ADVERTISEMENT

ಸಾಲ ಮನ್ನಾ, ನೀರು ಪೂರೈಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:40 IST
Last Updated 18 ಏಪ್ರಿಲ್ 2017, 6:40 IST

ಬೆಳಗಾವಿ: ರೈತರ ಸಾಲ ಮನ್ನಾ ಮಾಡಬೇಕು ಹಾಗೂ ದುಪದಾಳ ಜಲಾಶಯದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಕುಡಚಿ ಶಾಸಕ ಪಿ.ರಾಜೀವ್‌ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು.ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ಏರ್ಪಡಿಸಿ, ವಾಹನಗಳ ಸಂಚಾರ ಕೆಲಹೊತ್ತು ತಡೆದು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ರಾಜೀವ್‌, ‘ಇಡೀ ಜಗತ್ತಿಗೆ ಅನ್ನ ನೀಡುವ ರೈತರ ಸ್ಥಿತಿ ಅತ್ಯಂತ ಹೀನಾಯಕವಾಗಿದೆ. ಇಂತಹ ಸ್ಥಿತಿ ಉಂಟಾಗಲು ಇಲ್ಲಿಯವರೆಗೆ ಆಡಳಿತ ನಡೆಸಿದ ರಾಜಕೀಯ ಪಕ್ಷಗಳೇ ಕಾರಣ. ಚುನಾವಣೆ ವೇಳೆ ಪ್ರತಿಯೊಂದು ಪಕ್ಷಗಳು ರೈತರು, ಬಡವರು ಹಾಗೂ  ಶೋಷಿತರ ಬಗ್ಗೆ  ಪ್ರಸ್ತಾವನೆ ಮಾಡುತ್ತವೆ. ಆದರೆ, ಇವರ ಹಿತಕ್ಕಾಗಿ ಏನೂ ಮಾಡುತ್ತಿಲ್ಲ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಈಗ ಭೀಕರ ಬರಗಾಲ ಬಿದ್ದಿದ್ದು, ಜನ– ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ರಾಯಬಾಗ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನೀರಿನ ಕೊರತೆ ಕಾಡುತ್ತಿದೆ. ಈ ಕೂಡಲೇ ಕಾಲುವೆಗಳಲ್ಲಿ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.‘ಎಸ್‌ಎಪಿ ಕಾಯ್ದೆ ರಚನೆಯಾದಾಗ ಕಬ್ಬಿಗೆ ಉತ್ತಮ ಬೆಲೆ ಬರುತ್ತದೆ ಎಂದು ರೈತರು ನಂಬಿದ್ದರು. ಆದರೆ, ಇದು ಕಾರ್ಯರೂಪಕ್ಕೆ ಬರಲಿಲ್ಲ. ಹಲವಾರು ಸಕ್ಕರೆ ಕಾರ್ಖಾನೆಗಳು ರೈತರ ಬಿಲ್‌ ಬಾಕಿ ಉಳಿಸಿಕೊಂಡಿವೆ. ರೈತರ ಆರ್ಥಿಕ ಸ್ಥಿತಿ ತುಂಬಾ ಚಿಂತಾಜನಕವಾಗಿದೆ’ ಎಂದು ಹೇಳಿದರು.ಚೂನಪ್ಪ ಪೂಜೇರಿ, ರಾಘವೇಂದ್ರ ನಾಯಕ, ಅಶೋಕ ಯಮಕನಮರಡಿ, ಗಣಪತಿ ಈಳಗೇರಿ, ಶ್ರೀಶೈಲ ಅಂಗಡಿ, ಮಲ್ಲಣ್ಣಾ ರಾಮದುರ್ಗ ಮತ್ತು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.