ADVERTISEMENT

ಉದ್ಯೋಗ ಸಿಕ್ಕರೂ ಮಾಡುವ ತಾಕತ್ತಿಲ್ಲ

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 7:03 IST
Last Updated 17 ಜನವರಿ 2018, 7:03 IST
ಸ್ಕಿಲ್‌ ಆನ್‌ ವ್ಹೀಲ್ಸ್‌ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿದರು. ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ವಿವೇಕ ಸಾವೋಜಿ ಹಾಗೂ ಆರ್‌ಐಐಐಟಿ ಮುಖ್ಯಸ್ಥ ಎಸ್‌.ವಿ. ವೆಂಕಟೇಶ ಇದ್ದರು
ಸ್ಕಿಲ್‌ ಆನ್‌ ವ್ಹೀಲ್ಸ್‌ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿದರು. ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ವಿವೇಕ ಸಾವೋಜಿ ಹಾಗೂ ಆರ್‌ಐಐಐಟಿ ಮುಖ್ಯಸ್ಥ ಎಸ್‌.ವಿ. ವೆಂಕಟೇಶ ಇದ್ದರು   

ಬೆಳಗಾವಿ: ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಯುವಕರು ಪದವಿ ಪಡೆದು ಹೊರ ಬರುತ್ತಿದ್ದಾರೆ. ಇವರ ಬಳಿ ಪದವಿ ಸರ್ಟಿಫಿಕೇಟ್‌ ಇದೆಯೇ ಹೊರತು, ವೃತ್ತಿಗೆ ಬೇಕಾದ ಕೌಶಲವಿಲ್ಲ. ಹೀಗಾಗಿ ಇವರಿಗೆಲ್ಲ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಉದ್ಯೋಗ ನೀಡಿದರೂ ಮಾಡುವ ತಾಕತ್ತು ಇವರ ಬಳಿ ಇಲ್ಲ ಎಂದು ಕೇಂದ್ರ ಕೌಶಲ ಮತ್ತು ಉದ್ಯಮಶೀಲತಾ ಸಚಿವ ಅನಂತಕುಮಾರ ಹೆಗಡೆ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಕೆಎಲ್‌ಇ ಜೀರಗೆ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಸ್ಕಿಲ್‌ ಇಂಡಿಯಾ ಅಡಿ ಆಯೋಜಿಸಲಾದ ‘ಸ್ಕಿಲ್‌ ಆನ್‌ ವ್ಹೀಲ್ಸ್‌’ ಕೌಶಲ ಅಭಿವೃದ್ಧಿ ಕುರಿತು ರಾಷ್ಟ್ರೀಯ ಯುವ ಸಮ್ಮೇಳನಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಎಂಜಿನಿಯರಿಂಗ್‌ ಸೇರಿದಂತೆ, ವಿವಿಧ ಪದವಿಗಳನ್ನು ಪಡೆದು ಪ್ರತಿವರ್ಷ ಯುವಕರು ಹೊರಬರುತ್ತಿದ್ದಾರೆ. ಒಂದೆಡೆ ಇವರಿಗೆ ಉದ್ಯೋಗಾವಕಾಶಗಳು ದೊರಕುತ್ತಿಲ್ಲ. ಇನ್ನೊಂದೆಡೆ, ಉದ್ಯಮಿಗಳು ತಮಗೆ ಕೌಶಲಯುಕ್ತ ಉದ್ಯೋಗಿಗಳು ದೊರಕುತ್ತಿಲ್ಲವೆಂದು ಅಳಲು ತೊಡಿಕೊಳ್ಳುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಒದಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಸ್ಕಿಲ್‌ ಇಂಡಿಯಾ ಹಮ್ಮಿಕೊಂಡಿದೆ. ವೃತ್ತಿಗಳ ಕೌಶಲಗಳನ್ನು ಹೇಳಿಕೊಡುವ ಉದ್ದೇಶ ಇದರದ್ದಾಗಿದೆ ಎಂದು ಹೇಳಿದರು.

ADVERTISEMENT

ರಕ್ತ ಚೆಲ್ಲದ ಹೊರತು ಯುದ್ಧ ಗೆಲ್ಲಲು ಸಾಧ್ಯವಿಲ್ಲ. ಬೆವರು ಹರಿಸದ ಹೊರತು ಬದುಕು ರೂಪಿಸಲು ಸಾಧ್ಯವಿಲ್ಲ. ಯಶಸ್ಸಿಗೆ ಯಾವುದೇ ಸುಲಭ ದಾರಿಯಿಲ್ಲ. ಶ್ರಮವೇ ಯಶಸ್ಸಿನ ಮೆಟ್ಟಿಲು. ಯಾರು ಶ್ರಮಪಡಲು ಸಿದ್ಧರಿದ್ದಾರೋ, ಯಾರು ಕನಸುಗಳಿಗೆ ಸಾಕಾರ ರೂಪ ಕೊಡಲು ಬಯಸುತ್ತಾರೋ ಅವರಿಗಾಗಿ ಸ್ಕಿಲ್‌ ಇಂಡಿಯಾ ಕಾರ್ಯಕ್ರಮ ರೂಪಿಸಲಾಗಿದೆ. ಅವರು ಬಯಸುವ ವೃತ್ತಿಯ ಬಗ್ಗೆ ತರಬೇತಿ ನೀಡುತ್ತೇವೆ. ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ಸಹಾಯ ಕೂಡ ಮಾಡುತ್ತೇವೆ ಎಂದು ಎಂದರು.

