ADVERTISEMENT

ಅಗರ ಕೆರೆ ಬಳಿ ಬಾಂಗ್ಲಾ ಹಂತಕರ ಸೆರೆ

ಆರೋಪಿಗಳಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟವನ ಪತ್ತೆಗೆ ಶೋಧ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:43 IST
Last Updated 22 ಜೂನ್ 2017, 19:43 IST
ಕೊಲೆ ಪ್ರಕರಣದ ಆರೋಪಿಗಳು
ಕೊಲೆ ಪ್ರಕರಣದ ಆರೋಪಿಗಳು   

ಬೆಂಗಳೂರು: ಸ್ನೇಹಿತನನ್ನು ಕೊಂದು 11 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಬಾಂಗ್ಲಾದೇಶದ ನಾಲ್ವರು ಆರೋಪಿಗಳು ಬುಧವಾರ ರಾತ್ರಿ ಅಗರ ಕೆರೆ ಬಳಿ ಹೆಣ್ಣೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

‘ಒಬೀಂವುಲ್ಲಾ (26), ಮೊಯಿನ್ ಖಾನ್ (26), ರಕೀಂವುಲ್ಲಾ ಅಲಿಯಾಸ್ ರಾಕೀಬ್ (33) ಹಾಗೂ ಮಹಮದ್ ಕಿಸ್ಲು (35) ಎಂಬುವರನ್ನು ಬಂಧಿಸಿದ್ದೇವೆ. ನಾಲ್ಕು ವರ್ಷಗಳಿಂದ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪಿಗಳಿಗೆ ಆರ್‌.ಟಿ.ನಗರದ ಜನಾರ್ದನರೆಡ್ಡಿ ಎಂಬಾತ ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದ. ಆತನ ಪತ್ತೆಗೆ ಶೋಧ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ರಾತ್ರಿ 11 ಗಂಟೆ ಸುಮಾರಿಗೆ ಈ ನಾಲ್ವರು ಅಗರ ಕೆರೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಗಸ್ತು ಪೊಲೀಸರು ವಿಚಾರಣೆ ನಡೆಸಿದಾಗ ತೊದಲಿಕೆ ಉತ್ತರ ನೀಡಿದರು. ಅವರ ಬ್ಯಾಗ್ ಪರಿಶೀಲಿಸಿದಾಗ ಮೂರು ಚಾಕುಗಳು ಹಾಗೂ ಪ್ರಕರಣವೊಂದಕ್ಕೆ ಸಂಬಂಧಿಸಿದ ಜಾಮೀನಿನ ಪ್ರತಿ ಸಿಕ್ಕಿತ್ತು. ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ 2016ರ ಜುಲೈ 11ರಂದು ನೆಲಮಂಗಲದ ವಾಜರಹಳ್ಳಿಯಲ್ಲಿ ಸ್ನೇಹಿತ ಇಮ್ರುಲ್‌ ಚೌಧರಿಯನ್ನು ಕೊಲೆಗೈದಿದ್ದಾಗಿ ತಪ್ಪೊಪ್ಪಿಕೊಂಡರು’ಎಂದು ಮಾಹಿತಿ ನೀಡಿದರು.

ADVERTISEMENT

ಪತ್ನಿ ಇನ್ನೂ ನಾಪತ್ತೆ: ಪಶ್ಚಿಮ ಬಂಗಾಳದ ಇಮ್ರುಲ್, ಕೂಲಿ ಕೆಲಸ ಮಾಡಿಕೊಂಡು ಬೊಮ್ಮನಹಳ್ಳಿ ನೆಲೆಸಿದ್ದರು.  ಆ ನಂತರ ಚಂಪಾ ಎಂಬುವರನ್ನು ವಿವಾಹವಾಗಿ, ವಾಜರಹಳ್ಳಿಗೆ ವಾಸ್ತವ್ಯ ಬದಲಿಸಿದ್ದರು. ಅಲ್ಲಿ ಚಂಪಾಗೆ ಒಬೀಂವುಲ್ಲಾನ  ಪರಿಚಯವಾಗಿತ್ತು.

