ADVERTISEMENT

ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 5:05 IST
Last Updated 14 ನವೆಂಬರ್ 2017, 5:05 IST

ಬೆಳಗಾವಿ: ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸುವರ್ಣ ವಿಧಾನಸೌಧ ಸಮೀಪದ ಕೊಂಡಸಕೊಪ್ಪ ಗ್ರಾಮದ ಗುಡ್ಡದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಖಾನಾಪುರ ತಾಲ್ಲೂಕಿನ ನಂದಗಡದಲ್ಲಿರುವ ಸಂಗೊಳ್ಳಿರಾಯಣ್ಣ ಸಮಾಧಿ ಸ್ಥಳದಿಂದ ಪಾದಯಾತ್ರೆಯಲ್ಲಿ ಬಂದ ರೈತರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪೊಲೀಸರು ಬಿಡಲಿಲ್ಲ. ಇದರಿಂದಾಗಿ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ವೇದಿಕೆಯಲ್ಲಿ ಪ್ರತಿಭಟಿಸಿದರು.

ಬೆಳಗಾವಿಗೆ ಪ್ರತಿಭಟನೆಗೆ ಹೊರಟಿದ್ದ ರೈತರನ್ನು ಬೈಲಹೊಂಗಲ, ಯರಗಟ್ಟಿ, ರಾಮದುರ್ಗ, ರಾಯಬಾಗ, ಧಾರವಾಡದಲ್ಲಿ ತಡೆಯಲಾಯಿತು ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್‌ ಬಲ ಪ್ರಯೋಗಿಸಿ ಹೋರಾಟ ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ADVERTISEMENT

ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ‘ಶಾಸಕರು ಜನರ ಸೇವೆಗೆ ನೇಮಕಗೊಂಡವರು. ಆ ಬೃಹಸ್ಪತಿಗಳು ನಮ್ಮ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸುತ್ತಿಲ್ಲ. ಇದರಿಂದಾಗಿ ಬೀದಿಗಿಳಿದು ಹೋರಾ ಡುವ ಅನಿವಾರ್ಯ ಬಂದಿದೆ’ ಎಂದು ದೂರಿದರು.

ಸರ್ಕಾರವೇ ಸಾಲಗಾರ: ‘ಸರ್ಕಾರಗಳು ರೈತರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸದಿರುವುದರಿಂದ ಪರಿಸ್ಥಿತಿ ಬಿಗಡಾಯಿಸುತ್ತಿದೆ. ರೈತ ಸಾಲಗಾರನಲ್ಲ, ಸರ್ಕಾರವೇ ಸಾಲಗಾರ. ಹೀಗಾಗಿ, ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು. ಶೂನ್ಯ ಬಡ್ಡಿ ದರದಲ್ಲಿ ಹೊಸ ಸಾಲ ಒದಗಿಸಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ಟನ್‌ ಕಬ್ಬಿಗೆ ₹ 3,400 ದರ ನಿಗದಿಪಡಿಸಿ, ಕಾರ್ಖಾನೆಗಳಿಗೆ ನಿರ್ದೇಶನ ಕೊಡ ಬೇಕು’ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ, ‘ಕೋಡಿಹಳ್ಳಿ ಚಂದ್ರಶೇಖರ ಅವರಂತಹ 8–10 ಮಂದಿ ವಿಧಾನಸಭೆಗೆ ಬರುವವರೆಗೆ ರೈತರ ಸಮಸ್ಯೆಗಳು ಸಂಪೂರ್ಣ ಬಗೆಹರಿಯುವುದಿಲ್ಲ. ನಾನೂ ರೈತ. ಆದರೆ, ದಡ್ಡ ರೈತ. ಒಕ್ಕಲುತನವನ್ನೆಲ್ಲಾ ನಮ್ಮ ಕುಟುಂಬದವರು ಮಾಡುತ್ತಾರೆ’ ಎಂದು ಹೇಳಿದರು.

ಸಮಗ್ರ ನೀರಾವರಿ ಯೋಜನೆಯನ್ನು ಶ್ರೀಘ್ರವೇ ಜಾರಿಗೊಳಿಸಬೇಕು, ಎಸ್ಎಪಿ ಕಾನೂನು ಜಾರಿ ಮಾಡ ಬೇಕು, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಹಾಗೂ ಗುಣಮಟ್ಟದ ವಿದ್ಯುತ್‌ ಪೂರೈಸಬೇಕು, ನೇಕಾರರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಶಾಸಕರಾದ ವಡ್ನಾಳ್‌ ರಾಜಣ್ಣ, ಡಿ.ಜಿ. ಶಾಂತನಗೌಡ, ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಲಿಂಗರಾಜ ಪಾಟೀಲ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.