ADVERTISEMENT

‘ಸದಾಚಾರ, ಸದ್ಭಾವದಲ್ಲಿ ನಿಜ ಭಕ್ತಿ’

ಸುಕ್ಷೇತ್ರ ಸಾವಳಗಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 7:01 IST
Last Updated 22 ಏಪ್ರಿಲ್ 2017, 7:01 IST
ಗೋಕಾಕ: ‘ಸದ್ವಿಚಾರ, ಸದಾಚಾರ ಮತ್ತು ಸದ್ಭಾವದಲ್ಲಿ ನಿಜವಾದ ಭಕ್ತಿ ಇರುತ್ತದೆ' ಎಂದು ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿಧಿಯವರು ನುಡಿದರು. 
 
ತಾಲ್ಲೂಕಿನ ಸುಕ್ಷೇತ್ರ ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಮಠದ ಜಾತ್ರಾ ಮಹೋತ್ಸವ ಹಾಗೂ ಸಾಹಿತ್ಯ, ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುತ್ತಿದ್ದ ಶ್ರೀಗಳು, ಶಾಂತಿ, ನೆಮ್ಮದಿಯನ್ನು ಭಕ್ತಿ ಮಾರ್ಗದಲ್ಲಿ ಹುಡುಕಬೇಕು ಎಂದರು.
 
ಧರ್ಮ, ಜಾತಿ, ಮೇಲು ಕೀಳು ಎನ್ನದೆ, ಬಡವ, ಶ್ರೀಮಂತ ಎನ್ನದೆ ಎಲ್ಲದರಲ್ಲೂ ಸದ್ಭಾವನೆ ಇದ್ದರೆ ಸಮಾಜದ ಸ್ವಾಸ್ಥ್ಯವು ಸುಂದರವಾಗುವುದು. ನುಡಿದಂತೆ ನಡೆಯಬೇಕು, ಎಲ್ಲರನ್ನು ತನ್ನಂತೆ ಭಾವಿಸಬೇಕು ಎಂದರು.
 
2016ರ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪಡೆದ ಗದಗದ ವೀರೇಶ ಕಿತ್ತೂರ ಅವರನ್ನು ಸನ್ನಿಧಿ ಅವರು ಚಿನ್ನದ ಉಂಗುರದೊಂದಿಗೆ ಆಶೀರ್ವದಿಸಿದರು. 
 
ಕೊಂಕಣಕೊಪ್ಪದ ಶರಣೆ ಪದ್ಮಾವತಿ ಕೋಳೂರಮಠ ಆಧ್ಯಾತ್ಮಿಕ ಪ್ರವಚನ ನೀಡಿದರು. ಗವಾಯಿ ಗದುಗಿನ ವಿರೇಶ ಕಿತ್ತೂರ ಮತ್ತು ಸಿದ್ಧಲಿಂಗಯ್ಯ ಹಿರೇಮಠರ ತಬಲಾ ಸಾಥದೊಂದಿಗೆ ಸುಮಧುರ ಗಾಯನ ಮತ್ತು ರಂಜೀತಾ ಶಿಂಧೆ ಅವರ ಭರತನಾಟ್ಯ ರೂಪಕವು ಎಲ್ಲರ ಮನತಣಿಸಿತು.
 
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು. ಗೌರಿಕುಮಾರ ಮಗದುಮ್ ಸ್ವಾಗತಿಸಿದರು, ಸುಜಾತಾ ಬೆನಕಟ್ಟಿ, ರೋಹಿಣಿ ಬಂಗಾರಿ ನಿರೂಪಿಸಿದರು. ಯಶೋದಾ ಮರಿಬಸವಣ್ಣವರ ವಂದಿಸಿದರು. ಶರಣರ ವಚನಗಳು ಸಮಾಜದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ಗೌರಿಕುಮಾರ ಮಗದುಮ್ ಹೇಳಿದರು.
 
ವಚನ ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಅವರು, ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆಯು ಅಪೂರ್ವವಾಗಿದೆ ಎಂದರು.ಬಸವಾದಿಶರಣರು ಸೇರಿದಂತೆ ಅನೇಕ ಶರಣರು ತಮ್ಮ ವಚನಗಳ ಮೂಲಕ ನುಡಿದಂತೆ ನಡೆದರಲ್ಲದೆ ಸಮಾಜವನ್ನು ತಿದ್ದುವ ಕಾರ್ಯ ಮಾಡಿದರು.

12ನೇ ಶತಮಾನದ ವಚನಗಳು ಸರ್ವಕಾಲಿಕ ಮೌಲ್ಯವನ್ನು ಕಾಯ್ದುಕೊಂಡಿವೆ ಎಂದರು. ಅವರಗೋಳದ ಯಶೋಧಾ ಮರಬಸನ್ನವರ 'ಗುರುವಿನ ಮಹಿಮೆ' ಕುರಿತು ಉಪನ್ಯಾಸ ನೀಡಿದರು. 
 
ರಾಷ್ಟ್ರಮಟದ ಯೋಗಾಸನದಲ್ಲಿ ಗುರುಸಿಕೊಂಡಿರುವ ಬಳೋಬಾಳದ ಸರ್ಕಾರಿ ಪ್ರಾಥಮಿಕ ಶಾಲೆಯ ಹೆಣ್ಣು ಮಕ್ಕಳು ಪ್ರದರ್ಶಿಸಿದ ಯೋಗಾಸನವು ಸದ್ಭಕ್ತರನ್ನು ವಿಸ್ಮಯರನ್ನಾಗಿಸಿತು. ಕೊಂಕಣಕೊಪ್ಪದ ಶರಣೆ ಪದ್ಮಾವತಿ ಕೋಳೂರಮಠ ಆಧ್ಯಾತ್ಮಿಕ ಪ್ರವಚನ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.