ಒಬೀಂವುಲ್ಲಾನ ಗ್ಯಾಂಗ್, ಬಾಂಗ್ಲಾದೇಶದಿಂದ ಯುವತಿಯರನ್ನು ನಗರಕ್ಕೆ ಕರೆದುಕೊಂಡು ಬಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿತ್ತು. ಕ್ರಮೇಣ ದಂಪತಿ ಕೂಡ ಆ ಗ್ಯಾಂಗ್ ಸೇರಿಕೊಂಡಿದ್ದರು.

ಕೆಲ ದಿನಗಳ ಬಳಿಕ ಇಮ್ರುಲ್–ಚಂಪಾ ದಾಂಪತ್ಯದಲ್ಲಿ ಒಡಕು ಉಂಟಾಗಿತ್ತು. ಪತ್ನಿಯ ಶೀಲ ಶಂಕಿಸಿ ನಿತ್ಯ ಅವರು ಜಗಳ ಮಾಡುತ್ತಿದ್ದರು. ಹೀಗಾಗಿ ಪತಿಯ ಹತ್ಯೆಗೆ ಸಂಚು ರೂಪಿಸಿದ್ದ ಚಂಪಾ, ಆ ಕೆಲಸಕ್ಕೆ ಒಬೀಂವುಲ್ಲಾನ ನೆರವು ಕೋರಿದ್ದರು. ಅಂತೆಯೇ 2016ರ ಜುಲೈ 11ರಂದು ಔತಣಕೂಟದ ನೆಪದಲ್ಲಿ ಇಮ್ರುಲ್‌ನನ್ನು ಮನೆಗೆ ಕರೆಸಿಕೊಂಡಿದ್ದ ಒಬೀಂವುಲ್ಲಾ, ಸಹಚರರ ಜತೆ ಸೇರಿ ಉಸಿರುಗಟ್ಟಿಸಿ ಅವರನ್ನು ಹತ್ಯೆಗೈದಿದ್ದ.

ಮೂವರು ಸಿಕ್ಕಿರಲಿಲ್ಲ: ಈ ಸಂಬಂಧ ನೆಲಮಂಗಲ ಪೊಲೀಸರು ಒಬೀಂವುಲ್ಲಾನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಉಳಿದ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೇ ಜನವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಒಬೀಂವುಲ್ಲಾ, ಸಹಚರರ ಜತೆಗೂಡಿ ದರೋಡೆ ಕೃತ್ಯಕ್ಕೆ ಇಳಿದಿದ್ದ ಎಂದು ಪೊಲೀಸರು ಹೇಳಿದ್ದಾರೆ.

**

ಬಾಂಗ್ಲಾದಲ್ಲೂ ಕೊಲೆ
‘ವೇಶ್ಯಾವಾಟಿಕೆಯಿಂದ ಸಂಪಾದಿಸಿದ ಹಣವನ್ನು ಹಂಚಿಕೊಳ್ಳುವ ವಿಚಾರವಾಗಿ ಇಮ್ರುಲ್‌ ಜತೆ ಜಗಳವಾಡಿಕೊಂಡಿದ್ದೆವು. ಆ ಕೋಪದಲ್ಲಿರುವಾಗಲೇ ಚಂಪಾ ಕೂಡ ಪತಿಯನ್ನು ಕೊಲ್ಲಲು ನೆರವು ಕೋರಿದ್ದಳು. ಹೀಗಾಗಿ, ಸ್ನೇಹಿತನನ್ನು ಕೊಂದಿದ್ದೆವು’ ಎಂದು ಆರೋಪಿಗಳು ಹೇಳಿಕೆ ಕೊಟ್ಟಿದ್ದಾರೆ. ಈ ಗ್ಯಾಂಗ್ ಬಾಂಗ್ಲಾ ದೇಶದಲ್ಲೂ ಒಂದು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದೆ. ಆರೋಪಿಗಳನ್ನು ನೆಲಮಂಗಲ ಪೊಲೀಸರ ವಶಕ್ಕೆ ಕೊಟ್ಟಿದ್ದೇವೆ ಎಂದು ಹೆಣ್ಣೂರು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.