡಿ, ‘ನಿತ್ಯ ಕಾಯಕದ ಜೊತೆಗೆ ಶಿವಭಕ್ತರಿಗೆ ಅನ್ನ 
ದಾಸೋಹ ಮಾಡುವುದೇ ಶರಣ ಸಂಸ್ಕೃತಿ’ ಎಂದರು. 
 
ಉತ್ಸವ ಸಮಿತಿ ಅಧ್ಯಕ್ಷ, ತಹಶೀಲ್ದಾರ್ ಬಸವರಾಜ ಮೆಳವಂಕಿ ಮಾತನಾಡಿ, ‘ಬಸವಾದಿ ಶರಣರಂತೆ ದಲಿತ ವಚನಕಾರರು ಸಹ ಸಮಾನತೆಗಾಗಿ ಶ್ರಮಿಸಿದರು’ ಎಂದರು.
 
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಯಲ್ಲಪ್ಪ ಮಾದರ, ಸೋಮನಿಂಗ ಮಲ್ಲೂರ, ಡಾ. ಯಲ್ಲಪ್ಪ ಪೂಜೇರಿ, ಮುಕುಂದ ಬಡೆಪ್ಪನವರ, ಅಜ್ಜಪ್ಪ ಕೊಪ್ಪದ, ಮೋಹನ ಅಗಾಸಿ, ಎಸ್‌.ಡಿ ಮಾಳಗಿ ಅವರನ್ನು ಸನ್ಮಾನಿಸಲಾಯಿತು.
 
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಿನಯಕುಮಾರ ದೇಸಾಯಿ, ಉಪಾಧ್ಯಕ್ಷೆ ಸೋನವ್ವ ದೊಡಮನಿ, ಎಪಿಎಂಸಿ ಅಧ್ಯಕ್ಷ ಪ್ರಭು ಪ್ರಭುನವರ, ಪುರಸಭೆ ಉಪಾಧ್ಯಕ್ಷ ಬಸವರಾಜ ಜಗ್ಗಲಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಗುರುನಾಥ ಗಂಗಲ, ಎಂ.ಎಸ್‌ ಹಿರೇಕುಂಬಿ, ಶಿವಲೀಲಾ ಗೋರವನ ಕೊಳ್ಳ, ಬಸವರಾಜ ಬಂಡಿವಡ್ಡರ, ತಾ.ಪಂ ಇಓ ಎಸ್‌.ಎಸ್‌ ಕಲ್ಮನಿ, ತಹಶೀಲ್ದಾರ್ ಗ್ರೇಡ್‌– 2 ಎನ್‌.ಎಂ ಮಠದ, ರಾಷ್ಟ್ರೀಯ ಬಸವದಳ ಅಧ್ಯಕ್ಷೆ ಶರಣೆ ಅನ್ನಪೂರ್ಣಾ ಹಿರಲಿಂಗನ್ನವರ ಉಪಸ್ಥಿತರಿದ್ದರು.
 
ಡಿ.ಎಚ್‌ ಖೊಂದುನಾಯಕ ಸ್ವಾಗತಿಸಿ ನಿರೂಪಿಸಿದರು. ಎಸ್‌.ಎಸ್ ಜೋಶಿ ವಂದಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.