ADVERTISEMENT

ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:59 IST
Last Updated 29 ಜೂನ್ 2016, 19:59 IST

ಬೆಂಗಳೂರು: ‘ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಅದೇ ಕಾಲೇಜಿನಲ್ಲೇ ಮುಂದುವರೆಸಬೇಕು’ ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಆಗ್ರಹಿಸಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಬಿ.ರಾಜಶೇಖರ ಮೂರ್ತಿ, ‘ರಾಜ್ಯದಲ್ಲಿರುವ 411 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,531 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಸೇವಾ ಭದ್ರತೆ ಒದಗಿಸಬೇಕೆಂಬ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಿರಲಿಲ್ಲ. ಮುಖ್ಯಮಂತ್ರಿ ಅವರ ಮನೆ ಮುಂದೆ ಧರಣಿ ನಡೆಸುವ ಕುರಿತು ಪತ್ರಿಕಾಗೋಷ್ಠಿ ಕರೆದಿರುವುದನ್ನು ಗಮನಿಸಿದ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜೂನ್‌ 28ರಂದು ಅತಿಥಿ ಉಪನ್ಯಾಸಕರ ಸೇವೆ ಯನ್ನು ಬಳಸಿಕೊಳ್ಳಲು ಆದೇಶ ಹೊರಡಿಸಿದರು’ ಎಂದರು.

‘ಯುಜಿಸಿ ಮಾರ್ಗಸೂಚಿಗಳ ಪ್ರಕಾರ ವಿದ್ಯಾರ್ಹತೆ ಹೊಂದಿರುವವರಿಗೆ ಆದ್ಯತೆ ನೀಡಬೇಕು. ಈವರೆಗೂ ಅತಿಥಿ ಉಪನ್ಯಾಸಕರಾಗಿ ಅತೀ ಹೆಚ್ಚು ಕಾಲ ಸೇವೆ ಸಲ್ಲಿಸಿದವರಿಗೆ ಆದ್ಯತೆ ನೀಡಬೇಕು ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ. ಯುಜಿಸಿ ಮಾರ್ಗಸೂಚಿ ಪ್ರಕಾರ ಎನ್‌ಇಟಿ, ಕೆ–ಸೆಟ್‌ ಹಾಗೂ ಪಿಎಚ್‌.ಡಿ ಮಾಡಿದವರಿಗೆ ಆದ್ಯತೆ ನೀಡಬೇಕಾಗುತ್ತದೆ. ಈ ನಿಯಮದಿಂದ 10ರಿಂದ 12 ಸಾವಿರ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುತ್ತಾರೆ’ ಎಂದರು.

‘ನಮ್ಮ ಬೇಡಿಕೆಗಳನ್ನು ಮೂರು ದಿನಗಳಲ್ಲಿ ಈಡೇರಿಸದಿದ್ದರೆ ಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಅತಿಥಿ ಉಪನ್ಯಾಸಕರ ಬೇಡಿಕೆಗಳು
2016–17ನೇ ಸಾಲಿಗೆ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್‌ ಮೂಲಕ ಆಯ್ಕೆ ಆದೇಶವನ್ನು ಹಿಂಪಡೆಯಬೇಕು. ಈಗಾಗಲೇ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಮುಂದುವರೆಸಬೇಕು

ವಯೋಮಿತಿ, ಸೇವಾ ಹಿರಿತನ ಪರಿಗಣಿಸಿ ಸೇವೆಯಲ್ಲಿ ವಿಲೀನಗೊಳಿಸಬೇಕು

ಸೇವಾ ವಿಲೀನಕ್ಕೆ ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಲು ತಜ್ಞರ ಸಮಿತಿ ರಚಿಸಬೇಕು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.