ADVERTISEMENT

ಸಸ್ಯ ಸಂತೆ: 12 ಲಕ್ಷ ಸಸಿ ಮಾರಾಟದ ಗುರಿ

ತೋಟಗಾರಿಕೆ ಅಭಿಯಾನ: ಬೆಳಗಾವಿಯಲ್ಲಿ ಜೂನ್‌ 5ರಿಂದ 25ರವರೆಗೆ ಪ್ರದರ್ಶನ– ಮಾರಾಟ

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 7:17 IST
Last Updated 5 ಜೂನ್ 2018, 7:17 IST
ಸಸ್ಯ ಸಂತೆ: 12 ಲಕ್ಷ ಸಸಿ ಮಾರಾಟದ ಗುರಿ
ಸಸ್ಯ ಸಂತೆ: 12 ಲಕ್ಷ ಸಸಿ ಮಾರಾಟದ ಗುರಿ   

ಬೆಳಗಾವಿ: ವಿಶ್ವ ಪರಿಸರ ದಿನಾಚರಣೆ ನಿಮಿತ್ತ ತೋಟಗಾರಿಕೆ ಅಭಿಯಾನ ಹಾಗೂ ಸಸ್ಯ ಸಂತೆ ಕಾರ್ಯಕ್ರಮವನ್ನು ತೋಟಗಾರಿಕಾ ಇಲಾಖೆಯು ಜೂನ್‌ 5ರಿಂದ 25ರವರೆಗೆ ಇಲ್ಲಿನ ಕ್ಲಬ್‌ ರೋಡ್‌ನಲ್ಲಿರುವ ಹ್ಯೂಮ್‌ ಪಾರ್ಕ್‌ನಲ್ಲಿ ಆಯೋಜಿಸಿದೆ.

‘ಪರಿಸರ ಕಾಪಾಡುವುದರ ಜೊತೆಗೆ ರೈತರಿಗೆ ಆರ್ಥಿಕವಾಗಿ ಲಾಭ ತಂದುಕೊಡುವ ವಿವಿಧ ತೋಟಗಾರಿಕಾ ಬೆಳೆಗಳ ಸಸಿಗಳನ್ನು ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಸಸ್ಯ ಸಂತೆಯಲ್ಲಿ ಮಾರಾಟ ಮಾಡಲಾಗುವುದು. ಜಿಲ್ಲೆಯ ವಿವಿಧೆಡೆ ಇಲಾಖೆ ಹೊಂದಿರುವ ಸಸ್ಯಪಾಲನಾ ಕ್ಷೇತ್ರಗಳಲ್ಲಿ ಕಸಿ ಮಾಡಲಾದ ಸಸಿಗಳನ್ನು ಇಲ್ಲಿ ಮಾರಾಟ ಮಾಡಲಾಗುವುದು’ ಎಂದು ಬೆಂಗಳೂರಿನ ಲಾಲಾಬಾಗ್‌ ತೋಟಗಾರಿಕಾ ವಲಯದ ಹೆಚ್ಚುವರಿ ನಿರ್ದೇಶಕ ಡಾ.ಪ್ರಕಾಶ ಎಂ.ಸೊಬರದ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೂನ್‌ 5ರಂದು ಬೆಳಿಗ್ಗೆ 11.30ಕ್ಕೆ ಬೆಳಗಾವಿ ಉತ್ತರದ ಶಾಸಕ ಅನಿಲ ಬೆನಕೆ ಅವರು ತೋಟಗಾರಿಕಾ ಅಭಿಯಾನ ಹಾಗೂ ಸಸ್ಯ ಸಂತೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ADVERTISEMENT

21 ದಿನ ಮಾರಾಟ: ‘ಬೆಳಗಾವಿ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆ ಬೆಳೆಯಲು ಅತ್ಯುತ್ತಮ ವಾತಾವರಣವಿದೆ. ಇಲ್ಲಿನ ರೈತರು ಹಾಗೂ ಸಾರ್ವಜನಿಕರಿಂದಲೂ ಉತ್ತಮ ಬೇಡಿಕೆ ಇದೆ. ಕಳೆದ ವರ್ಷ ಸಸ್ಯ ಸಂತೆಯಲ್ಲಿ 10 ಲಕ್ಷ ಸಸಿಗಳು ಮಾರಾಟವಾಗಿದ್ದವು. ಈ ಸಲ 12 ಲಕ್ಷ ಸಸಿಗಳ ಮಾರಾಟವಾಗುವ ನಿರೀಕ್ಷೆಯಿದೆ’ ಎಂದು ಹೇಳಿದರು.

