ADVERTISEMENT

ಸಮುದಾಯಗಳ ಬೇಡಿಕೆಗೆ ಕತ್ತಿ ಸ್ಪಂದನೆ

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಅನುದಾನ

ಎಂ.ಮಹೇಶ
Published 24 ಮಾರ್ಚ್ 2018, 8:41 IST
Last Updated 24 ಮಾರ್ಚ್ 2018, 8:41 IST
ಹುಕ್ಕೇರಿಯಲ್ಲಿ ನಿರ್ಮಿಸಿರುವ ಸಮುದಾಯ ಭವನ
ಹುಕ್ಕೇರಿಯಲ್ಲಿ ನಿರ್ಮಿಸಿರುವ ಸಮುದಾಯ ಭವನ   

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ಕ್ಷೇತ್ರದ ಶಾಸಕ ಬಿಜೆಪಿಯ ಉಮೇಶ್‌ ಕತ್ತಿ ಅವರು ತಮಗೆ ದೊರೆತ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಹೆಚ್ಚಿನ ಪಾಲನ್ನು ಭವನಗಳ ನಿರ್ಮಾಣಕ್ಕೆ ನೀಡಿ ವಿವಿಧ ಸಮುದಾಯದವರ ಮನಗೆಲ್ಲುವ ಪ್ರಯತ್ನ ಮಾಡಿದ್ದಾರೆ.

2013–14ನೇ ಸಾಲಿನಿಂದ 2017–18ರವರೆಗೆ ಶಿಫಾರಸು ಮಾಡಿರುವ ಕಾಮಗಾರಿಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸಗಳೇ ಜಾಸ್ತಿ ಪ್ರಮಾಣದಲ್ಲಿವೆ. ಸಮುದಾಯಕ್ಕೆ ಸೇರಿದ ಜಾಗಗಳು, ದೇವಸ್ಥಾನಗಳ ಬಳಿ ಹಾಗೂ ಮಂಗಲಮಂಟಪಗಳ ಬಳಿ ಭವನಗಳನ್ನು ನಿರ್ಮಿಸುವುದಕ್ಕೆ ಆರ್ಥಿಕ ನೆರವು ಕಲ್ಪಿಸಿದ್ದಾರೆ. ಜನರ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸಿದ್ದಾರೆ.

ಜಿಲ್ಲಾಡಳಿತ ಒದಗಿಸಿರುವ ಅಂಕಿ–ಅಂಶಗಳ ಪ್ರಕಾರ, ವಾರ್ಷಿಕವಾಗಿ ದೊರೆಯುವ ₹ 2 ಕೋಟಿಯಲ್ಲಿ ಭವನಗಳಿಗಾಗಿ ತಲಾ ಗರಿಷ್ಠ ₹ 15 ಲಕ್ಷದಿಂದ ಕನಿಷ್ಠ ₹ 2 ಲಕ್ಷದವರೆಗೆ ಅನುದಾನವನ್ನು ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ.

ADVERTISEMENT

ಉಳಿದಂತೆ ಅಲ್ಲಲ್ಲಿ ರಸ್ತೆಗಳು, ಶಾಲೆಗಳಿಗೆ ತರಗತಿ ಕೊಠಡಿಗಳು, ಜಿಮ್‌ಗಳ ನಿರ್ಮಾಣಕ್ಕೆ ಹಣ ಒದಗಿಸಿದ್ದಾರೆ. ಒಂದಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಹಲವು ಪ್ರಗತಿಯಲ್ಲಿವೆ.

ಕೆಲವು ಕೆಲಸಗಳಿಗೆ ಈಚೆಗಷ್ಟೇ ಅನುಮೋದನೆ ದೊರೆತಿದೆ.

ರಸ್ತೆ, ಬಸ್‌ ನಿಲ್ದಾಣ: 2013–14ನೇ ಸಾಲಿನಲ್ಲಿ ಸಮುದಾಯ ಭವನ, ರಸ್ತೆ, ಬಸ್‌ನಿಲ್ದಾಣಕ್ಕೆ ಶಿಫಾರಸು ಮಾಡಿದ್ದಾರೆ. ₹ 1.95 ಕೋಟಿ ಮೊತ್ತದ 71 ಕಾಮಗಾರಿಗಳಿಗೆ ಪತ್ರ ನೀಡಿದ್ದರು. ಇದರಲ್ಲಿ ₹ 1.88 ಕೋಟಿ ಮೊತ್ತದ ಕೆಲಸಕ್ಕೆ ಅನುಮೋದನೆ ದೊರೆತಿದೆ. ಹುಕ್ಕೇರಿ ಪಟ್ಟಣದ ವಿರಕ್ತಮಠದ ಪಕ್ಕ, ನಿಡಸೋಸಿ, ಬಡಕುಂದರಿ, ನಾಗನೂರ ಕೆ.ಎಸ್‌. ಮೊದಲಾದ ಗ್ರಾಮಗಳ ವಿವಿಧ ಸಮುದಾಯದವರ ಅನುಕೂಲಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದಾರೆ.

