ADVERTISEMENT

ತೆಲಸಂಗದಲ್ಲಿ ಉಪವಾಸ ಸತ್ಯಾಗ್ರಹ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 5:29 IST
Last Updated 1 ಜನವರಿ 2018, 5:29 IST

ತೆಲಸಂಗ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸದಿರುವುದನ್ನು ಖಂಡಿಸಿ ಅಥಣಿ-ವಿಜಯಪುರ ರಸ್ತೆಯ ತೆಲಸಂಗ ಬಳಿ ಡಾ.ಅಂಬೇಡ್ಕರ್ ವೃತ್ತದಲ್ಲಿ ಜನವರಿ 1 ರಿಂದ ಸರಣಿ ಉಪವಾಸ ಸತ್ಯಾಗ್ರಹ ನಡೆಸಲು ರೈತರು ನಿರ್ಧರಿಸಿದ್ದಾರೆ ಎಂದು ಯುವ ಮುಖಂಡ ಡಾ.ಎಸ್.ಐ. ಇಂಚಗೇರಿ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖರೀದಿ ಕೇಂದ್ರ ಆರಂಭಿಸಲು ಅನೇಕ ಸಲ ಮನವಿ ಮಾಡಿದರೂ ಸರ್ಕಾರ ರೈತರ ಬೇಡಿಕೆಗೆ ಸ್ಪಂಧಿಸಲಿಲ್ಲ, ರೈತರಿಗೆ ವೈಜ್ಞಾನಿಕ ದರವನ್ನೂ ಕೊಡಲಿಲ್ಲ, ಖರೀದಿ ಕೇಂದ್ರವನ್ನೂ ಆರಂಭಿಸಲಿಲ್ಲ, ಇದರಿಂದ ರೈತರು ಆಕ್ರೋಶಗೊಂಡು ಪ್ರತಿಭಟನೆಗೆ ಇಳಿಯಲಿದ್ದಾರೆ ಎಂದು ಹೇಳಿದರು.

ರೈತರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಧನ ಕೊಟ್ಟು ಪ್ರಚಾರ ಪಡೆಯುವ ಅಧಿಕಾರಿಗಳು, ರಾಜಕಾರಣಿಗಳು ಮೊದಲೇ ರೈತರಿಗೆ ಸ್ಪಂಧಿಸುವ ಮನಸು ಮಾಡಿಲ್ಲ ಎಂದು ಆರೋಪಿಸಿದರು.

ADVERTISEMENT

ತೊಗರಿ ರಾಶಿ ಕೆಲಸ ಒಂದೂವರೆ ತಿಂಗಳಿಂದ ಆರಂಭವಾಗಿದೆ. ತೊಗರಿ ಬೆಲೆ ಕುಸಿದಿದೆ. ದಲ್ಲಾಳಿಗಳಿಗೆ ಕೊಡಲು ದೂರದ ಮಾರುಕಟ್ಟೆಗೆ ಹೋಗಬೇಕಾಗಿದೆ. ಓಡಾಟ, ಕಮಿಷನ್‌ದಲ್ಲಿ ಕ್ಚಿಂಟಲ್‌ಗೆ ₹1500 ರಿಂದ 2000 ನಷ್ಟವಾಗುತ್ತಿದೆ. ಸರ್ಕಾರ ಬೆಂಬಲ ಬೆಲೆ ಗೋಷಿಸಿದ್ದರೂ ಜಿಲ್ಲಾಡಳಿತದ ಬೇಜವಾಬ್ದಾರಿಯಿಂದ ರೈತರಿಗೆ ದರ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಈಗಾಗಲೇ ಅನೇಕ ಸಲ ಮನವಿ ಸಲ್ಲಿಸಿದರೂ ಎಪಿಎಂಸಿ, ಜಿಲ್ಲಾಡಳಿತ ಸ್ಪಂಧಿಸಿಲ್ಲ, ಪ್ರತಿಭಟನೆಯೊಂದೇ ಈಗ ಉಳಿದಿರುವ ಮಾರ್ಗ ಎಂದು ಅವರು ಹೇಳಿದರು.

ಈ ಹೋರಾಟದಲ್ಲಿ ಅನಾಹುತಗಳು ನಡೆದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದ ಅವರು, ಅನಾಹುತ ನಡೆಯುವ ಮುನ್ನ ರೈತರಿಗೆ ನ್ಯಾಯ ದೊರಕಿಸಿಕೊಟ್ಟರೆ ಉಪವಾಸ ಸತ್ಯಾಗ್ರಹ ಕೈಬಿಡುತ್ತೇವೆ. ಇಲ್ಲವಾದರೆ ಎಲ್ಲದಕ್ಕೂ ರೈತರು ಸಿದ್ದರಿದ್ದಾರೆ ಅವರು ಹೇಳಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೊಳ, ರೈತರಾದ ಈಶ್ವರ ಉಂಡೋಡಿ, ಮಕಬೂಲ್ ಮುಲ್ಲಾ, ಅದಿಕ್‌ ಲಾಮಖಾನೆ, ಅಪ್ಪುಗೌಡ ಹೆಗಡ್ಯಾಳ, ರಾಜಕುಮಾರ ಹೊನಕಾಂಬಳೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.