ADVERTISEMENT

‘ಸಮಾಜಮುಖಿ ಸೇವೆಗೆ ಆದ್ಯತೆ ನೀಡಿ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 4:41 IST
Last Updated 31 ಡಿಸೆಂಬರ್ 2016, 4:41 IST

ಮೂಡಲಗಿ: ಗ್ರಾಮಗಳ ಅಭಿವೃದ್ಧಿಯೊಂದಿಗೆ ಜನ ಜೀವನ ಮಟ್ಟ ಉನ್ನತಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದಾದ್ಯಂತ ನಿರಂತರ ಸಮಾಜಮುಖಿ ಕಾರ್ಯ ಮಾಡುತ್ತಲಿದೆ ಎಂದು ಯೋಜನಾಧಿಕಾರಿ ಸುರೇಂದ್ರಕುಮಾರ್‌ ಹೇಳಿದರು.

ಸಮೀಪದ ಮಮದಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೇವಸ್ಥಾನ ಸಮಿತಿಗೆ ₹ 1 ಲಕ್ಷ ದೇಣಿಗೆಯ ಚೆಕ್‌ ವಿತರಿಸಿ ಮಾತನಾಡಿದರು.

ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿವರ್ತನೆ ಮತ್ತು ಸ್ವಾವಲಂಬನೆ ಬದುಕಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಧರ್ಮಸ್ಥಳ ಸಂಸ್ಥೆಯು ಸದಾ ಜನಪರವಾಗಿ ಬೆಳೆಯುತ್ತಿದೆ. ಜನರ ಆರ್ಥಿಕ ಪ್ರಗತಿಗಾಗಿ ವಿಶೇಷ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗದ ಬಡ ಜನರ ಬದುಕಿಗೆ ಆಸರೆಯಾಗಿದೆ. ಸಣ್ಣ ಪುಟ್ಟ ಕೆಲಸಗಳನ್ನು ಕೈಗೊಂಡು ಉಳಿತಾಯದ ಮೂಲಕ ಕುಟುಂಬದ ಆರ್ಥಿಕ ಭದ್ರತೆಗೆ ನೆರವಾಗುತ್ತಿದೆ. ಸಮಸ್ಯೆಗೆ ಸ್ಪಂದಿಸಿ ನಿವಾರಣೆ ಮಾಡುವ ವ್ಯವಸ್ಥೆ ಯಾಗಿದೆ ಎಂದು ತಿಳಿಸಿದರು.

ಸ್ವಸಹಾಯ ಸಂಘಗಳು ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆಯ ಮೊದಲ ಪಾಠವನ್ನು ಕಲಿಸಿಕೊಡುತ್ತದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ತಿಳಿಸುವ ಪ್ರಯತ್ನ ಇದಾಗಿದೆ. ಸಾಕ್ಷರತೆ, ದೇಶದ ಉನ್ನತಿಗೂ ನೆರವಾಗುತ್ತಿದೆ ಎಂದರು.

ಜಿಲ್ಲಾ ಜನ ಜಾಗೃತಿ ಅಧ್ಯಕ್ಷ ಸೋಮಶೇಖರ ಮಗದುಮ್‌ ಮಾತನಾಡಿ, ದೇವಸ್ಥಾನಗಳು ಜನರಲ್ಲಿ ಭಕ್ತಿಯೊಂದಿಗೆ ಶಾಂತಿ, ನೆಮ್ಮದಿ ತರುತ್ತವೆ ಎಂದರು.
ಜನರು ದೇವಸ್ಥಾನ ನಿರ್ಮಿಸಿದರೆ ಸಾಲದು; ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಧರ್ಮಸ್ಥಳ ಸಂಸ್ಥೆಯು ಎಲ್ಲ ಸಮಾಜ, ಧರ್ಮಗಳ ಸಂಗಮವಾಗಿದೆ ಎಂದರು.

ದೇವಸ್ಥಾನ ಸಮಿತಿ ಶ್ರೀಕಾಂತ ಮುಳಗುಂದ, ಪುಂಡಲೀಕ ಮಲ್ಲಾಡಿ, ಗೋಪಾಲ ಗೋಪಾಳಿ, ಮೇಲ್ವಿಚಾರಕ ಬಾಬುರಾವ ಗೋಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.