‘ಆರಂಭಿಕವಾಗಿ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಇನ್ನುಳಿದ ತಾಲ್ಲೂಕು ಕೇಂದ್ರಗಳಲ್ಲಿ ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ವಿವಿಧೆಡೆ ಇರುವ ಇಲಾಖೆಯ ಸಸ್ಯ ಪಾಲನಾ ಕೇತ್ರಗಳಿಂದಲೂ ರೈತರು ಸಸಿಗಳನ್ನು ಖರೀದಿಸಬಹುದು. ಹುಕ್ಕೇರಿ ತಾಲ್ಲೂಕಿನ ಹಿಡಕಲ್‌, ಗೋಕಾಕ ತಾಲ್ಲೂಕಿನ ಧೂಪದಾಳ, ಸವದತ್ತಿ ತಾಲ್ಲೂಕಿನ ಯಕ್ಕೇರಿ, ಉಗರಗೋಳ, ಕುರುವಿನಕೊಪ್ಪ, ಖಾನಾಪುರ ತಾಲ್ಲೂಕಿನ ಶೇಡಗಳ್ಳಿ, ಕಿತ್ತೂರು ತಾಲ್ಲೂಕಿನ ಕಿತ್ತೂರು ಹಾಗೂ ರಾಯಬಾಗ ತಾಲ್ಲೂಕಿನ ಮೇಖಳಿಯಲ್ಲಿ ಇಲಾಖೆಯ ಸಸ್ಯಪಾಲನಾ ಕ್ಷೇತ್ರಗಳಿವೆ’ ಎಂದು ಅವರು ಮಾಹಿತಿ ನೀಡಿದರು.

ಕೈತೋಟ, ತಾರಸಿ ತೋಟಗಳ ಬಗ್ಗೆಯೂ ಮಾಹಿತಿ: ‘ನಗರ ವಾಸಿಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಕೈತೋಟ ಹಾಗೂ ತಾರಸಿ ತೋಟಗಳ ಬಗ್ಗೆ ಇಲಾಖೆಯ ಅಧಿಕಾರಿಗಳು ಆಸಕ್ತಿಗೆ ಮಾಹಿತಿ ನೀಡಲಿದ್ದಾರೆ. ಇಲಾಖೆಯ ವಿವಿಧ ಸ್ಕೀಮ್‌ ಹಾಗೂ ಸಬ್ಸಿಡಿಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು. ಬೀಜ, ಸಸಿ ಹಾಗೂ ಜೈವಿಕ ಗೊಬ್ಬರವನ್ನು ಕೂಡ ಇಲ್ಲಿ ಮಾರಾಟ ಮಾಡಲಾಗುವುದು’ ಎಂದು ವಿವರಿಸಿದರು.

ವಿಶೇಷ ಲಘು ಪೋಷಕಾಂಶ: ‘ಮಾವು, ಬಾಳೆ ಹಾಗೂ ತರಕಾರಿಗಳಿಗೆ ಸಿದ್ಧಪಡಿಸಲಾಗಿರುವ ವಿಶೇಷ ಲಘುಪೋಷಕಾಂಶವನ್ನು ಇಲ್ಲಿ ಮಾರಾಟ ಮಾಡಲಾಗುವುದು. ಇದನ್ನು ಬಳಸಿದರೆ, ಹೆಚ್ಚು ಫಸಲು ಪಡೆಯಬಹುದು. ಪ್ರತಿ ಕೆ.ಜಿ.ಗೆ ಸರ್ಕಾರ ನಿಗದಿಪಡಿಸಿರುವ ಕೇವಲ ₹ 150 ದರದಲ್ಲಿ ನೀಡಲಾಗುವುದು. ಒಂದು ಕೆ.ಜಿ. ಎರೆಹುಳು ಗೊಬ್ಬರಕ್ಕೆ ಕೇವಲ ₹ 8 ದರ ನಿಗದಿಪಡಿಸಲಾಗಿದೆ’ ಎಂದು ಹೇಳಿದರು.

ಜಂಟಿ ನಿರ್ದೇಶಕ ನಾರಾಯಣಪುರ, ಉಪನಿರ್ದೇಶಕ ಇಬ್ರಾಹಿಂ ದೊಡಮನಿ, ಹಿರಿಯ ಸಹಾಯಕ ನಿರ್ದೇಶಕ ಕಿರಣಕುಮಾರ ಉಪಾಳೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.