2014–15ರಲ್ಲಿ ಶಿಫಾರಸಾದ 58 ಕಾಮಗಾರಿಗಳಲ್ಲಿ ಕೆಲವಷ್ಟೇ ರಸ್ತೆ ಅಭಿವೃದ್ಧಿ ಕೆಲಸಗಳಿವೆ. ಇನ್ನುಳಿದವು ಸಮುದಾಯ ಭವನಗಳೇ! ₹ 2 ಕೋಟಿಗೆ ಶಿಫಾರಸು ಮಾಡಿದ್ದರು. ಇದರಲ್ಲಿ ₹ 1.75 ಕೋಟಿಗೆ ಅನುಮೋದನೆ ಸಿಕ್ಕಿದೆ.

2015–16ರಲ್ಲಿ ಸಮುದಾಯ ಭವನಗಳ ಜೊತೆ ಕೆಲವೆಡೆ ತರಗತಿ ಕೊಠಡಿಗಳನ್ನು ನಿರ್ಮಿಸಲು ಅನುದಾನ ಕೊಟ್ಟಿದ್ದಾರೆ. ಆ ಸಾಲಿನಲ್ಲಿ 46 ಕಾಮಗಾರಿಗಳಿಗೆ ಅಂದಾಜು ₹ 1.97 ಕೋಟಿ ಕೇಳಿದ್ದರು. ಈ ಪೈಕಿ ₹ 1.72 ಕೋಟಿ ದೊರೆತಿದೆ.

2016–17ರಲ್ಲಿ ಶಿಫಾರಸು ಮಾಡಿದ ಎಲ್ಲ 43 ಕಾಮಗಾರಿಗಳೂ ಹಲವು ಹಳ್ಳಿಗಳಲ್ಲಿ ಸಮುದಾಯ ಭವನ ನಿರ್ಮಾಣದ್ದೇ ಆಗಿವೆ. ₹ 1.37 ಕೋಟಿ ಕೇಳಿದ್ದರು.

ಇದರದಲ್ಲಿ ₹ 1 ಕೋಟಿಗಷ್ಟೇ ಅನುಮೋದನೆ ಸಿಕ್ಕಿದೆ. 2017–18ನೇ ಸಾಲಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಈ ಸಾಲಿನಲ್ಲಿ ₹ 1 ಕೋಟಿಗೂ ಹೆಚ್ಚು ಹಣ ಬಳಕೆಯಾಗದೇ ಉಳಿದಿದೆ.

ಜನರೇ ಕೇಳಿದ್ದರು: ಈ ಕುರಿತು ಪ್ರತಿಕ್ರಿಯಿಸಿದ ಉಮೇಶ್‌ ಕತ್ತಿ, ‘ಜನರು ವಿವಿಧೆಡೆ ಸಮುದಾಯ ಭವನಗಳನ್ನು ನಿರ್ಮಿಸಿಕೊಡುವಂತೆ ಕೇಳಿದ್ದರು. ಇದಕ್ಕೆ ಸ್ಪಂದಿಸಿ ಕಟ್ಟಿಸಿಕೊಟ್ಟಿದ್ದೇನೆ. ದೇವಸ್ಥಾನಗಳ ಪಕ್ಕವೇ ನಿರ್ಮಿಸಿರುವುದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ. ಇದಲ್ಲದೇ ಶಾಲಾ ಕೊಠಡಿಗಳು, ಕಾಂಪೌಂಡ್‌, ಬಸ್‌ ನಿಲ್ದಾಣ ಹಾಗೂ ಜಿಮ್‌ಗಳ ನಿರ್ಮಾಣಕ್ಕೆ ಅನುದಾನಕ್ಕೆ ಶಿಫಾರಸು ಮಾಡಿದ್ದೇನೆ’ ಎಂದು ಹೇಳಿದರು.

‘ಯಾವ ಸಾಲಿನ ಹಣವನ್ನೂ ಬಾಕಿ ಇಟ್ಟುಕೊಳ್ಳುವುದಕ್ಕೆ ಬರುವುದಿಲ್ಲ. ನಿಗದಿಯಂತೆ ₹ 2 ಕೋಟಿ ದೊರೆಯುತ್ತದೆ. ಆದರೆ, ಸಂಬಂಧಿಸಿದ ಇಲಾಖೆಯವರು ಕಾಮಗಾರಿ ನಿರ್ವಹಿಸಬೇಕು. ₹ 50 ಲಕ್ಷವಷ್ಟೇ ಬಾಕಿ ಉಳಿದಿದೆ. ಅದನ್ನೂ ಶೀಘ್ರವೇ ಬಳಸಲಾಗುವುದು’ ಎಂದು ತಿಳಿಸಿದರು.
**
ಜನರ ಆಶೋತ್ತರಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಎಲ್ಲ ಜನರಿಗೂ ಅನುಕೂಲವಾಗಲೆಂದು ಭವನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.
–ಉಮೇಶ್‌ ಕತ್ತಿ, ಶಾಸಕರು, ಹುಕ್ಕೇರಿ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.