ADVERTISEMENT

ಸ್ಥಳೀಯ ಸಂಸ್ಥೆಗಳ ಚುನಾವಣೆ: ಅಭ್ಯರ್ಥಿಗಳ ಹಣೆಬರಹ; ತೊಟ್ಟಿಲು ತೂಗುವ ಕೈಯಲ್ಲಿ!

ಶ್ರೀಕಾಂತ ಕಲ್ಲಮ್ಮನವರ
Published 23 ಆಗಸ್ಟ್ 2018, 19:30 IST
Last Updated 23 ಆಗಸ್ಟ್ 2018, 19:30 IST
   

ಬೆಳಗಾವಿ: ಚುನಾವಣೆಯ ದಿನಾಂಕ ಸಮೀಪಿಸುತ್ತಿದ್ದಂತೆ ಜಿಲ್ಲೆಯ 14 ಸ್ಥಳೀಯ ಸಂಸ್ಥೆಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಆರಂಭಿಸಿದ್ದಾರೆ. ಮುಖ್ಯವಾಗಿ ಮಹಿಳಾ ಮತದಾರರನ್ನು ಸೆಳೆಯಲು ಹೆಚ್ಚಿನ ಕಸರತ್ತು ಮಾಡುತ್ತಿದ್ದಾರೆ. ಪುರುಷ ಮತದಾರರಿಗೆ ಹೋಲಿಸಿದರೆ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ.

ಪ್ರಸ್ತುತ ಚುನಾವಣೆಯಲ್ಲಿ 2,08,968 ಮಹಿಳಾ ಮತದಾರರಿದ್ದಾರೆ. ಪುರುಷರ ಸಂಖ್ಯೆ 2,05,851 ರಷ್ಟಿದೆ. ಒಟ್ಟು 4,14,819 ಮತದಾರರು ಇದ್ದಾರೆ. ಐದು ವರ್ಷಗಳ ಹಿಂದೆ 2013ರಲ್ಲಿ ಇದೇ ಸಂಸ್ಥೆಗಳಿಗೆ ಚುನಾವಣೆ ನಡೆದಾಗ ಮಹಿಳೆಯರ ಸಂಖ್ಯೆ ಕಡಿಮೆಯಿತ್ತು. ಈಗ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದಲ್ಲದೇ, ಪುರುಷ ಮತದಾರರನ್ನು ಮೀರಿ ಬೆಳೆದಿದ್ದಾರೆ.

ಹೀಗಾಗಿ ಪಕ್ಷೇತರರಾಗಲಿ, ಪಕ್ಷದ ಅಭ್ಯರ್ಥಿಗಳಾಗಲಿ ಅಥವಾ ಪ್ರಮುಖ ರಾಜಕೀಯ ನೇತಾರರ ಬೆಂಬಲಿಗರಾಗಲಿ ಮಹಿಳಾ ಮತದಾರರನ್ನು ನೆಚ್ಚಿಕೊಂಡೇ ಚುನಾವಣೆ ಎದುರಿಸಬೇಕಾದ ಸ್ಥಿತಿ ಎದುರಾಗಿದೆ. ಸೋಲು– ಗೆಲುವು ನಿರ್ಧರಿಸುವ ಶಕ್ತಿ ಈಗ ತೊಟ್ಟಿಲು ತೂಗಿದ ಕೈಗಳಿಗೆ ಬಂದಿದೆ.

ADVERTISEMENT

ಶೇ 20ರಷ್ಟು ಹೆಚ್ಚಳ:2013ರ ಚುನಾವಣೆಯಲ್ಲಿ 1,61,780 ಪುರುಷ ಹಾಗೂ 1,56,072 ಮಹಿಳಾ ಮತದಾರರು ಇದ್ದರು. ಐದು ವರ್ಷಗಳ ನಂತರ 44,071 ಪುರುಷ ಮತದಾರರು ಹೆಚ್ಚಾಗಿದ್ದರೆ, 52,896 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ. ಒಟ್ಟು ಮತದಾರರ ಸಂಖ್ಯೆಯಲ್ಲಿ 96,967 ಏರಿಕೆಯಾಗಿದ್ದರೆ, ಪುರುಷರಿಗಿಂತ ಶೇ 20ರಷ್ಟು ಮಹಿಳೆಯರು ಹೆಚ್ಚಾಗಿದ್ದಾರೆ ಎನ್ನುವುದು ಗಮನಾರ್ಹ.

ಎಲ್ಲೆಲ್ಲಿ ಕಡಿಮೆ;
ಜಿಲ್ಲೆಯ 14 ಸ್ಥಳೀಯ ಸಂಸ್ಥೆಗಳ ಪೈಕಿ ಚಿಕ್ಕೋಡಿ, ಕುಡಚಿ ಪುರಸಭೆ ಹಾಗೂ ರಾಯಬಾಗ ಪಟ್ಟಣ ಪಂಚಾಯ್ತಿಯಲ್ಲಿ ಮಾತ್ರ ಮಹಿಳಾ ಮತದಾರರ ಸಂಖ್ಯೆ ಕಡಿಮೆ ಇದೆ. ಚಿಕ್ಕೋಡಿಯಲ್ಲಿ 16,600 ಪುರುಷರಿದ್ದರೆ, 16,486 ಮಹಿಳೆಯರಿದ್ದಾರೆ. ಕುಡಚಿಯಲ್ಲಿ 10,758 ಪುರುಷರಿದ್ದರೆ, 10,014 ಮಹಿಳೆಯರಿದ್ದಾರೆ. ರಾಯಬಾಗದಲ್ಲಿ 9,021 ಪುರುಷರಿದ್ದರೆ, 8354 ಮಹಿಳೆಯರಿದ್ದಾರೆ.

ವಾರ್ಡ್‌ಗಳ ಸಂಖ್ಯೆಯೂ ಏರಿಕೆ:ಜನಸಂಖ್ಯೆ ಆಧಾರದ ಮೇಲೆ ವಾರ್ಡ್‌ಗಳನ್ನು ಪುನರ್‌ವಿಂಗಡಿಸಲಾಗಿದೆ ಹಾಗೂ ಕೆಲವು ಕಡೆ ವಾರ್ಡ್‌ಗಳನ್ನು ಹೆಚ್ಚಿಸಲಾಗಿದೆ. 2013ರ ಚುನಾವಣೆಯಲ್ಲಿ 311 ವಾರ್ಡ್‌ಗಳಿದ್ದರೆ, ಪ್ರಸ್ತುತ ಚುನಾವಣೆಯಲ್ಲಿ 343 ವಾರ್ಡ್‌ಗಳಾಗಿವೆ. 32 ವಾರ್ಡ್‌ಗಳು ಹೆಚ್ಚಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.