ಮಕ್ಕಳಿಗೆ ತಂದೆ ತಾಯಿಗಳೇ ಮಾದರಿಯಾಗಬೇಕು. ಅಂತಹ ನೈತಿಕತೆಯನ್ನು ಅವರು ಉಳಿಸಿಕೊಳ್ಳಬೇಕು. ಮಕ್ಕಳ ಅಭಿವೃದ್ಧಿಗಾಗಿ ಬದುಕನ್ನು ಧಾರೆ ಎರೆದಾಗ ಮಾತ್ರ ಇದು ಸಾಧ್ಯವಾಗುತ್ತದೆ ಎಂದರು. ಜ್ಞಾನಾಧಾರಿತ ಆರ್ಥಿಕತೆ

ಇದುವರೆಗೆ ದುಡಿಮೆ ಆಧಾರಿತ ಆರ್ಥಿಕತೆಯನ್ನು ದೇಶ ಹೊಂದಿತ್ತು. ಇದರಿಂದ ಉದ್ಯೋಗ ಸೃಷ್ಟಿಸಲು ಸಾಧ್ಯವಾಗುತ್ತದೆ. ಆದರೆ, ಅಮೆರಿಕ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ. ಜ್ಞಾನಾಧರಿತ ಆರ್ಥಿಕತೆಯನ್ನು ರೂಢಿಸಿಕೊಂಡಾಗ ಮಾತ್ರ ನಾವು ಕೂಡ ಅಮೆರಿಕದಂತೆ ಅಭಿವೃದ್ಧಿ ಹೊಂದಬಹುದು ಎಂದು ಹೋಲಿಸಿದರು.

ದೃಢ ನಿಶ್ಚಯದೊಂದಿಗೆ ಮುನ್ನಡೆಯಿರಿ. ನಿಮ್ಮ ಗುರಿಯನ್ನು ನೀವೇ ನಿರ್ಧರಿಸಿಕೊಳ್ಳಿ. ಆ ಗುರಿಯನ್ನು ತಲುಪುವವರೆಗೆ ಸಾಗಿರಿ. ಆ ಬ್ರಹ್ಮ ಬಂದರೂ ನಿಲ್ಲಬೇಡಿ. ಬದುಕು ನಮ್ಮ ಪರಿಶ್ರಮದ ಮೇಲೆ ರೂಪುಗೊಳ್ಳುತ್ತದೆ. ಪರಿಶ್ರಮ ಪಡದೆ ಬದುಕು ರೂಪುಗೊಳ್ಳಬೇಕಾದರೆ ಲಾಟರಿ ಹೊಡೆಯಬೇಕಷ್ಟೇ. ಬದುಕು ಲಾಟರಿ ಟಿಕೆಟ್‌ನಂತಾಗಬಾರದು ಎಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು.

ಜ್ಞಾನಾಧಾರಿತ ಆರ್ಥಿಕತೆ:

ಇದುವರೆಗೆ ದುಡಿಮೆ ಆಧಾರಿತ ಆರ್ಥಿಕತೆಯನ್ನು ದೇಶ ಹೊಂದಿತ್ತು. ಇದರಿಂದ ಉದ್ಯೋಗ ಸೃಷ್ಟಿಸಲು ಸಾಧ್ಯವಾಗುತ್ತದೆ. ಆದರೆ, ಅಮೆರಿಕ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ. ಜ್ಞಾನಾಧರಿತ ಆರ್ಥಿಕತೆಯನ್ನು ರೂಢಿಸಿಕೊಂಡಾಗ ಮಾತ್ರ ನಾವು ಕೂಡ ಅಮೆರಿಕದಂತೆ ಅಭಿವೃದ್ಧಿ ಹೊಂದಬಹುದು ಎಂದು ಹೋಲಿಸಿದರು.

ದೃಢ ನಿಶ್ಚಯದೊಂದಿಗೆ ಮುನ್ನಡೆಯಿರಿ. ನಿಮ್ಮ ಗುರಿಯನ್ನು ನೀವೇ ನಿರ್ಧರಿಸಿಕೊಳ್ಳಿ. ಆ ಗುರಿಯನ್ನು ತಲುಪುವವರೆಗೆ ಸಾಗಿರಿ. ಆ ಬ್ರಹ್ಮ ಬಂದರೂ ನಿಲ್ಲಬೇಡಿ. ಬದುಕು ನಮ್ಮ ಪರಿಶ್ರಮದ ಮೇಲೆ ರೂಪುಗೊಳ್ಳುತ್ತದೆ. ಪರಿಶ್ರಮಪಡದೆ ಬದುಕು ರೂಪುಗೊಳ್ಳಬೇಕಾದರೆ ಲಾಟರಿ ಹೊಡೆಯಬೇಕಷ್ಟೇ. ಬದುಕು ಲಾಟರಿ ಟಿಕೆಟ್‌ನಂತಾಗಬಾರದು ಎಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.