ADVERTISEMENT

ಅಂಜದೆ ಕಾರ್ಯಾಚರಣೆ ನಡೆಸಿದ ಅರುಣ್‌

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2016, 19:38 IST
Last Updated 11 ಫೆಬ್ರುವರಿ 2016, 19:38 IST
ಡಾ.ಅರುಣ್‌
ಡಾ.ಅರುಣ್‌   

ಬೆಂಗಳೂರು: ಚಿರತೆಯನ್ನು ಹಿಡಿಯಲು ಪ್ರಮುಖ ಪಾತ್ರ ವಹಿಸಿದವರು ಡಾ. ಅರುಣ್‌ ಅವರು. ಸಂಜಯ್‌ ಗುಬ್ಬಿ ಅವರ ಮೇಲೆ ಚಿರತೆ ದಾಳಿ ಮಾಡಿದ ಸಂದರ್ಭದಲ್ಲಿ ಕೂಡಲೇ ಸಹಾಯಕ್ಕೆ ಧಾವಿಸಿದವರು ಅರುಣ್‌. ಪ್ರಾಣವನ್ನೂ ಲೆಕ್ಕಿಸದೆ ಅವರು ಕಾರ್ಯಾಚರಣೆ ನಡೆಸಿದರು. ಚಿರತೆಯನ್ನು ಬೆನ್ನಟ್ಟಿ ಅರಿವಳಿಕೆ ಇಂಜೆಕ್ಷನ್‌ ಹೊಡೆದಿದ್ದರು.

ಶಾಲೆಯಲ್ಲಿ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಇವರ ಸಹಾಯ ಪಡೆದಿದ್ದರು. ಬನ್ನೇರುಘಟ್ಟ ಜೈವಿಕ ಉದ್ಯಾನದ ವೈಲ್ಡ್ ಲೈಫ್‌ ಎಸ್‌ಒಎಸ್‌ ಸಂಸ್ಥೆಯಲ್ಲಿ 13  ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

‘ಶಾಲೆಗೆ ಹೋಗುವ ವೇಳೆಗೆ ಸಾವಿರಾರು ಜನರು ಜಮಾಯಿಸಿದ್ದರು. ನಾವೆಲ್ಲ ಚಿರತೆ ಸೆರೆ ಹಿಡಿಯಲು ಕಾರ್ಯತಂತ್ರ ರೂಪಿಸಿದೆವು. ಯಾವುದೇ ಅನಾಹುತ ನಡೆಯದಂತೆ ಚಿರತೆಯನ್ನು ಸೆರೆ ಹಿಡಿಯಬೇಕು ಎಂಬುದು ನಮ್ಮ ಆಶಯವಾಗಿತ್ತು ಎಂದು ಅರುಣ್‌ ಹೇಳಿದರು.

‘ಅದೇ ಹೊತ್ತಿಗೆ ಚಿರತೆ ಹೊರಗೆ ಬಂತು. ಹಿಡಿಯಲು ಹಾಕಿದ್ದ ಬಲೆಯನ್ನೂ ದಾಟಿಕೊಂಡು ಚಿರತೆ ನನ್ನ ಕಡೆಗೆ ಬಂದು ಬಿಟ್ಟಿತು. ನನ್ನ ಮೇಲೆ ಎರಗಿತು. ಗಾಬರಿಯಿಂದ ಅರಿವಳಿಕೆ ಗನ್‌ ಬಿಸಾಡಿದೆ. ಚಿರತೆಯನ್ನು ಬಲವಾಗಿ ದೂಡಿದೆ. ಅದು ಓಡಿ ಹೋಯಿತು’ ಎಂದು ನೆನಪಿಸಿಕೊಂಡರು.

‘ದಾರಿಯಲ್ಲಿ ಸಿಕ್ಕ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೂ ದಾಳಿ ಮಾಡಿತು.  ಬಳಿಕ ಗುಬ್ಬಿ ಅವರ ಮೇಲೆ ಎರಗಿತು. ತಕ್ಷಣ ಗನ್‌ ಎತ್ತಿಕೊಂಡು ಬೆನ್ನಟ್ಟಿ ಹೋದೆ. ಅರಿವಳಿಕೆ ಮದ್ದು ಹಾರಿಸಿದೆ. ಅದು ಚಿರತೆಯ ಹಿಂಬದಿಗೆ ಬಡಿಯಿತು’ ಎಂದರು.

‘ಇದರಿಂದ ಮತ್ತಷ್ಟು ಉಗ್ರರೂಪ ತಾಳಿತು. ಮತ್ತೆ ನನ್ನ ಮೇಲೆ ದಾಳಿ ಮಾಡಲು ಬಂತು. ನನ್ನ ಎದುರು ತಂತಿಯ  ಜಾಲರಿ ಇತ್ತು. ನನ್ನ ಮೇಲೆ ದಾಳಿ ಮಾಡುವ ಪ್ರಯತ್ನ ವಿಫಲವಾಯಿತು. ನನ್ನ ಬಿಟ್ಟ ಚಿರತೆ ಸಮೀಪದಲ್ಲೇ ಇದ್ದ ಗುಬ್ಬಿ ಅವರ ಮೇಲೆ ಮನಬಂದಂತೆ ದಾಳಿ ಮಾಡಿತು. ನಾನು ಹತ್ತಿರದಲ್ಲೇ ಇದ್ದರೂ  ಗನ್‌ ಬಳಸುವ ಸ್ಥಿತಿಯಲ್ಲಿ ಇರಲಿಲ್ಲ. ಅದು ಗುಬ್ಬಿ ಅವರಿಗೆ ತಾಗುವ ಅಪಾಯ ಇತ್ತು’ ಎಂದು ನೆನಪಿಸಿಕೊಂಡರು.

‘ನಾನು ಮೊದಲೇ ಹೊಡೆದಿದ್ದ ಇಂಜೆಕ್ಷನ್‌ ಕೆಲಸ ಮಾಡಲು ಆರಂಭಿಸಿತು. ಮಂಪರು ಆವರಿಸಿಕೊಳ್ಳಲು ಆರಂಭಿಸಿತು. ಅದೇ ವೇಳೆ ಗುಬ್ಬಿ ಅವರು ಬೈನಾಕ್ಯುಲರ್‌ನಿಂದ ಹೊಡೆದರು. ಅವರನ್ನು ಬಿಟ್ಟಿತು. ಸ್ವಲ್ಪ ದೂರ ಹೋದ ಮೇಲೆ ಇನ್ನೊಂದು ಇಂಜೆಕ್ಷನ್‌ ಹೊಡೆದೆ. ಚಿರತೆ ನಮ್ಮ ಬಲೆಗೆ ಬಿದ್ದಿತು’ ಎಂದು ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.